More

    ಸಮಸ್ಯೆ ತಿಳಿಸಿ, ರೈತರಿಗೆ ಕಿರಿಕಿರಿ ಮಾಡಬೇಡಿ

    ಧಾರವಾಡ: ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯು ಕೃಷಿ ಪೂರಕ ಚಟುವಟಿಕೆ, ಹೈನುಗಾರಿಕೆ ಮೂಲಕ ಉತ್ಪಾದನೆ ಚಟುವಟಿಕೆ ಹೆಚ್ಚಿಸಲು ವಿಪುಲ ಅವಕಾಶ ಹೊಂದಿದೆ. ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ, ರೈತರಿಗೆ ಕಿರಿಕಿರಿ ಮಾಡಬೇಡಿ ಎಂದು ಪಶು ಸಂಗೋಪನೆ, ವಕ್​ ಹಾಗೂ ಹಜ್ ಸಚಿವ ಪ್ರಭು ಚವ್ಹಾಣ ಹೇಳಿದರು.

    ನಗರದ ರಾಯಾಪುರದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲೆಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಜನರ ಮನೆ ತಲುಪಬೇಕು. ಪಶುವೈದ್ಯರು ಹಾಗೂ ಎಲ್ಲ ಹಂತದ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಬಗ್ಗೆ ವಾಟ್ಸ್​ಆಪ್ ಮೂಲಕ ಮಾಹಿತಿ ಸಲ್ಲಿಸಬೇಕು. ರೈತರು, ಪಶು ಸಾಕಾಣಿಕೆದಾರರಿಗೆ ಸಕಾಲಕ್ಕೆ ಔಷಧ ಒದಗಿಸಬೇಕು. ಚೀಟಿ ಬರೆದು ಖಾಸಗಿಯಾಗಿ ಖರೀದಿಸಲು ಹೇಳಬಾರದು. ಜಾನುವಾರು ಲಸಿಕೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ದೂರುಗಳಿದ್ದು, ನಿಷ್ಕಾಳಜಿ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪರಮೇಶ್ವರ ನಾಯಕ್ ಇಲಾಖೆಯ ಕಾರ್ಯಕ್ರಮಗಳು ಹಾಗೂ ಪ್ರಗತಿಯ ಮಾಹಿತಿ ನೀಡಿದರು. ಧಾರವಾಡ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯ್ಕ, ಕೆಎಂಎಫ್ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಮಂಜು ನಾಯಕ್, ಇತರರಿದ್ದರು.

    ಜಾನುವಾರು ಸಂವರ್ಧನಾ ಕೇಂದ್ರಕ್ಕೆ ಭೇಟಿ: ಕೃಷಿ ವಿ.ವಿ.ಬಳಿ ಇರುವ ಪಶುಸಂಗೋಪನೆ ಇಲಾಖೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಸಚಿವ ಪ್ರಭು ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘನೀಕೃತ ವೀರ್ಯ ನಳಿಕೆ ಉತ್ಪಾದನೆ ಪ್ರಯೋಗಾಲಯಕ್ಕೂ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಪಶುಗಳ ಆರೈಕೆ, ಶೆಡ್ ಸ್ವಚ್ಛತೆಯನ್ನು ಸಹ ಪರಿಶೀಲಿಸಿದರು.

    ಹೈಕಮಾಂಡ್ ನಿರ್ಣಯಕ್ಕೆ ಬದ್ಧ: ‘ನಾನು ವಲಸೆ ಬಂದ ಮನುಷ್ಯ ಅಲ್ಲ. 30 ವರ್ಷದಿಂದ ಪಕ್ಷದಲ್ಲಿದ್ದೇನೆ. ಮನೆಯಿಂದ ಸೀದಾ ಬಿಜೆಪಿಗೆ ಬಂದವನು. ಸಚಿವ ಸ್ಥಾನ ಕೈ ತಪ್ಪಲಿದೆ ಎಂದು ಕೇವಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಏನೇ ಆದರೂ ಹೈಕಮಾಂಡ್ ನಿರ್ಣಯಕ್ಕೆ ಬದ್ಧ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು. ಧಾರವಾಡ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರತೆ ಇಲ್ಲದಂತೆ ಕೆಲಸ ಮಾಡುತ್ತಿದ್ದೇನೆ. ಹೈಕಮಾಂಡ್ ಮೇಲೆ ಭರವಸೆ ಇದೆ. ಸಚಿವ ಸ್ಥಾನದಿಂದ ಕೈ ಬಿಡುವ ಕುರಿತು ಸಿಎಂ, ಹೈಕಮಾಂಡ್ ಮತ್ತು ರಾಜ್ಯಾಧ್ಯಕ್ಷರು ಏನೂ ಹೇಳಿಲ್ಲ ಎಂದರು.

    ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಲಿದೆ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಲಿದೆ. ಕೋವಿಡ್ ಕಾರಣದಿಂದ ತಡವಾಗಿದೆ. ಗುಜರಾತ್, ಉತ್ತರಪ್ರದೇಶಕ್ಕೆ ಹೋಗಿ ಅಲ್ಲಿ ಯಾವ ರೀತಿ ಕಾಯ್ದೆ ಜಾರಿಯಲ್ಲಿದೆ ಎಂದು ಅಧ್ಯಯನ ಮಾಡಿಕೊಂಡು ರಾಜ್ಯದಲ್ಲಿ ಅದೇರೀತಿ ಜಾರಿಗೆ ತರಲಾಗುವುದು. ಗೋಹತ್ಯೆ ನಿಷೇಧ ಕಾಯ್ದೆ ಅಜೆಂಡಾದಲ್ಲಿದ್ದು, ನೂರಕ್ಕೆ ನೂರರಷ್ಟು ಜಾರಿಗೆ ಬರುವುದು ಖಚಿತ. ಯಾರಿಗೂ ತೊಂದರೆಯಾಗದಂತೆ ಕಾಯ್ದೆ ಜಾರಿಗೆ ತರಲಾಗುವುದು ಎಂದು ಸಚಿವ ಚವ್ಹಾಣ ತಿಳಿಸಿದರು.

    ಖಾಲಿ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ: ಪಶು ಇಲಾಖೆಯ 18 ಸಾವಿರ ಹುದ್ದೆಗಳಲ್ಲಿ 9 ಸಾವಿರ ಹುದ್ದೆಗಳು ಖಾಲಿ ಇವೆ. ಇಲಾಖೆಗೆ ಅಗತ್ಯ ಪಶು ವೈದ್ಯರ ನೇಮಕಾತಿ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.

    ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ 29.60 ಲಕ್ಷ ರೂ.ದಲ್ಲಿ ನೂತನ ಪಶು ಆಸ್ಪತ್ರೆ ಉದ್ಘಾಟಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್​ನಿಂದಾಗಿ ಪಶು ವೈದ್ಯರ ನೇಮಕಾತಿ ತಾತ್ಕಾಲಿಕವಾಗಿ ತಡೆಯಲಾಗಿದೆ. ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಿದ್ದಾಗಿ ತಿಳಿಸಿದರು.

    ಬೇರೆ ಇಲಾಖೆಯಲ್ಲಿ ನಿಯೋಜನೆಯಲ್ಲಿರುವ ಪಶು ವೈದ್ಯರನ್ನು ಮಾತೃ ಇಲಾಖೆಗೆ ಕರೆದುಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಸಚಿವನಾಗಿ ಅಧಿಕಾರ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿಯೇ ಈ ಕುರಿತು ಕ್ರಮ ಕೈಗೊಂಡಿದ್ದಾಗಿ ಹೇಳಿದರು. ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಸಮೋಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ನಿಗದಿತ ಕಾಲದಲ್ಲಿ ನೀಡಲು ವಾರ್ ರೂಮ್ ರಚಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ರೈತರು 1962 ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹದು ಎಂದರು.

    ರಾಜ್ಯದಲ್ಲಿ 15 ಪಶು ಸಂಜೀವಿನಿ ವಾಹನಗಳನ್ನು ವಿವಿಧ ಜಿಲ್ಲೆಗಳಿಗೆ ನೀಡಲಾಗಿದೆ. ಇನ್ನೂ 15 ವಾಹನ ಖರೀದಿ ಮಾಡಲಾಗುವುದು. ಅಥಣಿ ಪಶು ವೈದ್ಯಕೀಯ ಕಾಲೇಜ್ ಅನ್ನು ಶೀಘ್ರ ಆರಂಭಿಸಲಾಗುವುದು.

    | ಪ್ರಭು ಚವ್ಹಾಣ ಪಶುಸಂಗೋಪನೆ ಸಚಿವ

    ==========

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts