ಗ್ರಾಮೀಣ ಜನರಿಗೆ ಶುದ್ಧ ಕುಡಿವ ನೀರು ಪೂರೈಸಿ: ವಿಜಯಪುರ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ

WhatsApp Image 2022-09-22 at 1.35.05 PM
ಬಸವನ ಬಾಗೇವಾಡಿ ತಾಲೂಕಿನ ಯರನಾಳ ಹಾಗೂ ಹುಣಶ್ಯಾಳ ಪಿ.ಬಿ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ಶಿಂಧೆ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ಪ್ರತಿ ಮನೆ-ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಯನ್ನು ವೀಕ್ಷಿಸಿದರು. ಚಂದ್ರಶೇಖರ ಚವ್ಹಾಣ್, ಎಸ್.ಬಿ.ಪಾಟೀಲ, ರವಿ ಗುಂಡಳ್ಳಿ ಮತ್ತಿತರರಿದ್ದರು.
Published on

ವಿಜಯಪುರ : ಗ್ರಾಮೀಣ ಜನರಿಗೆ ನಳಗಳ ಮೂಲಕ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.

ಬಸವನ ಬಾಗೇವಾಡಿ ತಾಲೂಕಿನ ಯರನಾಳ, ಹುಣಶ್ಯಾಳ ಪಿ.ಬಿ ಹಾಗೂ ಹೂವಿನಹಿಪ್ಪರಗಿ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದರು.

ಯರನಾಳ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಗೊಂಡಿರುವ ತೆರೆದ ಬಾವಿ ಕಾಮಗಾರಿ ವೀಕ್ಷಣೆ ಮಾಡಿದರು. ಯರನಾಳ ಹಾಗೂ ಹುಣಶ್ಯಾಳ ಪಿ.ಬಿ ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ಪ್ರತಿ ಮನೆ-ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಯ ನಳಗಳ ಜೋಡಣೆ ಪರಿಶೀಲಿಸಿ ನಳಗಳಲ್ಲಿ ನೀರು ಬರುತ್ತಿರುವುದನ್ನು ಪರೀಕ್ಷಿಸಿದರು.

ಪೈಪ್‌ಲೈನ್‌ಗಾಗಿ ಅಗೆದ ಸಿ.ಸಿ ರಸ್ತೆಯನ್ನು ಮರು ನಿರ್ಮಾಣ ಮಾಡಿರುವುದನ್ನು ಪರಿಶೀಲಿಸಿದರು. ಗ್ರಾಮೀಣ ಜನರು ಕುಡಿಯಲು ನೀರು ಯೋಗ್ಯವಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಲ್ಲಿನ ಗ್ರಾಮಸ್ಥರ ಜೊತೆ ಚರ್ಚಿಸಿದರು.

ಗ್ರಾಮಗಳಲ್ಲಿ ಹಳೆಯ ನಳಗಳ ಮೂಲಕ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. ಈ ಯೋಜನೆ ಜಾರಿ ಬಂದ ಮೇಲೆ ನಮಗೆ ಪ್ರತಿದಿನ ನೀರು ಪೂರೈಕೆಯಾಗುತ್ತಿದೆ. ಮೊದಲಿಗಿಂತ ಶೇ.50ರಷ್ಟು ನೀರು ಉಳಿತಾಯಾಗುತ್ತಿದೆ ಎಂದು ಅಲ್ಲಿನ ಸಾರ್ವಜನಿಕರು ಇದೇ ವೇಳೆ ಪ್ರತಿಕ್ರಿಯಿಸಿದರು.

ನಂತರ ಹೂವಿನ ಹಿಪ್ಪರಗಿ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ ಘನತ್ಯಾಜ್ಯ ವಿಲೇವಾರಿ ಘಟಕ, ಸಮುದಾಯ ಭವನ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕಾಮಗಾರಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಬಸವನ ಬಾಗೇವಾಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ, ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ ಚವ್ಹಾಣ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ, ಯರನಾಳ ಪಿಡಿಒ ರವಿ ಗುಂಡಳ್ಳಿ, ಹುಣಶ್ಯಾಳ ಪಿ.ಬಿ ಮತ್ತು ಹೂವಿನ ಹಿಪ್ಪರಗಿ ಪಿಡಿಒ ಬಿ.ಎಂ.ಬಿಳೇಕುದರಿ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net