More

    ಆಸ್ತಿ ಸಮೀಕ್ಷೆಗೆ ಚಾಲನೆ, ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಯುಕ್ತ ಅಕ್ಷಿ ಶ್ರೀಧರ್ ಮಾಹಿತಿ

    ಮಂಗಳೂರು: ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಡಿಜಿಟಲ್ ವೇದಿಕೆಯಡಿ ಆ್ಯಪ್ ಮೂಲಕ ಸಾರ್ವಜನಿಕರ ಆಸ್ತಿಗಳ ಮರುಮೌಲ್ಯ ಮಾಪನ ಮಾಡಲು ಉದ್ದೇಶಿಸಿದೆ. ಈಗಾಗಲೇ ಪೈಲೆಟ್ ಮಾದರಿಯಲ್ಲಿ ಒಂದು ತಿಂಗಳಿಂದ ಕೆಲವು ವಾರ್ಡ್‌ಗಳಲ್ಲಿ ಈ ಕಾರ್ಯ ನಡೆಯುತ್ತಿದ್ದು, ಫೆ.1ರಿಂದ ಎಲ್ಲ ವಾರ್ಡ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾಹಿತಿ ನೀಡಿದರು.

    ಪಾಲಿಕೆಯ ಮಂಗಳಾಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಸದಸ್ಯರಿಗೆ ಸಮೀಕ್ಷೆ ಕುರಿತು ವಿವರಿಸಿದರು.
    ಪಾಲಿಕೆಯಿಂದ ಅಭಿವೃದ್ಧಿಪಡಿಸಲಾದ ಆ್ಯಪ್ ಮೂಲಕ ಎಂಪಿಡಬ್ಲುೃ ಸಿಬ್ಬಂದಿ ಈ ಕೆಲಸ ನಿರ್ವಹಿಸಲಿದ್ದಾರೆ. ಆಸ್ತಿ ತೆರಿಗೆಗೆ ಸಂಬಂಧಿಸಿ ಬಹುತೇಕರು ಪಾಲಿಕೆಗೆ ತಪ್ಪು ಮಾಹಿತಿ ನೀಡಿ, ತೆರಿಗೆ ವಂಚನೆ ಮಾಡುತ್ತಿದ್ದಾರೆ. ಸರ್ವೇ ನಡೆಸಿದರೆ ಪಕ್ಕಾ ಮಾಹಿತಿ ದೊರೆಯಲಿದೆ. ಕಳೆದ ವರ್ಷ ಆಸ್ತಿ ತೆರಿಗೆ ಕಟ್ಟಿದ ರಸೀದಿ ಪತ್ರ ಸಿಬ್ಬಂದಿಗೆ ತೋರಿಸಬೇಕು. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ 40-45 ದಿನದಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ವೈಯಕ್ತಿಕ ಮನೆಗಳನ್ನು ಮೊದಲ ಆದ್ಯತೆಯಾಗಿ ಸರ್ವೇ ನಡೆಸಲಾಗುವುದು. ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿ, ಆಯಾ ಬಿಲ್ಡರ್‌ಗಳಿಂದ ಮಾಹಿತಿ ಪಡೆಯಲಾಗುವುದು ಎಂದರು.

    ಎಂಪಿಡಬ್ಲುೃ ಸಿಬ್ಬಂದಿಗೆ ಇದು ಹೆಚ್ಚುವರಿ ಹೊರೆಯಾಗಲಿದೆ ಎಂದು ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ಅಭಿಪ್ರಾಯಪಟ್ಟರು. ಉತ್ತರಿಸಿದ ಆಯುಕ್ತರು, ಎಂಪಿಡಬ್ಲುೃ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯ ಸಂಪೂರ್ಣ ಪರಿಚಯವಿದೆ. 4-5 ನಿಮಿಷದಲ್ಲಿ ಸಮೀಕ್ಷೆ ಮುಗಿಯುತ್ತದೆ. ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ನೀರಿನ ಬಿಲ್ ವ್ಯವಸ್ಥೆ ಸರಿಪಡಿಸಿ: ಒಂದು ವರ್ಷದಿಂದ ನೀರಿನ ಬಿಲ್ ವಿತರಣೆ ಅವ್ಯವಸ್ಥೆಯಿಂದ ಕೂಡಿದೆ. ಮೂರು ತಿಂಗಳಿಗೊಮ್ಮೆ ಜನರಿಗೆ ಬಿಲ್‌ಸಿಗುತ್ತಿದ್ದು, ದೊಡ್ಡ ಮೊತ್ತ ಪಾವತಿ ಹೊರೆಯಾಗುತ್ತಿದೆ. ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಶಶಿಧರ ಹೆಗ್ಡೆ ಆಗ್ರಹಿಸಿದರು. ನೀರಿನ ಅದಾಲತ್‌ಗೆ ಅರ್ಜಿ ಸಲ್ಲಿಸಿ, ಅಂತಿಮವಾಗುವವರೆಗೆ ಸಂಪರ್ಕ ಕಡಿತಗೊಳಿಸಬಾರದು ಎಂದು ಲ್ಯಾನ್ಸ್‌ಲಾಟ್ ಪಿಂಟೋ ಮನವಿ ಮಾಡಿದರು. ಮೇಯರ್ ದಿವಾಕರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಉಪಮೇಯರ್ ವೇದಾದತಿ ಸ್ಥಾಯಿ ಸಮಿತಿ ಸದಸ್ಯರಾದ ಶರತ್ ಕುಮಾರ್, ಪೂರ್ಣಿಮಾ, ಕಿರಣ್ ಕುಮಾರ್, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

    ಒತ್ತಾಯದ ಮದುವೆ !: ಸ್ಮಾರ್ಟ್ ಸಿಟಿ ನಿರ್ದೇಶಕರ ಪಟ್ಟಿಯಲ್ಲಿಯಲ್ಲಿ ಮಾಜಿ ಮೇಯರ್ ಭಾಸ್ಕರ್ ಕೆ. ಅವರ ಹೆಸರನ್ನು ಅವರಲ್ಲಿ ಕೇಳದೆ ಸೇರಿಸಲಾಗಿದೆ ಎಂದು ಅಬ್ದುಲ್ ಲತೀಫ್ ವಿಷಯ ಪ್ರಸ್ತಾಪಿಸಿದರು. ನಿರ್ದೇಶಕರ ಸ್ಥಾನಕ್ಕೆ ಪ್ರತಿಪಕ್ಷದ ಕಡೆಯಿಂದ ಹೆಸರು ನೀಡುವಂತೆ ಮೇಯರ್ ಕೇಳಿದ್ದಕ್ಕೆ ವಿನಯ್‌ರಾಜ್ ಹೆಸರನ್ನು ಬರವಣಿಗೆಯಲ್ಲಿ ನೀಡಲಾಗಿತ್ತು, ಆದರೆ ಭಾಸ್ಕರ್ ಅವರ ಹೆಸರನ್ನು ಸೇರಿಸಿದ್ದು ಯಾಕೆ ಎಂದು ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ಪ್ರಶ್ನಿಸಿದರು. ಉತ್ತರಿಸಿದ ಮೇಯರ್, ಹಿರಿಯ ಸದಸ್ಯ, ಅನುಭವಿ, ಹಿಂದಿನ ಅವಧಿಯಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವದ ಮೇಲೆ ಅವರ ಹೆಸರು ನೀಡಲಾಗಿದೆ ಎಂದು ಉತ್ತರಿಸಿದರು. ಪ್ರತಿಯಾಗಿ ‘ವರನಿಗೆ ಮನಸ್ಸಿಲ್ಲ, ಒತ್ತಾಯದ ಮದುವೆ ಮಾಡಿಸಬೇಡಿ’ ಎಂದು ಶಶಿಧರ ಹೆಗ್ಡೆ ಹೇಳಿದಾಗ ಸದನ ನಗೆಗಡಲಲ್ಲಿ ತೇಲಾಡಿತು. ಅವರ ಆರೋಗ್ಯವೂ ಸರಿಯಿಲ್ಲ ಎಂದು ಇನ್ನೋರ್ವ ಸದಸ್ಯ ತಿಳಿಸಿದರು. ಇದು, ಇಷ್ಟಕ್ಕೇ ಮುಗಿಯಲಿಲ್ಲ, ಕೆಲ ಹೊತ್ತಿನ ಬಳಿಕ 20-21ನೇ ಸಾಲಿಗೆ ಸದಸ್ಯರಿಗೆ 25 ಲಕ್ಷ ರೂ. ಅನುದಾನ ನೀಡುವಂತೆ ಭಾಸ್ಕರ್ ಅವರು ಮೇಯರ್‌ಗೆ ಮನವಿ ಮಾಡಿದರು. ಮೇಯರ್ ಉತ್ತರಿಸದಿದ್ದಾಗ, ಬೇಗ ಅನುದಾನ ಪ್ರಕಟಿಸಿ, ಭಾಸ್ಕರ್ ಮುಂದಿನ ಎಂಎಲ್‌ಎ ಅಭ್ಯರ್ಥಿ ಎಂದು ಶಶಿಧರ ಹೆಗ್ಡೆ ತಿಳಿಸಿದರು. ತಕ್ಷಣ ಆಡಳಿತ ಪಕ್ಷದ ಸದಸ್ಯರೊಬ್ಬರು ಎಂಎಲ್‌ಗೆ ನಿಲ್ಲಬೇಕಾದರೆ ಆರೋಗ್ಯ ಸರಿಯಾಯಿತೇ ಎಂದು ಪ್ರಶ್ನಿಸಿದರು. ಮತ್ತೊಮ್ಮೆ ಸಭೆಯಲ್ಲಿ ನಗು. ಮೇಯರ್ ದಿವಾಕರ್ ಅವರ ಕೊನೇ ಸಭೆಯಾದುದರಿಂದ ಎಲ್ಲ ಸದಸ್ಯರು ರಿಲಾಕ್ಸ್ ಮೂಡ್‌ನಲ್ಲಿದ್ದುದು ಕಂಡು ಬಂತು.

    ನಾಮನಿರ್ದೇಶಿತರ ಪ್ರಮಾಣವಚನ: ಪಾಲಿಕೆಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಕೆ.ರಾಧಾಕೃಷ್ಣ, ರಮೇಶ್ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ರಾಜೇಶ್ ಸಾಲ್ಯಾನ್ ಪ್ರಮಾಣವಚನ ಸ್ವೀಕರಿಸಿದರು. ಮೇಯರ್ ಪ್ರಮಾಣವಚನ ಬೋಧಿಸಿದರು.

    ಪ್ರಮುಖ ಚರ್ಚೆ ವಿಷಯ: ಪಾರ್ಕಿಂಗ್ ಸಮಸ್ಯೆ ಕುರಿತಂತೆ ಮುಂದಿನ ವಾರ ಸಭೆ ನಡೆಸುವುದಾಗಿ ಮೇಯರ್ ಭರವಸೆ.
    – ಗಮನಕ್ಕೆ ತಾರದೆ ವಾಲ್‌ಮ್ಯಾನ್‌ಗಳನ್ನು ಕೆಲಸದಿಂದ ತೆಗೆಯದಂತೆ ಅಧಿಕಾರಿಗಳಿಗೆ ಸೂಚನೆ.
    – ಪಂಪ್‌ವೆಲ್ ಬಸ್‌ನಿಲ್ದಾಣ ಮೀಸಲು ಸ್ಥಳಕ್ಕೆ ಕಂಪೌಂಡ್ ನಿರ್ಮಿಸಲು ವ್ಯವಸ್ಥೆ.
    – ಉದ್ದಿಮೆ ಪರವಾನಗಿ ಆ್ಯಪ್ ಐಒಎಸ್, ವಿಂಡೋಸ್‌ನಲ್ಲೂ ಲಭ್ಯವಾಗುವಂತೆ ಅಭಿವೃದ್ಧಿ. ಪ್ರಸ್ತುತ ಅಫ್‌ಲೈನ್‌ನಲ್ಲೂ ಅರ್ಜಿಸಲ್ಲಿ ಅವಕಾಶ.
    – ಬೈಕಂಪಾಡಿ, ಫಲ್ಗುಣಿ ನದಿಗೆ ಕಾರ್ಖಾನೆಗಳ ತ್ಯಾಜ್ಯ ನೀರು ಸೇರುವ ಕುರಿತಂತೆ ಪರಿಸರ ಇಂಜಿನಿಯರ್‌ಗಳ ಮೂಲಕ ಪರಿಶೀಲನೆ.
    – ಅನುಮತಿಯಿಲ್ಲದೆ ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಸಿರುವುದನ್ನು ವಾರದೊಳಗೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts