More

    ಬೀದಿಬದಿ ವ್ಯಾಪಾರಕ್ಕೆ ಅವಕಾಶ ಕೋರಿ ಬಿಬಿಎಂಪಿ ಮುಂದೆ ಪ್ರತಿಭಟನೆ

    ಬೆಂಗಳೂರು: ಮಹಾನಗರದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೆ ಜೀವನೋಪಾಯಕ್ಕಾಗಿ ನಡೆಸುತ್ತಿರುವ ವಹಿವಾಟನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸ್ಟ್ರೀಟ್ ವೆಂಡರ್ಸ್‌ ಅಸೋಸಿಯೇಷನ್ ಆಶ್ರಯದಲ್ಲಿ ವ್ಯಾಪಾರಿಗಳು ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ಅಸೋಸಿಯೇಷನ್ ಪದಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಬೀದಿ ಬದಿ ಇರುವ ಅಂಗಡಿಗಳನ್ನು ಬಲವಂತವಾಗಿ ತೆರವು ಮಾಡುತ್ತಿದ್ದಾರೆ. ಕೆಲವೆಡೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಿದ್ದರೂ, ಇಲ್ಲದ ನೆಪ ಹೇಳಿ ಒಕ್ಕಲೆಬ್ಬಿಸಲಾಗುತ್ತಿದೆ. ಇದರಿಂದ ಬಡವರು ತಮ್ಮ ಬದುಕು ಕಟ್ಟಿಕೊಳ್ಳಲು ಅವಲಂಬಿಸಿರುವ ಬೀದಿಬದಿ ವ್ಯಾಪಾರದ ಹಕ್ಕನ್ನು ಕಸಿದಂತಾಗಿದೆ ಎಂದು ದೂರಿದರು.

    ಹಕ್ಕಿಗೆ ಮನ್ನಣೆ ಸಿಗಲಿ:

    ಬೀದಿ ವ್ಯಾಪಾರ ಮಾಡುವ ಹಕ್ಕು ಸಂವಿಧಾನದಲ್ಲಿ ನೀಡಲಾಗಿದೆ. ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ -2014 ಜಾರಿಯಲ್ಲಿದೆ. ಈ ಹಕ್ಕನ್ನು ರಕ್ಷಿಸುವಂತೆ ಕೋರ್ಟ್‌ಗಳು ಹಲವು ಬಾರಿ ಆದೇಶ ಮಾಡಿವೆ. ಇದನ್ನು ಬಿಬಿಎಂಪಿ ಗಮನಿಸದೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಷ್ಟೇ ಗಮನ ಹರಿಸಿದೆ. ಪಾಲಿಕೆಯು 2017ರಲ್ಲಿ 20 ಸಾವಿರ ಬೀದಿಬದಿ ವ್ಯಾಪಾರಿಗಳನ್ನು ಪತ್ತೆ ಹಚ್ಚಿ ಗುರುತಿನ ಚೀಟಿ ನೀಡಿತ್ತು. ಸದ್ಯ ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬೀದಿಬದಿ ವ್ಯಾಪಾರ ನಡೆಸುತ್ತಿದ್ದು, ಅವರ ಹಿತರಕ್ಷಣೆ ಮಾಡಬೇಕಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಸಮೀಕ್ಷೆ ಏಕಿಲ್ಲ?:

    ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಪ್ರಕಾರ ಪ್ರತಿ 5 ವರ್ಷಕ್ಕೆ ಒಮ್ಮೆ ಬಿಬಿಎಂಪಿಯು ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ. ಹಿಂದೊಮ್ಮೆ ನೀಡಿದ್ದ ಗುರುತಿನ ಚೀಟಿ, ವ್ಯಾಪಾರದ ಪ್ರಮಾಣಪತ್ರದ ಸಿಂಧುತ್ವ ಅವಧಿ ಮುಗಿದಿದೆ. ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಪ್ರಸ್ತುತ ಪಾಲಿಕೆಯು ಸಮೀಕ್ಷೆಯನ್ನು ಏಕೆ ನಡೆಸುತ್ತಿಲ್ಲ ಎಂದು ಪದಾಧಿಕಾರಿಗಳು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts