More

    ಇಂದಿನಿಂದ ವಿದ್ಯಾಕಾಶಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ

    ಮಂಜುನಾಥ ಅಂಗಡಿ/ವಿಕ್ರಮ ನಾಡಿಗೇರ

    ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತಿದೆ. ಜಾತಿ, ಭಾಷೆಯ ಚೌಕಟ್ಟು ಮೀರಿ ಯುವ ಭಾರತ ಕಟ್ಟುವ ಸಂಕಲ್ಪದೊಂದಿಗೆ ದೇಶದ ನಾನಾ ಮೂಲೆಯಿಂದ ಯುವಕರ ದಂಡೇ ಇಲ್ಲಿಗೆ ಹರಿದು ಬಂದಿದೆ. 26ನೇ ರಾಷ್ಟ್ರೀಯ ಯುವ ಜನೋತ್ಸವ ಇಂಥ ಸುಮಧುರ ಬೆಸುಗೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಅವಳಿ ನಗರದಲ್ಲಿ ಜ. 12ರಿಂದ 16ರ ವರೆಗೆ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದೆ. ಈ ಅಭೂತಪೂರ್ವ ಕಾರ್ಯಕ್ರಮವನ್ನು ಗುರುವಾರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಉದ್ಘಾಟಿಸಲಿದ್ದಾರೆ.

    ಕೇಂದ್ರ ಯುವಜನ ಸೇವೆ ಹಾಗೂ ಕ್ರೀಡಾ ಸಚಿವಾಲಯ ಪ್ರತಿ ವರ್ಷ ಒಂದೊಂದು ರಾಜ್ಯದಲ್ಲಿ ಆಯಾ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ರಾಷ್ಟ್ರೀಯ ಯುವ ಜನೋತ್ಸವ ಆಯೋಜಿಸುತ್ತಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈ ಉತ್ಸವ 5 ದಿನಗಳಿಗೆ ವಿಸ್ತಾರಗೊಂಡಿದೆ. 25ನೇ ರಾಷ್ಟ್ರೀಯ ಯುವ ಜನೋತ್ಸವ ಪುದುಚೇರಿಯಲ್ಲಿ ನಡೆದಿದ್ದರೆ, 26ನೇ ಉತ್ಸವಕ್ಕೆ ಹುಬ್ಬಳ್ಳಿ- ಧಾರವಾಡಕ್ಕೆ ಆತಿಥ್ಯ ವಹಿಸುವ ಅವಕಾಶ ಸಿಕ್ಕಿದೆ. ರಾಷ್ಟ್ರಮಟ್ಟದ ಉತ್ಸವದಿಂದ ವಿದ್ಯಾಕಾಶಿಯಲ್ಲಿ ಯುವಕರ ಕಲರವ ಹೆಚ್ಚಾಗಿದೆ. 5 ದಿನಗಳ ಕಾಲ ಸಾಹಸ ಕ್ರೀಡೆ, ದೇಸಿ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಕೌಶಲ ಬೆಳೆಸಿಕೊಳ್ಳಲು ಒಂದಿಷ್ಟು ಚಿಂತನೆ ನಡೆಸಲು ಸದಾವಕಾಶ ಸಿಕ್ಕಂತಾಗಿದೆ.

    ಪ್ರಮುಖಾಂಶಗಳು

    • 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳ 7,500 ಯುವ ಪ್ರತಿನಿಧಿಗಳ ಆಗಮನ.
    • ವಿವಿಧ ರಾಜ್ಯಗಳ ಸಾಂಸ್ಕೃತಿಕ ಶ್ರೀಮಂತಿಕೆ ಪರಿಚಯಿಸುವ 5 ದಿನದ ಕಾರ್ಯಕ್ರಮ.
    • ಧಾರವಾಡದಲ್ಲಿ 6, ಹುಬ್ಬಳ್ಳಿಯಲ್ಲಿ 1ವೇದಿಕೆ.
    • ಗಣ್ಯರು, ಅತಿಥಿಗಳಿಗೆ ಅಚ್ಚುಕಟ್ಟಾದ ವಸತಿ, ಊಟೋಪಚಾರ ವ್ಯವಸ್ಥೆ.
    • ಯುವ ಶೃಂಗಸಭೆ, ದೇಸಿ ಕ್ರೀಡೆ, ಸಮರ ಕಲೆ, ಸಾಮಾಜಿಕ ಅಭಿವೃದ್ಧಿ ಮೇಳ, ಆಹಾರ ಉತ್ಸವ, ಯುವ ಕಲಾವಿದರ ಶಿಬಿರ ಹಾಗೂ ಸಾಹಸ ಕ್ರೀಡೆಗಳು ಉತ್ಸವದ ವಿಶೇಷತೆ.

    ವಿಶೇಷ ಸ್ಮರಣಿಕೆಗಳು ಸಿದ್ಧ

    ಪ್ರಧಾನಿ ಮೋದಿ ಸನ್ಮಾನಕ್ಕೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದ ಮೂರ್ತಿ, ಬೆಂಗೇರಿಯಲ್ಲಿ ತಯಾರಾದ ರಾಷ್ಟ್ರಧ್ವಜ ಹಾಗೂ ಹಾವೇರಿಯ ಏಲಕ್ಕಿ ಹಾರದ ಸ್ಮರಣಿಕೆಗಳು ಸಿದ್ಧಗೊಂಡಿವೆ. ಜ.12 ಸ್ವಾಮಿ ವಿವೇಕಾನಂದರ ಜನ್ಮದಿನವೂ ಆಗಿರುವುದರಿಂದ ಅವರ ಸ್ಮರಣಾರ್ಥ ಬೀದರ್ ಜಿಲ್ಲೆಯ ಖ್ಯಾತಿಯನ್ನು ಜಗತ್ಪ್ರಸಿದ್ಧವಾಗಿಸಿದ ಬಿದರಿ ಕಲೆಯಲ್ಲಿ ನಿರ್ವಿುಸಿದ ಸ್ವಾಮಿ ವಿವೇಕಾನಂದರ ಸುಂದರ ಮೂರ್ತಿಯನ್ನು ನೀಡಲಾಗುತ್ತದೆ. ಹಾವೇರಿ ಜಿಲ್ಲೆಯ ಸುಪ್ರಸಿದ್ಧ ಸುವಾಸಿತ ಏಲಕ್ಕಿ ಹಾರವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ವಿಶೇಷವಾಗಿ ನೇಯಲಾದ ಕಸೂತಿ ಕಲೆಯುಳ್ಳ ಹ್ಯಾಂಡ್​ಲೂಮ್ ಶಾಲು ಮತ್ತು ಹುಬ್ಬಳ್ಳಿಯ ಬೆಂಗೇರಿಯಲ್ಲಿ ತಯಾರಿಸಲಾಗಿರುವ ರಾಷ್ಟ್ರಧ್ವಜವನ್ನು ಸಾಗವಾನಿ ಕಟ್ಟಿಗೆಯ ಸುಂದರ ಚೌಕಟಿನಲ್ಲಿ ಅಳವಡಿಸಿ ಪ್ರಧಾನಿಗೆ ಸಮರ್ಪಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಿರ್ವಿುತ ಸಾಗವಾನಿ ಕಟ್ಟಿಗೆ ಚೌಕಟ್ಟು ಗಂಡಭೇರುಂಡ, ಅಶೋಕ ಸ್ತಂಭಗಳನ್ನು ಒಳಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts