More

    ಏಕಲವ್ಯ ನಗರದ ಅಲೆಮಾರಿ ಜನರಿಗೆ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

    ಮೈಸೂರು: ಏಕಲವ್ಯ ನಗರದ ಅಲೆಮಾರಿ ಜನರಿಗೆ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಚೇರಿ ಬಳಿ ಶುಕ್ರವಾರ ಧರಣಿ ನಡೆಸಲಾಯಿತು.


    12 ವರ್ಷಗಳ ಹಿಂದೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ಅಲೆಮಾರಿಗಳು ವಾಸಿಸುತ್ತಿರುವ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಿದೆ. ಅಲ್ಲಿನ ಎಲ್ಲರಿಗೂ ಜೆ ನರ್ಮ್ ಯೋಜನೆಯಡಿ ಪ್ರತ್ಯೇಕವಾಗಿ ನೆಲಮನೆಗಳನ್ನು ನಿರ್ಮಿಸಿಕೊಡುವುದಾಗಿ ವಾಗ್ದಾನ ನೀಡಿ ಶ್ಯಾದನಹಳ್ಳಿ ಸರ್ವೆ ನಂಬರ್ 37ರ ಸರ್ಕಾರಿ ಗೋಮಾಳದ ಜಾಗಕ್ಕೆ ಸ್ಥಳಾಂತರಿಸಿದ್ದರು. ನಂತರ ಜಿಲ್ಲಾಡಳಿತ ಸ್ಥಳಾಂತರಗೊಂಡ ಜಾಗಕ್ಕೆ ಏಕಲವ್ಯ ನಗರವೆಂದು ಘೋಷಿಸಿ ಇಲ್ಲಿನ ಜನರನ್ನು ನಾಗನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಡಿಸಿ ಎಲ್ಲಾ ಸೌಲಭ್ಯಗಳನ್ನು ನೀಡಿದೆ.


    ಶ್ಯಾದನಹಳ್ಳಿ ಸರ್ವೆ ನಂಬರ್ 37ರ 83.08ಎಕರೆ ವಿಸ್ತೀರ್ಣವುಳ್ಳ ಸರ್ಕಾರಿ ಗೋಮಾಳದ ಪೈಕಿ ನಾಗನಹಳ್ಳಿ ಗ್ರಾ.ಪಂ. ಆಶ್ರಯ ನಿವೇಶನಕ್ಕಾಗಿ 5 ಎಕರೆ, ಚರ್ಮ ಕೈಗಾರಿಕೆಗಾಗಿ 2ಎಕರೆ, ವರುಣ ನಾಲೆ ಸೇರಿದಂತೆ ಒಟ್ಟು 16.6 ಎಕರೆ ಭೂಮಿಯನ್ನು ವಿಲೇವಾರಿ ಮಾಡಿ ಉಳಿದ 59.02 ಎಕರೆ ಭೂಮಿಯನ್ನು ಜಿಲ್ಲಾಡಳಿತ ಉಳಿಸಿಕೊಂಡಿದೆ. ಮೈಸೂರು ನಗರದ 10 ಕಿ.ಮಿ ವ್ಯಾಪ್ತಿಗೆ ಒಳಪಡುವ ಸದರಿ ಭೂಮಿಯು ಸೇರಿದಂತೆ ಸರ್ಕಾರಿ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಲ್ಲದೇ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಬಾರದೆಂದು ಜಿಲ್ಲಾಧಿಕಾರಿಗಳ ಆದೇಶವಿದ್ದಾಗಿಯೂ ಸ್ಥಳೀಯ ಕಂದಾಯ ಅಧಿಕಾರಿಗಳು ಪ್ರಭಾವ, ಆಮಿಷಕ್ಕೊಳಗಾಗಿ ಈ ಆದೇಶವನ್ನು ಉಲ್ಲಂಘಿಸಿ ಸರ್ಕಾರಿ ಗೋಮಾಳವಾಗಿದ್ದ ಶ್ಯಾದನಹಳ್ಳಿ ಸರ್ವೆ ನಂಬರ್ 37ರ ಭೂಮಿಯನ್ನು 2014ರಲ್ಲಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.


    ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯೊಂದಿಗೆ ಶಾಮೀಲಾಗಿರುವ ಕೆಲ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಈ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿರುವವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಮೇಲಾಧಿಕಾರಿಗಳಿಗೆ ಸುಳ್ಳು ವರದಿ ನೀಡಿ, ಖಾಸಗಿ ವ್ಯಕ್ತಿಗಳ ಮೂಲಕ ಹೆದರಿಸಿ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಜಾನುವಾರುಗಳೊಂದಿಗೆ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಈ ಜನರನ್ನು ಕಳಪೆ ಗುಣಮಟ್ಟದ ಬಹುಮಹಡಿ ಇರುವ ಇಂದಿರಾಗಾಂಧಿ ಬಡಾವಣೆಗೆ ಸ್ಥಳಾಂತರಿಸದೇ ಅರ್ಜಿ ಸಲ್ಲಿಸಿರುವ ಏಕಲವ್ಯ ನಗರದ ಎಲ್ಲಾ ನಿವಾಸಿಗಳಿಗೂ ನಿವೇಶನದ ಹಕ್ಕು ಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.


    ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts