More

    ಎಸ್​​ಐ ಡೀಲು, ಎಲ್ರಿಗೂ ಪಾಲು: 50 ಕೋಟಿ ರೂ.ಗೂ ಹೆಚ್ಚು ವಹಿವಾಟು, ಮಾರಾಟಕ್ಕಿಳಿದಿದ್ದ ಏಜೆಂಟ್​ಗಳು..

    ಬೆಂಗಳೂರು: ಪಿಎಸ್​ಐ ನೇಮಕಾತಿಗೆ ಅಂಟಿಕೊಂಡಿರುವುದು ಅಲ್ಲೊಂದು, ಇಲ್ಲೊಂದು ಅಕ್ರಮದ ಕಪು್ಪಚುಕ್ಕೆಯಲ್ಲ. ಬದಲಿಗೆ ಭ್ರಷ್ಟಾಚಾರದ ಕೂಪದಲ್ಲಿ ಉನ್ನತ ಹಂತದ ಅಧಿಕಾರಿಗಳಿಂದ ಕೆಳಸ್ತರದ ಸಿಬ್ಬಂದಿವರೆಗೆ ಎಲ್ಲರೂ ಮಿಂದೆದ್ದಿದ್ದಾರೆ. ಮೇಲಿದ್ದವರ ಅಣತಿ ಮೇರೆಗೆ ಹುದ್ದೆಗಳ ಮಾರಾಟ ನಡೆದಿದೆ ಎಂಬುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.

    ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಸಬ್ ಇನ್​ಸ್ಪೆಕ್ಟರ್ ಅಕ್ರಮ ನೇಮಕಾತಿ ಹಗರಣದಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಾಮಮಾರ್ಗದಲ್ಲಿ ಸಬ್ ಇನ್​ಸ್ಪೆಕ್ಟರ್ ಆಗಲು ಒಪ್ಪಿಕೊಂಡ ಅಭ್ಯರ್ಥಿಯಿಂದ ತಲಾ 40 ರಿಂದ 80 ಲಕ್ಷ ರೂ.ವರೆಗೆ ವಸೂಲಿ ಮಾಡಿದ್ದು, ಪೊಲೀಸ್ ನೇಮಕಾತಿ ವಿಭಾಗದ ಹಿರಿಯ-ಕಿರಿಯ ಅಧಿಕಾರಿ ಮತ್ತು ಸಿಬ್ಬಂದಿ, ಕೆಲ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳಿಗೆ ಪರ್ಸೆಂಟೇಜ್ ನೀಡಲಾಗಿದೆ ಎಂಬ ವಿಚಾರ ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ.

    ಈ ಮಧ್ಯೆ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್​ಗೂ ಸಿಐಡಿ ಕಂಟಕ ಎದುರಾಗಿದೆ. ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಸಂದರ್ಭದಲ್ಲೇ ನೇಮಕಾತಿ ಅವ್ಯವಹಾರ ನಡೆದಿದೆ. ಮುಖ್ಯಸ್ಥರಿಗೆ ಗೊತ್ತಿಲ್ಲದೆ ಇಷ್ಟು ದೊಡ್ಡಪ್ರಮಾಣದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂಬ ವಾದದ ಬೆನ್ನಲ್ಲೇ ಅಮೃತ್ ಪೌಲ್ ಅಕ್ರಮ ನೇಮಕಾತಿಗೆ ಪರೋಕ್ಷವಾಗಿ ಕೈಜೋಡಿಸಿದ್ದಾರೆ ಎಂಬುದಕ್ಕೆ ಸಿಐಡಿ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ ಎಂದು ಗೊತ್ತಾಗಿದೆ.

    ಬಂಧಿತನಾಗಿರುವ ಹೆಡ್​ಕಾನ್​ಸ್ಟೇಬಲ್ ಶ್ರೀಧರ್ ಮನೆಯಲ್ಲಿ 1.70 ಕೋಟಿ ರೂ., ಮಧ್ಯವರ್ತಿ ಕೇಶವಮೂರ್ತಿ ನಿವಾಸದಲ್ಲಿ 30 ಲಕ್ಷ ರೂ. ಸೇರಿ ಒಟ್ಟು ಬೆಂಗಳೂರಿನಲ್ಲೇ 2.1 ಕೋಟಿ ರೂ.ಗೂ ಅಧಿಕ ಹಣ ಜಪ್ತಿ ಮಾಡಲಾಗಿದೆ. 50 ಕೋಟಿ ರೂ. ಅಧಿಕ ಹಣದ ಹರಿವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇನ್ನುಳಿದ ಕೋಟಿ ಕೋಟಿ ಹಣ ಯಾರಿಂದ? ಯಾರ ಖಜಾನೆಗೆ ಸೇರಿದೆ? ಯಾರ್ಯಾರಿಗೆ ಎಷ್ಟು ಪಾಲು ಸಂದಿದೆ? ಎಂಬ ಸತ್ಯ ಹೊರಗೆಳೆಯಲು ತನಿಖೆ ಮುಂದುವರಿದಿದೆ.

    ಸಿಐಡಿ ಮೂಲಗಳ ಪ್ರಕಾರ ನೇಮಕಾತಿ ವಿಭಾಗದ ಅಧಿಕಾರಿಗಳಿಂದ ಗ್ರೀನ್​ಸಿಗ್ನಲ್ ದೊರೆತ ನಂತರ ಮಧ್ಯವರ್ತಿಗಳೇ ಪಿಎಸ್​ಐ ಪರೀಕ್ಷೆ ಅಭ್ಯರ್ಥಿಗಳನ್ನು ಸಂರ್ಪಸಿ, ಆಕಾಂಕ್ಷಿಗಳೊಂದಿಗೆ 40 ರಿಂದ 80 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದಾರೆ. ಆದರೆ, ಕೆಲ ಅಭ್ಯರ್ಥಿಗಳಿಂದ 80 ಲಕ್ಷ ರೂ.ಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗಿದೆ. ಮತ್ತೆ ಕೆಲ ಅಭ್ಯರ್ಥಿಗಳಿಂದ 40 ಲಕ್ಷ ರೂ.ಗಿಂತ ಕಡಿಮೆ ಹಣ ಪಡೆಯಲಾಗಿದೆ. ಆದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಬ್ ಇನ್​ಸ್ಪೆಕ್ಟರ್ ಆದ ಬಳಿಕ ಕೆಲವೊಂದು ಅನುಕೂಲ ಮಾಡಿಕೊಡಬೇಕು ಎಂಬ ಷರತ್ತುಗಳನ್ನು ಅಭ್ಯರ್ಥಿಗಳ ಮುಂದೆ ಇರಿಸಲಾಗಿತ್ತು ಎಂದು ಹೇಳಲಾಗಿದೆ.

    ಅಭ್ಯರ್ಥಿಗಳಿಂದ ಸಂಗ್ರಹಿಸಿದ 50 ಕೋಟಿ ರೂಪಾಯಿಯ ಬಹುಪಾಲು ಮೊತ್ತ ನೇಮಕಾತಿ ವಿಭಾಗ ಹಾಗೂ ಪರೀಕ್ಷಾ ಕೇಂದ್ರಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೇ ಸಂದಾಯವಾಗಿದೆ ಎನ್ನಲಾಗುತ್ತಿದೆ. ಉಳಿದ ಹಣ ಅಭ್ಯರ್ಥಿಗಳನ್ನು ಅಕ್ರಮ ನೇಮಕಾತಿಗೆ ಪುಸಲಾಯಿಸಿದ ರಾಜಕಾರಣಿಗಳು ಹಾಗೂ ಅಭ್ಯರ್ಥಿಗಳನ್ನು ಡೀಲ್​ಗೆ ಒಪ್ಪಿಸಿದ ಮಧ್ಯವರ್ತಿಗಳು ಪಡೆದುಕೊಂಡಿರುವ ಸಂಗತಿ ಸಿಐಡಿ ಅಧಿಕಾರಿಗಳು ನಡೆಸಿದ ತಾಂತ್ರಿಕ ಕಾರ್ಯಾಚರಣೆ ಹಾಗೂ ಬಂಧಿತ ಆರೋಪಿಗಳ ವಿಚಾರಣೆಯಲ್ಲಿ ಬಯಲಾಗಿದೆ.

    ಇನ್ನು ಹಲವರ ಬಂಧನ?: ಸದ್ಯ ಕಲಬುರಗಿ ಹಾಗೂ ಬೆಂಗಳೂರಿಗೆ ಮಾತ್ರ ಸಿಐಡಿ ತನಿಖೆ ಸೀಮಿತವಾಗಿದೆ. ಅಕ್ರಮ ನೇಮಕಾತಿಯಲ್ಲಿ ಇನ್ನೂ ಕೆಲ ಅಧಿಕಾರಿಗಳು ಶಾಮೀಲಾಗಿರುವುದಕ್ಕೆ ಸಿಐಡಿಗೆ ಈಗಾಗಲೇ ಸಾಕ್ಷ್ಯಗಳು ಸಿಕ್ಕಿವೆ. ಬಂಧನಕ್ಕೊಳಗಾಗಿರುವ ಅಭ್ಯರ್ಥಿಗಳ ಜತೆಗೆ ಕೆಲ ಪೊಲೀಸ್ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

    ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಸಿಎಂ

    ಪಿಎಸ್​ಐ ಹುದ್ದೆಗಳ ನೇಮಕಾತಿಗೆ ಸರ್ಕಾರ ಮರುಪರೀಕ್ಷೆ ನಡೆಸಲು ಆದೇಶಿಸಿರುವುದನ್ನು ಖಂಡಿಸಿ ಪಿಎಸ್​ಐ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ನೂರಾರು ಅಭ್ಯರ್ಥಿಗಳು ಫ್ರೀಡಮ್ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಅಹವಾಲು ಆಲಿಸಿದರು. ತನಿಖೆಯಾಗುವವವರೆಗೆ ಸಮಾಧಾನವಾಗಿರಬೇಕು. ನಾವು ಸದ್ಯ ಯಾವುದೇ ಭರವಸೆ ಕೊಡಲು ಸಾಧ್ಯವಿಲ್ಲ. ಮನವಿ ಪತ್ರವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಭಟನಾನಿರತ ಅಭ್ಯರ್ಥಿಗಳಿಗೆ ಭರವಸೆ ಕೊಟ್ಟಿದ್ದಾರೆ. ಪ್ರತಿಭಟನೆಗೆ ಅಭ್ಯರ್ಥಿಗಳ ಪಾಲಕರೂ ಸಾಥ್ ನೀಡಿದರು. ಸಮತಾ ಸೈನಿಕ ದಳ, ದಲಿತಪರ ಸಂಘಟನೆಗಳು, ರೈತಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

    ಸಿದ್ದರಾಮಯ್ಯಗೆ ಮನವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಕೆಲ ಅಭ್ಯರ್ಥಿಗಳು, ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.

    ಅಮೃತ್ ಪೌಲ್ ವಿರುದ್ಧ ಸಾಕ್ಷ್ಯ!?

    ಎಡಿಜಿಪಿ ಅಮ್ರತ್ ಪೌಲ್ ಪ್ರಕರಣದಲ್ಲಿ ಶಾಮೀಲಾಗಿರುವುದಕ್ಕೆ ಕೆಲ ಸಾಕ್ಷ್ಯಗಳು ಸಿಕ್ಕಿವೆ ಎಂದು ಹೇಳಲಾಗಿದೆ. ಪಿಎಸ್​ಐ ನೇಮಕಾತಿಯಲ್ಲಿ ಡೀಲ್ ಕುದುರಿಸಿ ಅಕ್ರಮ ಎಸಗಲು ಕೆಳಹಂತದ ಅಧಿಕಾರಿಗಳಿಗೆ ಅಮೃತ್ ಪೌಲ್ ಪರೋಕ್ಷವಾಗಿ ಸಾಥ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅಕ್ರಮ ನೇಮಕಾತಿ ಪ್ರಕರಣದಲ್ಲಿ ಪೌಲ್ ಪಾತ್ರವೇನು? ಎಂಬ ಬಗ್ಗೆ ಈಗಾಗಲೇ ಬಂಧಿತ ಡಿವೈಎಸ್​ಪಿ ಶಾಂತಕುಮಾರ್ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಶಾಂತ್​ಕುಮಾರ್ ಹೇಳಿಕೆ ಆಧರಿಸಿಯೇ ಸಿಐಡಿ ತಂಡ ಪೌಲ್ ಅವರನ್ನು ಎರಡು ದಿನ ವಿಚಾರಣೆ ನಡೆಸಿದೆ. ಆದರೆ, ಪ್ರಕರಣದಲ್ಲಿ ಶಾಮೀಲಾಗಿಲ್ಲ’ ಎಂದು ಎಡಿಜಿಪಿ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಮರುದಿನ ಸಾಕ್ಷ್ಯ ಮುಂದಿಟ್ಟು ವಿಚಾರಣೆ ನಡೆಸಲು ಸಿಐಡಿ ಸಿದ್ಧತೆ ನಡೆಸಿರುವುದನ್ನು ಅರಿತು ವೈಯಕ್ತಿಕ ಕಾರಣ ಕೊಟ್ಟು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತುಗಳಿವೆ.

    ಡೀಲ್​ಗೆ ಕೋಡ್​ವರ್ಡ್!

    ಬಂಧಿತ ಮಧ್ಯವರ್ತಿಗಳ ಮೊಬೈಲ್​ಗಳನ್ನು ಜಪ್ತಿ ಮಾಡಿ, ಡಿಲೀಟ್ ಆಗಿರುವ ಮಾಹಿತಿ ರಿಟ್ರೀವ್ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ಕಳುಹಿಸಲಾಗಿದೆ. ಅಲ್ಲದೆ, ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳ ವ್ಯವಹಾರ ಪರಿಶೀಲಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಹಣಕಾಸು ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಕೋಡ್​ವರ್ಡ್ ಬಳಸಿ ಡೀಲ್ ಕುದುರಿಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೊಬೈಲ್​ನಲ್ಲಿರುವ ಮಾಹಿತಿ ಬಯಲಾದರೆ ಅಕ್ರಮ ನೇಮಕಾತಿಯ ಇನ್ನಷ್ಟು ಅಸಲಿ ವಿವರಗಳು ಹೊರಬೀಳಲಿವೆ.

    ಉತ್ತರಕುಮಾರರೆಲ್ಲಿ?

    ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಹುದ್ದೆ ಖರೀದಿಸಿದ ‘ಡೀಲ್ ಗಿರಾಕಿ’ಗಳಿಗೆ ಡಿವೈಸ್ ಮೂಲಕ ಉತ್ತರ ಹೇಳಿದ ಪರಿಣತರಿಗೆ ಸಿಐಡಿ ಪೊಲೀಸರೀಗ ಶೋಧ ನಡೆಸಿದ್ದಾರೆ, ವಿಜಯಪುರ, ಸಿಂದಗಿ, ಧಾರವಾಡ, ಬೆಂಗಳೂರು ಮೊದಲಾದ ಕೋಚಿಂಗ್ ಸೆಂಟರ್​ಗಳಲ್ಲಿ ಕೆಲಸ ಮಾಡುತ್ತಿರುವ ಪರಿಣತ ಶಿಕ್ಷಕರು ಅಭ್ಯರ್ಥಿಗಳಿಗೆ ಉತ್ತರ ನೀಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಯಾರ್ಯಾರು ಉತ್ತರಗಳನ್ನು ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷೆ ಬರೆಯುವಂತೆ ಡೀಲ್ ಕುದುರಿಸಿಕೊಂಡು ಅಭ್ಯರ್ಥಿಗಳಿಗೆ ಹೇಳಿದ್ದಾರೆ ಎಂಬುದರ ವಿವರವನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

    ಯಾವ ಹುಡ್ಗಿಯೂ ಮದ್ವೆಗೆ ಒಪ್ಪಲಿಲ್ಲ ಎಂದು ಬೇಸತ್ತ ಯುವಕ ಆತ್ಮಹತ್ಯೆ!

    ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts