More

    ಕೊಳ್ಳೇಗಾಲದಲ್ಲಿ ಸಂಚಾರ ಠಾಣೆ ತೆರೆಯಲು ಪ್ರಸ್ತಾವನೆ

    ಕೊಳ್ಳೇಗಾಲ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸ್ ಠಾಣೆ ತೆರೆಯುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ತಾಲೂಕಿನಲ್ಲಿ ಅಪಘಾತ ಪ್ರಕರಣಗಳೂ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಹಾದು ಹೋಗಿರುವ 209 ಹೆದ್ದಾರಿಯಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದರೆ ಟ್ರಾಫಿಕ್ ಪೊಲೀಸ್ ಠಾಣೆ ಅತ್ಯಗತ್ಯ ಎಂಬುದು ಪ್ರಜ್ಞಾವಂತರ ಸಲಹೆ.

    ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಕಾಲಕ್ರಮೇಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೊಳ್ಳೇಗಾಲ ವಾಣಿಜ್ಯ ಚಟುವಟಿಕೆಯ ಕೇಂದ್ರ ಬಿಂದು ಆಗಿರುವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಜನರು ವ್ಯಾಪಾರ-ವಹಿವಾಟಿಗೆ ಇಲ್ಲಿಗೆ ಆಗಮಿಸುವುದು ಸಾಮಾನ್ಯ. ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಮೈಸೂರು, ಮಂಡ್ಯ ಇತರ ಜಿಲ್ಲೆಗಳ ಗ್ರಾಹಕರಿಗೂ ಕೊಳ್ಳೇಗಾಲದೊಂದಿಗೆ ನಂಟು ಇರುವುದರಿಂದ ಪಟ್ಟಣದ ಪ್ರಮುಖ ರಸ್ತೆಗಳು ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಇದೆಲ್ಲದರ ನಡುವೆ ಜನಸಂಖ್ಯೆ ಬೆಳೆಯುತ್ತಿರುವುದರಿಂದ ವಾಹನಗಳ ಸಂಚಾರವೂ ಹೆಚ್ಚುತ್ತಿದೆ. ಆದರೆ ವಿಪರ್ಯಾಸವೆಂದರೆ ಪಟ್ಟಣದ ಪ್ರಮುಖ ರಸ್ತೆಗಳು ಮಾತ್ರ ವಿಸ್ತರಣೆಯಾಗುತ್ತಿಲ್ಲ ಹಾಗೂ ಅಭಿವೃದ್ಧಿಯೂ ಕಂಡಿಲ್ಲ. ಇದು ಟ್ರಾಫಿಕ್ ಸಮಸ್ಯೆ ತಲೆದೋರಲು ಮುಖ್ಯ ಕಾರಣವಾಗಿದೆ.

    ಮುಖ್ಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ ಕಿರಿದಾಗಿದ್ದು, ಇಲ್ಲಿ ಪ್ರಮುಖ ವಾಣಿಜ್ಯ ಮಳಿಗೆಗಳಿವೆ. ಜನ ಸಾಮಾನ್ಯರು ಖರೀದಿಯಲ್ಲಿ ಸದಾ ತೊಡಗಿರುತ್ತಾರೆ. ಈ ನಡುವೆ ಡಾ.ವಿಷ್ಣುವರ್ಧನ್ ರಸ್ತೆ ಸೇರಿದಂತೆ ಅಂಬೇಡ್ಕರ್ ಹಾಗೂ ರಾಜ್ ಕುಮಾರ್ ರಸ್ತೆಯ ಬದಿಯಲ್ಲಿ ತಳ್ಳುಗಾಡಿಗಳ ವ್ಯಾಪಾರಿಗಳ ಸಂಖ್ಯೆ ಹೆಚ್ಚಿರುವ ಕಾರಣ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಇತ್ತ ನಗರಸಭೆ ತಳ್ಳುಗಾಡಿಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಿ ಅವಕಾಶ ಮಾಡದಿರುವುದೂ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

    ಅಂತೆಯೇ ಚಿನ್ನದ ಅಂಗಡಿ ಬೀದಿ, ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆ, ಜಯ ಇನ್‌ಸ್ಟಿಟ್ಯೂಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಅಧಿಕವಾಗಿರುತ್ತದೆ. ಬೈಕ್, ಕಾರು, ಆಟೋಗಳನ್ನು ರಸ್ತೆಯಲ್ಲಿಯೇ ಎಲ್ಲೆಂದರಲ್ಲಿ ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಜಯ ಇನ್‌ಸ್ಟಿಟ್ಯೂಟ್ ರಸ್ತೆಯಲ್ಲಿ ಗೂಡ್ಸ್ ವಾಹನಗಳು ಮಧ್ಯಾಹ್ನದವರೆಗೂ ಸಿಮೆಂಟ್, ಕಬ್ಬಿಣ ಇಳಿಸುವುದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಸಪಡಬೇಕಿದೆ.

    ಇನ್ನು ಪಟ್ಟಣ ಪೊಲೀಸರು ವಾರದಲ್ಲಿ ಒಂದೆರಡು ದಿನ ರಸ್ತೆಗಿಳಿದು ತಪಾಸಣೆ ಕಾರ್ಯಾಚರಣೆ ಮಾಡಿ ಅಡ್ಡಾದಿಡ್ಡಿ ನಿಲ್ಲಿಸುವ ವಾಹನ ಸವಾರರು ಹಾಗೂ ರಸ್ತೆಯಲ್ಲಿಯೇ ನಿಂತು ವ್ಯಾಪಾರಕ್ಕಿಳಿಯುವ ತಳ್ಳುಗಾಡಿಗಳ ವ್ಯಾಪಾರಿಗಳಿಗೆ ಸೂಚನೆ ನೀಡುತ್ತಾರೆ. ಆದರೆ, ನಂತರ ಯಥಾಸ್ಥಿತಿ ಮುಂದುವರಿದು ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸದ ಪೊಲೀಸ್ ವ್ಯವಸ್ಥೆ ವಿರುದ್ಧ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಕೊಳ್ಳೇಗಾಲ ಬೆಳೆಯುತ್ತಿರುವ ಪಟ್ಟಣವಾಗಿರುವುದರಿಂದ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಪ್ರತ್ಯೇಕ ವ್ಯವಸ್ಥೆ ಆಗಬೇಕಿದ್ದು, ಸಂಚಾರ ಪೊಲೀಸ್ ಠಾಣೆ ಆಗಬೇಕಿದೆ ಎಂಬ ಕೂಗು ಬಲವಾಗಿ ಕೇಳಿ ಬಂದಿದೆ.

    ಹೆದ್ದಾರಿ (209)ಯಲ್ಲಿ ಹೆಚ್ಚುತ್ತಿರುವ ಅಪಘಾತ: ಪಟ್ಟಣದಲ್ಲಿ ಹಾದುಹೋಗಿರುವ ಹೆದ್ದಾರಿ (209)ಯಲ್ಲಿ ಬೆಂಗಳೂರಿನಿಂದ ದಿಂಡಿಗಲ್ ಹಾಗೂ ಮೈಸೂರು, ಚಾಮರಾಜನಗರ, ಮಲೆ ಮಹದೇಶ್ವರ ಬೆಟ್ಟ ಕಡೆಗೆ ತೆರಳಲು ಸಾವಿರಾರು ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಇತ್ತೀಚೆಗೆ ಹೆದ್ದಾರಿ(209) ಮಾರ್ಗದಲ್ಲಿ ಸಂಭವಿಸುತ್ತಿರುವ ಅಪಘಾತದಿಂದ ಸಾವು-ನೋವುಗಳು ಹೆಚ್ಚಾಗುತ್ತಿದೆ. ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲೂ ಅಪಘಾತ ಪ್ರಕರಣ ಹೆಚ್ಚಾಗಿದೆ. ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಈ ಅವಘಡಗಳು ಸಂಭವಿಸುತ್ತಿದೆ. ಆದ್ದರಿಂದ ಟ್ರಾಫಿಕ್ ಪೊಲೀಸ್ ಠಾಣೆ ತೆರೆದರೆ ಅಪಘಾತ ಪ್ರಕರಣಗಳ ಬಿರುಸಿಗೆ ಬ್ರೇಕ್ ಹಾಕಬಹುದು ಎಂಬುದು ಸಾರ್ವಜನಿಕರ ಅನಿಸಿಕೆ.

    ಬಸ್ ಸಂಚಾರಕ್ಕೆ ತೊಂದರೆ: ಪಟ್ಟಣದ ಬಸ್‌ನಿಲ್ದಾಣಕ್ಕೆ ಬಸ್‌ಗಳು ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಪ್ರವೇಶಿಸಬೇಕು. ಈ ರಸ್ತೆಯಲ್ಲಿ ಅಡ್ಡಾದಿಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಬಸ್ ಚಾಲಕರು ಪರದಾಡುವ ಪರಿಸ್ಥಿತಿ ಇದೆ. ಬಸ್ ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಆರ್‌ಒ ಫ್ಲಾಂಟ್‌ನಿಂದ ನಿಲ್ದಾಣ ತಲುಪಲು ಬಸ್ ಚಾಲಕರು ಪ್ರಯಾಸ ಪಡಬೇಕಿದೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

    ಸಾವಿನ ಪ್ರಕರಣ: ರಸ್ತೆ ಅಪಘಾತದಲ್ಲಿ 2022ರಲ್ಲಿ 8, 2023 ರಲ್ಲಿ 6, 2024ರ ವರ್ಷದ ಆರಂಭದಲ್ಲೆ 3 ಸಾವು ಸಂಭವಿಸಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023ರಲ್ಲಿ 17 ಅಪಘಾತ ಪ್ರಕರಣದಲ್ಲಿ 18 ಜನರು ಮೃತಪಟ್ಟಿದ್ದಾರೆ. 2024 ವರ್ಷದಲ್ಲಿ ಇಲ್ಲಿಯವರಿಗೆ ಸುಮಾರು 9 ಪ್ರಕರಣಗಳಾಗಿದ್ದು 12 ಜನರು ಮೃತಪಟ್ಟಿದ್ದಾರೆ.

    ಸ್ಥಳ ಗುರುತಿಸಲು ಮುಂದಾಗಿರುವ ಇಲಾಖೆ: ವಾಹನ ದಟ್ಟಣೆ ತಪ್ಪಿಸಲು, ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಕೊಳ್ಳೇಗಾಲದಲ್ಲಿ ಸಂಚಾರ ಪೊಲೀಸ್ ಠಾಣೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಂತೆ ಡಿವೈಎಸ್ಪಿ ಎಂ.ಧರ್ಮೇಂದ್ರ ಠಾಣೆ ತೆರೆಯಲು ಸೂಕ್ತ ಸ್ಥಳ ಗುರುತು ಮಾಡಲು ಮುಂದಾಗಿದ್ದಾರೆ.

    2017-18ರಲ್ಲೇ ಕೊಳ್ಳೇಗಾಲಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಅಗತ್ಯವಿದೆ ಎಂಬ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಅದಕ್ಕೆ ಬೇಕಾದ ಸೂಕ್ತ ಮಾನದಂಡಗಳಿಲ್ಲದ ಕಾರಣ ರಿಜೆಕ್ಟ್ ಆಗಿತ್ತು. ಹೆದ್ದಾರಿ (209)ಆದ ಬಳಿಕ ಅಪಘಾತ ಹೆಚ್ಚಾಗಿದೆ. ಅದಲ್ಲದೆ ಚಾಮರಾಜನಗರಕಿ ್ಕಂತಲೂ ಕೊಳ್ಳೇಗಾಲ ಟೌನ್ ದೊಡ್ಡದಿದೆ. ಸಂಚಾರ ಪೊಲೀಸ್ ಠಾಣೆ ಅಗತ್ಯವಿದ್ದು, ಈ ಸಂಬಂಧ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಸದ್ಯ ವಾಹನದಟ್ಟಣೆ ನಿಯಂತ್ರಿಸಲು ಕ್ರಮವಹಿಸಲಾಗುವುದು.
    ಪದ್ಮಿನಿ ಸಾಹು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts