More

    33 ಕೋಟಿ ರೂ. ಯೋಜನೆಗೆ ಅಸ್ತು, ಕುಡಿಯುವ ನೀರಿನ ಕ್ರಿಯಾಯೋಜನೆಗೆ ಸರ್ಕಾರದ ಸಮ್ಮತಿ

    | ಶಿವರಾಜ ಎಂ.

    ಬೆಂಗಳೂರು ಗ್ರಾಮಾಂತರ: ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಪಂ ರೂಪಿಸಿದ್ದ ನೀರಿನ ಯೋಜನೆಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಮುದ್ರೆ ಬಿದ್ದಿದ್ದು, ಜಿಪಂ ಸಲ್ಲಿಸಿದ 33 ಕೋಟಿ ರೂ.ಅನುದಾನದ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದೆೆ.

    ಮೊದಲ ಹಂತದಲ್ಲಿ ಸುಮಾರು 11 ಕೋಟಿ ರೂ. ಬಿಡುಗಡೆಯಾಗಲಿದ್ದು, ಹಂತ-ಹಂತವಾಗಿ ಉಳಿದ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮಾ.8ರಂದು ಬಜೆಟ್ ಇರುವುದಿಂದ ಪರಿಶೀಲನೆ ನಡೆಯಬೇಕಿದ್ದು, ಬಳಿಕ ಹಣ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಟಾಸ್ಕ್​ಪೋರ್ಸ್ ಸಭೆಯಲ್ಲಿ ತೀರ್ವನ: ಬೇಸಿಗೆಯಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಪಂ ಜಿಲ್ಲೆಯ ನಾಲ್ಕೂ ತಾಲೂಕುಗಳ ಶಾಸಕರ ನೇತೃತ್ವದಲ್ಲಿ ಆಯಾ ತಾಲೂಕುಗಳ ತಹಸೀಲ್ದಾರ್ ಹಾಗೂ ಜಿಲ್ಲಾ ಕುಡಿವ ನೀರಿನ ವಿಭಾಗದ ಅಧಿಕಾರಿಗಳ ತಂಡದೊಂದಿಗೆ ಟಾಸ್ಕ್​ಪೋರ್ಸ್ ರಚಿಸಲಾಗಿದ್ದು, ಟಾಸ್ಕ್​ಪೋರ್ಸ್​ನಲ್ಲಿ ಚರ್ಚೆ ನಡೆಸಿ 33 ಕೋಟಿ ರೂ.ಅನುದಾನದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದೀಗ ಆರ್​ಡಿಪಿಆರ್​ನಿಂದ ಅನುಮೋದನೆ ದೊರೆತಿದ್ದು, ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ ಎಂದು ಜಿಪಂ ತಿಳಿಸಿದೆ.

    ಎಲ್ಲಕ್ಕೂ ಅನುದಾನ ಮೀಸಲು: ಬೊರ್​ವೆಲ್ ಕೊರೆಯುವುದು, ಪಂಪ್​ವೋಟಾರ್ ಖರೀದಿ ಹಾಗೂ ದುರಸ್ತಿ, ಕೇಸಿಂಗ್ ಪೈಪ್, ಪ್ಯಾನಲ್​ಬೋರ್ಡ್ ಸೇರಿ ಕುಡಿವ ನೀರಿನ ಪೂರೈಕೆಗೆ ಅಗತ್ಯವಿರುವ ಎಲ್ಲ ಪರಿಕರಗಳಿಗೂ ಈ ಅನುದಾನವನ್ನೇ ಬಳಕೆ ಮಾಡಲಾಗುವುದು. ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಿದ್ದು, ಅನುದಾನ ಸದ್ಭಳಕೆಗೆ ಜಿಪಂ ಮುಂದಾಗಿದೆ. ಆಯಾ ಗ್ರಾಪಂ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಎಲ್ಲಿಯೂ ಕುಡಿವ ನೀರಿಗೆ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳಲ್ಲಿ ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ತಾಕೀತು ಮಾಡಿದ್ದಾರೆ.

    ಡಿಸಿ ಹಣ ಬಿಡುಗಡೆಯ ಭರವಸೆ: ಜಿಪಂ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಕುಡಿಯುವ ನೀರಿನ ಟಾಸ್ಕ್​ಪೋರ್ಸ್ ಸಮಿತಿ ಸಭೆಯಲ್ಲಿ ಹಾಜರಿದ್ದ ನಾಲ್ಕೂ ತಾಲೂಕುಗಳ ಶಾಸಕರು ಕುಡಿವ ನೀರಿನ ಸಮಸ್ಯೆ ಎದುರಿಸಲು ಅನುದಾನ ಕೊರತೆ ಬಗ್ಗೆ ದನಿ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿ ಕೆ.ಶ್ರೀನಿವಾಸ್, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಟಾಸ್ಕ್​ಪೋರ್ಸ್ ಸಮಿತಿ ಸಭೆ ನಡೆಸಿ ಶೀಘ್ರ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

    ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ 33 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರ್​ಡಿಪಿಆರ್​ನಿಂದ ಅನುಮೋದನೆ ದೊರೆತಿದೆ. ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಪಂ ಅಗತ್ಯ ಸಿದ್ಧತೆ ಕೈಗೊಂಡಿದೆ.

    | ಎಂ.ಆರ್.ರವಿಕುಮಾರ್, ಜಿಪಂ ಸಿಇಒ

    ಜಿಪಂಗೆ ಬಿಡುಗಡೆಯಾಗುತ್ತಿರುವ ಅನುದಾನ ಹಾಗೂ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿರುವ 10 ಕೋಟಿ ರೂ. ಎಸ್​ಡಿಆರ್​ಎಫ್ ನಿಧಿ ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುವುದು. ಇಷ್ಟು ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    | ವಿ.ಪ್ರಸಾದ್, ಜಿಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts