More

    ಲೋಕಸಭೆ ಚುನಾವಣೆಗೆ ಸಿದ್ಧತೆ

    ಜಮಖಂಡಿ: ಲೋಕಸಭೆ ಸಾರ್ವತ್ರಿಕ 2024ರ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ, ಎಸಿ ಸಂತೋಷ ಕಾಮಗೌಡ ತಿಳಿಸಿದರು.

    ನಗರದ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಮಖಂಡಿ ವಿಧಾನಸಭೆ ಮತಕ್ಷೇತ್ರದಲ್ಲಿ 2024 ಜನವರಿ 22ಕ್ಕೆ ಇರವಂತೆ ಒಟ್ಟು 5616 ಯುವ ಮತದಾರರು ಮತಹಕ್ಕನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ 2,932 ಯುವಕರು, 2,684 ಯುವತಿಯರಿದ್ದಾರೆ. 1,09,117 ಪುರುಷರು, 1,11,021 ಮಹಿಳೆಯರು ಒಟ್ಟು 2,20,138 ಮತದಾರರಿದ್ದಾರೆ ಎಂದರು.
    ಈ ಸಾರಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಮತಗಟ್ಟೆಗೆ ಬಾರದೆ ಮನೆಯಲ್ಲೇ ಮತಹಾಕುತ್ತೇನೆ ಎಂದರೆ ಅವರಿಗೆ ಮನೆಯ ಬಾಗಿಲಿಗೆ ಮತಗಟ್ಟೆ ಹೋಗುತ್ತದೆ. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

    ಒಟ್ಟು 232 ಮತಗಟ್ಟೆಗಳಿಗೆ 21 ಸೆಕ್ಟರ್ ಆಫಿಸರ್‌ಗಳನ್ನು ನೇಮಿಸಲಾಗಿದೆ. ಹುಲ್ಯಾಳ ಕ್ರಾಸ್, ಚಿಕ್ಕಲಕಿ ಕ್ರಾಸ್, ಹುನ್ನೂರ ಗ್ರಾಮಗಳಲ್ಲಿ ಒಟ್ಟು 3 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲಾಗಿದೆ. ಸ್ಥಿರ ಕಣ್ಗಾವಲು 9 ಜನರ 3 ತಂಡ, ಕ್ಷೀಪ್ರ ಪಡೆ ತಂಡ, ವಿಡಿಯೋ ಚಿತ್ರೀಕರಣ, ಲೆಕ್ಕ ಪರಿಶೋಧಕರ, ತರಬೇತಿ ನೀಡುವವರ ತಂಡ ರಚಿಸಲಾಗಿದೆ ಎಂದರು.

    ಜಮಖಂಡಿ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೆ ದೂರುಗಳು, ಚುನಾವಣೆ ಅಕ್ರಮಗಳು ಕಂಡು ಬಂದರೆ ಸಾರ್ವಜನಿಕರು ದಿನದ 24 ಗಂಟೆಗಳ ಕಾಲ ಮಾಹಿತಿ ನೀಡಬಹುದು. ತಹಸೀಲ್ದಾರ್ ಕಚೇರಿಯಲ್ಲಿ ದೂ: 08353-220023 ಸಂಖ್ಯೆಗೆ ಮಾಹಿತಿ ನೀಡಿದರೆ 100 ನಿಮಿಷದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

    ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ದೂರವಾಣಿ 1950ಕ್ಕೆ ಕರೆಮಾಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಬಹುದು ಎಂದರು.
    5 ಸಖಿ ಮತಗಟ್ಟೆಗಳು, ವಿಶೇಷ ಚೇತನರ ನಿರ್ವಹಣೆಯ 1 ಮತಗಟ್ಟೆ, ಯುವಜನ ನಿರ್ವಹಣೆಯ 1 ಮತಗಟ್ಟೆ, ಧ್ಯೇಯ ಆಧಾರಿತ 1 ಮತಗಟ್ಟೆ, ಸಾಂಪ್ರದಾಯಿಕ 1 ಮತಗಟ್ಟೆ ಸ್ಥಾಪಿಸಲಾಗುವುದು ಎಂದರು.

    ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಸಭೆ, ಪ್ರಚಾರ ಮಾಡುವುದು, ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಅದಕ್ಕೆ ಸಂಬಂಧ ಪಟ್ಟವರು, ಪದಾಧಿಕಾರಿಗಳು ಅವಕಾಶ ನೀಡಬಾರದು. ಪೆಟ್ರೋಲ್ ಪಂಪ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಟೋಕನ್ ಪದ್ಧತಿ ಅನುಸರಿಸಬಾರದು. ಅದೂ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಈ ಕುರಿತು ಅವರಿಗೂ ಸಭೆ ನಡೆಸಿ ತಿಳಿವಳಿಕೆ ಹೇಳಲಾಗುವುದು ಎಂದರು. ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ವಹಿಸಲಾಗಿದೆ ಎಂದರು.

    ಗ್ರಾಮ, ಹೋಬಳಿ, ನಗರ ಪ್ರದೇಶಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
    ಮತಗಟ್ಟೆಗಳನ್ನು ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡಿಸಲಾಗಿದೆ. ಶೌಚಗೃಹ, ಕುಡಿಯುವ ನೀರು, ಮತದಾರರಿಗೆ ನೆರಳಿನ ವ್ಯವಸ್ಥೆ ಮಾಡಲಾಗುವುದು ಎಂದರು. ಡಿವೈಎಸ್‌ಪಿ ಶಾಂತವೀರ ಈ., ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಶಿರಸ್ತೇದಾರರಾದ ಗಂಗಾಧರ ಹೊಸಕೇರಿ, ಬಸವರಾಜ ಸಿಂಧೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts