More

    ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆ, ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ಕಠಿಣ ಶಿಕ್ಷೆ

    ಗದಗ: ಲೋಕಸಭಾ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಯೋಗದ ಮಾರ್ಗಸೂಚಿಯ ಅಡಿಯಲ್ಲಿ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಚುನಾವಣಾ ಪ್ರಚಾರದ ಸಾಮಗ್ರಿಗಳ ಮುದ್ರಣ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ವೈಶಾಲಿ ಎಂ.ಎಲ್. ಅವರು ಹೇಳಿದರು.  

    ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜರುಗಿದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಮುದ್ರಕರು ಕಾರ್ಯನಿರ್ವಹಿಸಬೇಕು. ಜೊತೆಗೆ ಎಲ್ಲರೂ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

    ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಆಯೋಗವು ನೀಡಿರುವ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಆರು ತಿಂಗಳ ಜೈಲು ವಾಸ ಅಥವಾ ಎರಡು ಸಾವಿರ ರೂ.ಗಳ ದಂಡ ಇಲ್ಲವೇ ಎರಡೂ ಶಿಕ್ಷೆಗಳನ್ನು ವಿಧಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಪ್ರಿಂಟಿಂಗ್ ಪ್ರೆಸ್ ಮಾಲೀಕರೆಲ್ಲರೂ ಆಯೋಗದ ನಿರ್ದೇಶನಗಳಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣವನ್ನು ಮಾಡಬೇಕೆಂದು ಸೂಚಿಸಿದರು.

    ಕರಪತ್ರ, ಬಿತ್ತಿ ಪತ್ರ , ಮುದ್ರಣ ಮಾಡುವಾಗ ಅವುಗಳಲ್ಲಿ ಪ್ರಿಂಟಿಂಗ್ ಪ್ರೆಸ ಹೆಸರುಹಾಗೂ ಮುದ್ರಿತ ಪ್ರತಿಗಳ ಸಂಖ್ಯೆ ನಮೂದಿಸುವುದನ್ನು ಮರೆಯಬಾರದು.  ಮುದ್ರಕರು ಆಯೋಗವು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರಕಾಶಕರಿಂದ ವಿವರಗಳನ್ನು ಪಡೆದು ಮುದ್ರಣ ಕಾರ್ಯ ಕೈಗೊಳ್ಳಬೇಕು.
    ಕರಪತ್ರ, ಪೋಸ್ಟರ್ಸ ಅಲ್ಲದೇ ಶಾಲು, ಕ್ಯಾಪ್, ಬಟ್ಟೆ ಮೇಲೆ ಪಕ್ಷದ ಹೆಸರು, ಚಿಹ್ನೆ ಹಾಗೂ ಅಭ್ಯರ್ಥಿಗಳ ಫೋಟೋ ಮುದ್ರಿಸುವ ಬಗ್ಗೆಯೂ ನಿಗಾವಹಿಸಲಾಗುತ್ತಿದೆ. ಎಲ್ಲಿಯೂ ಸಹ ಚುನಾವಣಾ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಸ್ಪಷ್ಟಪಡಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಚುನಾವಣಾ ಶಾಖೆಯ ತಹಶೀಲ್ದಾರ ಪ್ರಕಾಶ ನಾಶಿ,  ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರಾದ ಎಂ.ಎಸ್.ಮೇಲ್ಮನಿ, ಎಸ್.ಪಿ.ಸಾವಳಗಿಮಠ, ವಿನಾಯಕ ಸಾಲಿಮಠ ಸೇರಿದಂತೆ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts