More

    ಶುಲ್ಕ ವಸೂಲಿಗೆ ನಿಂತ ಖಾಸಗಿ ಶಾಲೆಗಳು ; ಮೌನವಹಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು

    ತುಮಕೂರು: ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸುವಂತೆ ಪಾಲಕರನ್ನು ಒತ್ತಾಯಿಸಬಾರದೆಂಬ ಸರ್ಕಾರದ ಆದೇಶ ಪಾಲಿಸದ ಪ್ರತಿಷ್ಠಿತ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಆರಂಭಿಸಿವೆ.

    ಜಿಲ್ಲೆಯ ಪ್ರತಿಷ್ಠಿತ ಅನುದಾನರಹಿತ ಖಾಸಗಿ ಶಾಲೆಗಳು ಆನ್‌ಲೈನ್ ಶಾಲೆಗಳನ್ನು ಆರಂಭಿಸಿವೆ. ಇದನ್ನೇ ನೆಪವಾಗಿಟ್ಟುಕೊಂಡು ಏಪ್ರಿಲ್ ಅಂತ್ಯದಿಂದಲೇ ಮುಂದಿನ ಶೈಕ್ಷಣಿಕ ವರ್ಷದ ಮೊದಲ ಕಂತಿನ ಶಾಲಾ ಶುಲ್ಕ ಪಾವತಿಸುವಂತೆ ಕರೆ ಮಾಡಿ ಒತ್ತಾಯಿಸುತ್ತಿರುವುದು ಕಂಡುಬಂದಿದೆ.

    ಶುಲ್ಕದ ಹೊರೆ: ಮಧ್ಯಮ ವರ್ಗದವರು, ಬಡ ವರ್ಗದವರು ಸಂಕಷ್ಟಕ್ಕೆ ಸಿಲುಕಿರುವಾಗಲೇ ಶುಲ್ಕ ಕಟ್ಟುವಂತೆ ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳು ಒತ್ತಡ ಹೇರುತ್ತಿವೆ. ಮೇ ಆರಂಭದಲ್ಲೇ ಮೊದಲ ಕಂತು ಪಾವತಿಸುವಂತೆ ಶಿಕ್ಷಕರ ಮೂಲಕ ಕರೆ ಮಾಡಿ ಮನವಿ ಮಾಡುತ್ತಿರುವುದು ಪಾಲಕರನ್ನು ಕಂಗಾಲಾಗಿಸಿದೆ.

    ಶಿಕ್ಷಣ ಇಲಾಖೆ ಜಾಣಮೌನ: ಕರೊನಾ ಕಷ್ಟದ ವೇಳೆ ಶುಲ್ಕ ಪಾವತಿಸುವಂತೆ ಒತ್ತಡ ಹೇರಬಾರದೆಂಬ ಸರ್ಕಾರದ ಸುತ್ತೋಲೆ ಇದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ. ಈ ಬಗ್ಗೆ ಲಿಖಿತ ದೂರು ನೀಡಿದರೆ ಕ್ರಮಕೈಗೊಳ್ಳುತ್ತೇವೆಂಬ ಶಿಕ್ಷಣ ಇಲಾಖೆ ಅಧಿಕಾರಿಗಳ ಉತ್ತರವು ಪಾಲಕರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಸರ್ಕಾರದ ಸುತ್ತೋಲೆ ಹಿಡಿದುಕೊಂಡು ಮೌನವಹಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಇನ್ನಾದರೂ ಸುಲಿಗೆ ಮಾಡಲು ಹೊರಟಿರುವ ಶಿಕ್ಷಣ ಸಂಸ್ಥೆಗಳ ನಡೆಗೆ ಬ್ರೇಕ್ ಹಾಕಬೇಕೆಂಬುದು ಪಾಲಕರ ಒತ್ತಾಯವಾಗಿದೆ.

    ಜೀವನ ನಿರ್ವಹಣೆ ಕಷ್ಟವೆನಿಸಿರುವ ಕರೊನಾ ಪರಿಸ್ಥಿತಿಯಲ್ಲಿ ಶುಲ್ಕ ವಸೂಲಿಗೆ ಒತ್ತಡ ಹೇರದಂತೆ ಎಲ್ಲ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಎಲ್ಲ ಬಿಇಒಗಳಿಗೂ ಸುತ್ತೋಲೆಯಂತೆ ಶುಲ್ಕ ವಸೂಲಿ ದೂರುಗಳು ಬಂದರೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
    ಎಂ.ಆರ್.ಕಾಮಾಕ್ಷಿ ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ

    ಶುಲ್ಕ ವಸೂಲಿ ಬಗ್ಗೆ ಲಿಖಿತ ದೂರು ನೀಡಿದರೆ ಕ್ರಮವಹಿಸಲಾಗುವುದು. ಪಾಲಕರಿಗೆ ಒತ್ತಡ ಹೇರುವುದು ಕಂಡುಬಂದಲ್ಲಿ ಅಂತಹ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗುವುದು.
    ಹನುಮಾ ನಾಯ್ಕ ಬಿಇಒ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts