More

    ಆಸ್ತಿ ಕರ ತುಂಬಲೂ ಈಗ ಪರದಾಟ

    ಹುಬ್ಬಳ್ಳಿ: ಇದು ಮಹಾನಗರ ಪಾಲಿಕೆಯಲ್ಲಿನ ದೊಡ್ಡ ವಿಪರ್ಯಾಸ. ಒಂದೆಡೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿಸದ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡುತ್ತಿದ್ದಾರೆ. ಇನ್ನೊಂದೆಡೆ, ಆಸ್ತಿ ಕರ ತುಂಬಿಸಿಕೊಳ್ಳಿ ಎಂದು ಆಶ್ರಯ ಬಡಾವಣೆ ನಿವಾಸಿಗಳು ಹೇಳುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

    ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರ ಹಾಗೂ ಬೀಡಿ ಕಾರ್ವಿುಕರ ಪ್ಲಾಟ್ ಮಧ್ಯೆ ಇರುವ ಬಿಡನಾಳ 2ನೇ ಹಂತದ ಆಶ್ರಯ ಬಡಾವಣೆಯ ಸುಮಾರು 120 ಮನೆಗಳ ಫಲಾನುಭವಿಗಳು ಆಸ್ತಿ ತೆರಿಗೆ ತುಂಬಲು ರೆಡಿ ಇದ್ದಾರೆ. ಈ ಸಂಬಂಧ ಕಳೆದ 2 ವರ್ಷಗಳ ಅವಧಿಯಲ್ಲಿ ನಿವಾಸಿಗಳು 2-3 ಬಾರಿ ಪಾಲಿಕೆ ಆಯುಕ್ತರನ್ನೇ ಭೇಟಿ ಮಾಡಿದ್ದಾರೆ. ಆದರೆ, ಮಹಾನಗರ ಪಾಲಿಕೆ ಮೂಲ ಫಲಾನುಭವಿಗಳು ಹಾಗೂ ನಕಲಿ ಫಲಾನುಭವಿಗಳ ಗೊಂದಲದಿಂದ ಹೊರ ಬಂದಿಲ್ಲ.

    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 17 ಆಶ್ರಯ ಬಡಾವಣೆಗಳಿದ್ದು 7165 ಫಲಾನುಭವಿಗಳಿದ್ದಾರೆ. ಇದರಲ್ಲಿ 4-5 ಬಡಾವಣೆಗಳ ಫಲಾನುಭವಿಗಳ ಹೆಸರಿನಲ್ಲಿ ಆಸ್ತಿ ಗುರುತು (ಪಿಐಡಿ) ಸಂಖ್ಯೆ ಸೃಜಿಸಲಾಗಿದ್ದು, ಅವರೆಲ್ಲ ತೆರಿಗೆ ಪಾವತಿಗೆ ಒಳಪಟ್ಟಿದ್ದಾರೆ. ಪಿಐಡಿ ಸೃಜಿಸದಿರುವ ಬಡಾವಣೆಗಳಲ್ಲಿ ಬಿಡನಾಳ 2ನೇ ಹಂತ ಸೇರಿದೆ.

    ‘ಆಸ್ತಿ ತೆರಿಗೆ ತುಂಬಲು ನಾವು ರೆಡಿ ಇದ್ದೇವೆ. ಆಸ್ತಿ ತೆರಿಗೆ ಎಷ್ಟು ಆಗುತ್ತದೆ ಎಂದು 2-3 ಬಾರಿ ಪಾಲಿಕೆ ಆಯುಕ್ತರನ್ನೇ ಭೇಟಿ ಮಾಡಿ ಕೇಳಿದ್ದೇವೆ. ಮನವಿ ಕೊಟ್ಟಿದ್ದೇವೆ. 10-15 ವರ್ಷಗಳ ಬಾಕಿ ಎಂದು 10-20 ಸಾವಿರ ರೂ. ಆಸ್ತಿ ತೆರಿಗೆಯನ್ನು ಒಮ್ಮೆಗೇ ತುಂಬಿ ಎಂದು ಹೇಳಿದರೆ, ನಮ್ಮಂಥ ಬಡ ಜನರಿಂದ ಹೇಗೆ ಸಾಧ್ಯ’ ಎಂದು ಬಿಡ್ನಾಳ ಆಶ್ರಯ ನಿವಾಸಿಗಳು ಪ್ರಶ್ನಿಸುತ್ತಾರೆ.

    2015ರಲ್ಲಿಯೇ ಹು-ಧಾ ಮಹಾನಗರ ಪಾಲಿಕೆ ಮೂಲ ಫಲಾನುಭವಿಗಳ ಸಮೀಕ್ಷೆ ನಡೆಸಿತ್ತು. ಮೂಲ ಫಲಾನುಭವಿಗಳಿಂದ ಖರೀದಿಸಿದವರಿಗೆ ಹಾಗೂ ಬಾಡಿಗೆ ಆಧಾರದಲ್ಲಿ ವಾಸಿಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಿತ್ತು. ಈ ವಿಷಯದಲ್ಲಿ ಈಗಲೂ ಪಾಲಿಕೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

    ಆಶ್ರಯ ಸಮಿತಿ ಕರಾಮತ್ತು: ಆಶ್ರಯ ಫಲಾನುಭವಿಗಳ ಹೆಸರಿನಲ್ಲಿ ಪಿಐಡಿ ಸೃಜಿಸುವಲ್ಲಿ ಆಶ್ರಯ ಸಮಿತಿ ಹಕ್ಕು ಚಲಾಯಿಸಿರುವುದು ಕಂಡು ಬಂದಿದೆ. ಶಾಸಕರೇ ಅಧ್ಯಕ್ಷರಾಗಿರುವ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಶ್ರಯ ಸಮಿತಿಯು ಪಿಐಡಿ ಸೃಜಿಸಲು ಕ್ರಮ ಕೈಗೊಳ್ಳುತ್ತಿದೆ. ನಮ್ಮ ಒಪ್ಪಿಗೆ ಇಲ್ಲದೇ ನೀವು ಏನೂ ಮಾಡಬಾರದು ಎಂದು ಆಶ್ರಯ ಸಮಿತಿಯು, ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆಯಂತೆ. ಇದರಿಂದ ನಕಲಿ ಫಲಾನುಭವಿಗಳು ಮೂಲ ಫಲಾನುಭವಿಗಳಾಗಿ ಪರಿವರ್ತನೆಯಾದ ಸಾಕಷ್ಟು ನಿರ್ದೇಶನಗಳಿವೆಯೆಂಬ ಆರೋಪ ಕೇಳಿಬಂದಿದೆ.

    ಸಾಲ ಮಾಡಿ ಹಣ ತುಂಬಿ ಇಂದೋ-ನಾಳೆ ತಮ್ಮ ಹೆಸರಿನಲ್ಲಿ ಆಶ್ರಯ ಮನೆ ಪಿಐಡಿ ಸೃಷ್ಟಿಯಾಗಬಹುದೆಂಬ ನಿರೀಕ್ಷೆಯಲ್ಲಿರುವ ಮೂಲ ಫಲಾನುಭವಿಗಳು ಕಾಯುವ ಪರಿಸ್ಥಿತಿ ನಿರ್ವಣವಾಗಿದೆ. ಅದೇ ರಾಜಕೀಯ ಬೆಂಬಲ-ಪುಢಾರಿಗಳ ಸಹಕಾರದಿಂದ ನಕಲಿ ಫಲಾನುಭವಿಗಳು ಅಸಲಿಯಾಗುತ್ತಿದ್ದಾರೆ.

    ಪಾಲಿಕೆಯ ಆಶ್ರಯ ವಿಭಾಗದಿಂದ ಯಾರಿಗೆ ನಿಯಮಬದ್ಧವಾಗಿ ಆಶ್ರಯ ಮನೆ ಹಂಚಿಕೆಯಾಗಿವೆಯೋ ಅವರೇ ಮೂಲ ಫಲಾನುಭವಿಗಳು. ಮೂಲ ಫಲಾನುಭವಿಗಳಿಂದ ಖರೀದಿ ಮಾಡಿದವರು, ಬಾಡಿಗೆ ಆಧಾರದಲ್ಲಿ ವಾಸ ಮಾಡುತ್ತಿರುವವರು ನಿಜವಾದ ಫಲಾನುಭವಿಗಳಲ್ಲ. ಅವಳಿ ನಗರದಲ್ಲಿ ಮೊದಲ ಬಾರಿಗೆ 2002-03ರಲ್ಲಿ ಆಶ್ರಯ ಮನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು.

    15 ವರ್ಷಗಳಿಂದ ಆಶ್ರಯ ಮನೆಯಲ್ಲಿ ವಾಸ ಮಾಡಿರುವ ಮೂಲ ಫಲಾನುಭವಿಗಳಿಗೆ ಪಿಐಡಿ ಖಾತೆ ಮಾಡಿಕೊಡಲು ಸಮಸ್ಯೆ ಇಲ್ಲ. ಎಷ್ಟೋ ಮೂಲ ಫಲಾನುಭವಿಗಳು ಬೇರೆಯವರಿಗೆ ಮಾರಾಟ ಮಾಡಿ ಹೋಗಿ ಬಿಟ್ಟಿದ್ದಾರೆ. ಅಂಥವರಿಗೆ ಖಾತೆ ಮಾಡಿಕೊಡುವುದು ನಿಯಮಬಾಹಿರ. ಬಿಡನಾಳ ಆಶ್ರಯ ನಿವಾಸಿಗಳು ನನ್ನನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದು ಗಮನಕ್ಕೆ ಇದೆ. ಪರಿಶೀಲನೆ ನಡೆಸಿ ಮೂಲ ಫಲಾನುಭವಿಗಳನ್ನು ಗುರುತಿಸುವಂತೆ ವಲಯ ಕಚೇರಿ (ನಂ. 11) ಅಧಿಕಾರಿಗಳಿಗೆ ಸೂಚಿಸಿದ್ದೇನೆ.
    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts