More

    ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಶೀಘ್ರ

    ಹಾವೇರಿ: ಜಿಲ್ಲೆಯ 7 ಕೃಷಿ ಉತ್ಪನ್ನ ಮಾರುಕಟ್ಟೆಗಳ 2ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರವು ಜೂನ್ 15ರಿಂದ 22ರೊಳಗೆ ಮುಕ್ತಾಯಗೊಳ್ಳಲಿದೆ. ಹೀಗಾಗಿ, ಎಲ್ಲ ಎಪಿಎಂಸಿಗಳಲ್ಲಿ ಮುಂದಿನ 20 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಲು ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಕ್ತಾಯಗೊಳ್ಳಲಿರುವ 7 ಎಪಿಎಂಸಿಗಳಲ್ಲಿಯೂ ಜೂನ್ ಮೊದಲ ಇಲ್ಲವೇ 2ನೇ ವಾರದಲ್ಲಿ ಚುನಾವಣೆ ನಡೆಸಲು ಆಯಾ ತಾಲೂಕುಗಳ ತಹಸೀಲ್ದಾರ್​ಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಹಿರೇಕೆರೂರ ಎಪಿಎಂಸಿಯ ಅವಧಿಯು ಜೂನ್ 15ಕ್ಕೆ, ರಾಣೆಬೆನ್ನೂರ, ಬ್ಯಾಡಗಿ ಹಾಗೂ ಹಾನಗಲ್ಲ ಎಪಿಎಂಸಿಯ ಅವಧಿ ಜೂ. 16ಕ್ಕೆ, ಸವಣೂರ ಹಾಗೂ ಶಿಗ್ಗಾಂವಿ ಎಪಿಎಂಸಿ ಅವಧಿ 20ಕ್ಕೆ, ಹಾವೇರಿ ಎಪಿಎಂಸಿ ಅವಧಿ ಜೂ. 22ಕ್ಕೆ ಮುಕ್ತಾಯಗೊಳ್ಳಲಿದೆ. ಈಗಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಧಿ ಮುಕ್ತಾಯ ಆಗುವುದರೊಳಗೆ ನೂತನ ಅಧ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆಗೊಳಿಸುವಂತೆ ತಹಸೀಲ್ದಾರ್​ಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

    ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಬಿರುಸು: ಎಪಿಎಂಸಿಗಳಲ್ಲಿ ರಾಜಕೀಯ ನುಸುಳಬಾರದೆಂಬ ಉದ್ದೇಶದಿಂದ ಚುನಾವಣೆ ಆಯೋಗವು ಸದಸ್ಯರಾಗಿ ಆಯ್ಕೆಯಾಗುವವರಿಗೆ ಯಾವುದೇ ಪಕ್ಷದ ಚಿಹ್ನೆ ನೀಡಿಲ್ಲ. ಆದರೂ ಎಪಿಎಂಸಿಗಳಲ್ಲಿ ರಾಜಕೀಯ ಹಾಸುಹೊಕ್ಕಾಗಿದೆ. ಪಕ್ಷದ ಚಿಹ್ನೆ ಇಲ್ಲದೇ ಇದ್ದರೂ ಅಭ್ಯರ್ಥಿಗಳು ಆಯಾ ಪಕ್ಷದ ಬೆಂಬಲಿತರೆಂದು ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಈ ಚುನಾವಣೆಯಲ್ಲಿಯೂ ರಾಜಕೀಯ ಪಕ್ಷಗಳ ಪೈಪೋಟಿ ಸಹಜವಾಗಿದೆ. ಜಿಲ್ಲೆಯ ಏಳು ಎಪಿಎಂಸಿಗಳಲ್ಲಿ ಕೈ ಹಾಗೂ ಕಮಲ ಪಕ್ಷದ ಅಭ್ಯರ್ಥಿಗಳ ನಡುವೆ ಪೈಪೋಟಿ ಮುಂದುವರಿದಿದೆ.

    ಹಾವೇರಿ ಎಪಿಎಂಸಿಯಲ್ಲಿ ಕಮಲಕ್ಕೆ ಬಲ: ಜಿಲ್ಲಾ ಕೇಂದ್ರ ಹಾವೇರಿ ಎಪಿಎಂಸಿಯಲ್ಲಿ 13 ಚುನಾಯಿತ ಸದಸ್ಯ ಸ್ಥಾನಗಳಿದ್ದು, ಮೂವರು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 16 ಸದಸ್ಯ ಬಲವನ್ನು ಎಪಿಎಂಸಿ ಹೊಂದಿದೆ. ಇದರಲ್ಲಿ ಬಿಜೆಪಿ ಬೆಂಬಲಿತ 8 ಸದಸ್ಯರು ಚುನಾಯಿತರಾಗಿದ್ದು, ಸದ್ಯ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಕಾಂಗ್ರೆಸ್ 5 ಸದಸ್ಯರನ್ನು ಹೊಂದಿದೆ. ಹಿಂದಿನ 20 ತಿಂಗಳ ಅವಧಿಯ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರ ಬಲದೊಂದಿಗೆ ಕಾಂಗ್ರೆಸ್ 2ನೇ ಅವಧಿಗೆ ಅಧಿಕಾರಕ್ಕೇರಿತ್ತು. ಮೊದಲ ಅವಧಿಯಲ್ಲಿ ಕೈ, ಕಮಲದ ಅಭ್ಯರ್ಥಿಗಳು ಸಮ ಮತ ಪಡೆದಿದ್ದರಿಂದ ಲಾಟರಿ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ ಲಭಿಸಿತ್ತು. ಮೂರನೇ ಅವಧಿಯಲ್ಲಿ ಕಮಲ ಬೆಂಬಲಿತ ಅಭ್ಯರ್ಥಿಗಳು ನಿರಾಯಾಸವಾಗಿ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ. ಆದರೆ, ಸದಸ್ಯರಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಹೀಗಾಗಿ, ಇಲ್ಲಿ ಬಿಜೆಪಿ ಹೋಳಾದರೆ ಕಾಂಗ್ರೆಸ್ ಅದರ ಲಾಭ ಪಡೆಯುವ ಲೆಕ್ಕಾಚಾರ ನಡೆಸಿದೆ.

    ರಾಣೆಬೆನ್ನೂರನಲ್ಲಿ ಕೈ, ಉಳಿದೆಡೆ ಕಮಲ: 2017ರಲ್ಲಿ ನಡೆದ ಎಪಿಎಂಸಿ ಚುನಾವಣೆಯಲ್ಲಿ ರಾಣೆಬೆನ್ನೂರ, ಬ್ಯಾಡಗಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಈ ಸಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ನಾಮನಿರ್ದೇಶಿತ ಸದಸ್ಯರು ಆ ಪಕ್ಷದ ಬೆಂಬಲಿಗರೇ ಆಗಲಿದ್ದು, ಬಹುತೇಕ ಕಡೆಗಳಲ್ಲಿ ಬಿಜೆಪಿ ಬೆಂಬಲಿತರೇ ಅಧಿಕಾರಕ್ಕೇರುವ ಸಾಧ್ಯತೆಗಳು ದಟ್ಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts