More

    ಕೃಷಿಮೇಳ| ಮಾರುಕಟ್ಟೆ ನಿಯಂತ್ರಣ ಶಕ್ತಿಗಳಿಂದ ರೈತರ ರಕ್ಷಣೆ ಅಗತ್ಯ: ಗೃಹ ಸಚಿವ ಬಸವರಾಜ ಬೊಮ್ಮಾಯಿ

    ಅಂತಾರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆ ನಿಯಂತ್ರಣ ಶಕ್ತಿಗಳಿಂದ ನಮ್ಮ ರೈತರನ್ನು ರಕ್ಷಿಸಲು ಸಮರ್ಪಕ ನೀತಿ ರೂಪಿಸುವ ಅಗತ್ಯವಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವ ವ್ಯಾಪಾರ ಒಪ್ಪಂದದಲ್ಲಿನ ಇಪ್ಪತ್ತನೇ ಅಧ್ಯಾಯಗಳನ್ನು ಯಾರೂ ಓದದೆ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಅದರಲ್ಲಿನ ಕೃಷಿ ಒಪ್ಪಂದ ಅಧ್ಯಾಯವನ್ನು ಅರ್ಥೈಸಿಕೊಂಡರೆ ದೇಶದ ಕೃಷಿಕರನ್ನು ಸಮಸ್ಯೆಯಿಂದ ಹೊರತರಲು ಏನು ಮಾಡಬಹುದು ಎಂದು ಆಲೋಚಿಸಲು ಸಾಧ್ಯವಾಗುತ್ತದೆ. ಮುಕ್ತ ಕೃಷಿ ಒಪ್ಪಂದದ ಪರಿಣಾಮವಾಗಿ ವಿದೇಶಗಳಿಂದ ತೆರಿಗೆ ರಹಿತವಾಗಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಇದರಿಂದ ಸ್ಥಳೀಯ ಉತ್ಪನ್ನಗಳಿಗೆ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಾರೆ. ಇದನ್ನು ಅರ್ಥಮಾಡಿಕೊಂಡು ಪರಿಹಾರ ರೂಪಿಸಿದರೆ ಮಾತ್ರವೇ ಕೃಷಿಗೆ ಭವಿಷ್ಯವಿದೆ ಎಂದರು.

    ಭಾರತಕ್ಕಿಂತಲೂ ಶೇ.4 ಹೆಚ್ಚುವರಿ ಭೂಪ್ರದೇಶ ಹೊಂದಿರುವ ಅಮೆರಿಕದಲ್ಲಿ ನಮ್ಮ ಶೇ.25 ಜನಸಂಖ್ಯೆ ಮಾತ್ರವಿದೆ. ಅದರಲ್ಲಿ ಶೇ.6 ಮಾತ್ರವೇ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಶೇ.60 ಸಹಾಯಧನ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಅಮೆರಿಕಕ್ಕಿಂತಲೂ ನಾಲ್ಕು ಪಟ್ಟು ಜನಸಂಖ್ಯೆಯಿದ್ದು, ಶೇ.60 ಜನರು ಕೃಷಿ ಅವಲಂಬಿತರಾಗಿದ್ದಾರೆ. ಆದರೆ ಸರ್ಕಾರದಿಂದ ಶೇ.6 ಸಹಾಯಧನ ಮಾತ್ರವೇ ದೊರೆಯುತ್ತಿದೆ. ಹೀಗಿರುವಾಗ ಭಾರತದ ರೈತರು ಅಮೆರಿಕ ಕೃಷಿಕರೊಂದಿಗೆ ಪೈಪೋಟಿ ನಡೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಹಸಿರು ಕ್ರಾಂತಿಯಿಂದ ದೇಶದ ಕೃಷಿ ಬೆಳವಣಿಗೆ ಕಂಡಿದೆ. ಆದರೆ ಅದರಿಂದ ರೈತನಿಗೆ ಯಾವುದೇ ಲಾಭವೂ ದೊರೆಯಲಿಲ್ಲ. ಇಂದಿಗೂ ಅವನ ಜೇಬು ಖಾಲಿಯೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ರೈತ ಕೇವಲ ಉತ್ಪಾದಕ ಮಾತ್ರವಲ್ಲದೆ ಗ್ರಾಹಕನೂ ಆಗಿದ್ದಾನೆ. ಹೀಗಾಗಿ ಆತ ಎರಡು ರೀತಿಯ ಸಂಕಷ್ಟವನ್ನು ಅನುಭವಿಸುತ್ತಾನೆ. ಇದರಿಂದ ಅವರನ್ನು ಹೊರತರುವ ಪ್ರಯೋಗಗಳು ನಡೆದರೂ ಅವು ಕೃಷಿ ವಿಶ್ವವಿದ್ಯಾಲಯದಿಂದ ರೈತರ ಹೊಲವನ್ನು ತಲುಪುತ್ತಿಲ್ಲ. ನಿಯಂತ್ರಿತ ವಾತಾವರಣದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳು ಹೊಲದ ಮುಕ್ತ ವಾತಾವರಣದಲ್ಲಿ ವಿಫಲವಾಗುತ್ತಿದೆ. ಈ ಮಾತಿನಿಂದ ಕೆಲವರಿಗೆ ಸಿಟ್ಟು ಬರುತ್ತದೆಯಾದರೂ ಸತ್ಯವನ್ನು ಹೇಳಲೇಬೇಕಾಗಿದೆ ಎಂದರು.

    ರೈತರು ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಿದೆ. ನೀರಿನ ಯತೇಚ್ಛ ಬಳಕೆ ಕೃಷಿಗೆ ಒಳ್ಳೆಯದಲ್ಲ. ಕಬಿನಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ 2009ರಲ್ಲಿಯೇ ನಾನು ಮಣ್ಣು ಆರೋಗ್ಯ ಕಾರ್ಡ್ ವಿತರಿಸಿದೆ. ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ಕಬ್ಬು ಇಳಿವರಿಯೂ ಹೆಚ್ಚಾಗಿತ್ತು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಲಾಭವಿದೆ ಎನ್ನುವುದನ್ನು ಕೆಎಂಎಫ್​ನ ಯಶಸ್ಸು ಸಾಬೀತು ಮಾಡಿದೆ ಎಂದು ತಿಳಿಸಿದರು.

    ದುರಾದೃಷ್ಟವಶಾತ್ ಸ್ವಾತಂತ್ರ್ಯಾ ನಂತರ ನಮ್ಮ ದೇಶದಲ್ಲಿ ಕೃಷಿ ವಲಯಕ್ಕೆ ಅಗತ್ಯ ಹಣಕಾಸು ವಿನಿಯೋಗ ಆಗಲಿಲ್ಲ. ಇಂದಿಗೂ ರೈತನಿಗೆ ಬೆಳೆ ಸಾಲ ಹೊರತುಪಡಿಸಿ ಬೇರೆ ಹೂಡಿಕೆ ವ್ಯವಸ್ಥೆಯಿಲ್ಲ. ಒಂದು ವರ್ಷದಲ್ಲಿ ಬೆಳೆ ಸಾಲ ತೀರಿಸದಿದ್ದರೆ ಆತ ಸುಸ್ತಿದಾರನಾಗುತ್ತಾನೆ. ಆದರೆ ಕೈಗಾರಿಕೆಗಳಿಗೆ ದೊಡ್ಡ ಮಟ್ಟದ ಹೂಡಿಕೆ, ಬಡ್ಡಿ ರಿಯಾಯಿತಿ, ತೀರುವಳಿ ಅವಧಿ ಸಡಿಲಿಕೆಯಂತಹ ಸೌಲಭ್ಯಗಳನ್ನು ಬ್ಯಾಂಕ್​ಗಳು ಒದಗಿಸುತ್ತವೆ. ಕೃಷಿ ಬೆಳವಣಿಗೆಗೆ ಮೂಲಸೌಕರ್ಯ ಒದಗಿಸಬೇಕಾದ ನಬಾರ್ಡ್ ಪ್ರತಿವರ್ಷ ತನ್ನ ಬಜೆಟ್ ಕಡಿತಗೊಳಿಸುತ್ತಿದೆ. ರಾಜ್ಯ ಸರ್ಕಾರವೂ ನಬಾರ್ಡ್ ಮೇಲೆಯೇ ಅವಲಂಬಿತವಾಗಿದೆ ಎಂದು ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು. ಕೃಷಿಯ ಸಂಕಷ್ಟ ಪರಿಸ್ಥಿತಿ ಬದಲಿಸಲು ಹೂಡಿಕೆ, ಸಬ್ಸಿಡಿ ಮತ್ತು ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಗಳು ಬದಲಾಗಬೇಕು. ಕೃಷಿ ವಲಯ ಶೇ.1 ಆರ್ಥಿಕ ಪ್ರಗತಿ ಸಾಧಿಸಿದರೆ ಉತ್ಪಾದನಾ ವಲಯ ಶೇ.4, ಸೇವಾ ವಲಯ ಶೇ.10 ಬೆಳವಣಿಗೆ ಸಾಧಿಸುತ್ತದೆ ಎಂದರು.

    ರೈತರ ಸಮಸ್ಯೆಗೆ ಸ್ಥಳದಲ್ಲೇ ಸ್ಪಂದಿಸಿದ ಸಚಿವ ಬೊಮ್ಮಾಯಿ

    ಸಚಿವ ಬಸವರಾಜ ಬೊಮ್ಮಾಯಿ ಭಾಷಣ ಮುಗಿಸಿ, ವೇದಿಕೆಯಿಂದ ನಿರ್ಗಮಿಸಲು ಸಿದ್ಧರಾಗುತ್ತಿದ್ದಾಗ ಎದ್ದು ನಿಂತ ಕೆ.ಆರ್.ನಗರ ತಾಲೂಕಿನ ಕೃಷಿಕರೊಬ್ಬರು ಪಹಣಿಯ ಬೆಳೆ ಕಾಲಂ ನಮೂದಿನಲ್ಲಿ ಆಗಿರುವ ತಪ್ಪಿನಿಂದ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂಬಂಧಿಸಿದ ತಹಸೀಲ್ದಾರ್​ರೊಂದಿಗೆ ಮಾತನಾಡಿ ಬೆಳೆ ಕಾಲಂ ಭರ್ತಿಯಲ್ಲಿ ಆಗಿರುವ ಲೋಪ ಸರಿಪಡಿಸುವುದಾಗಿ ಭರವಸೆ ನೀಡಿ, ರೈತರ ಮಾಹಿತಿ ಪಡೆದುಕೊಂಡರು. ಸರ್ಕಾರದಿಂದ ರೈತರಿಗೆ ನೀಡುವ ಸಬ್ಸಿಡಿ, ಬೆಳೆ ಪರಿಹಾರದ ಹಣವನ್ನು ಸಾಲಕ್ಕೆ ಕಡಿತ ಮಾಡದಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts