More

    ರಿಯಲ್​ಪಾಲಿಟಿಕ್ ಎಂಬ ರಾಷ್ಟ್ರಹಿತಕಾರಕ ನೀತಿ ನಡವಳಿಕೆ; ಪ್ರೇಮಶೇಖರರ ಅಂಕಣ

    ರಿಯಲ್​ಪಾಲಿಟಿಕ್ ಎಂಬ ರಾಷ್ಟ್ರಹಿತಕಾರಕ ನೀತಿ ನಡವಳಿಕೆ; ಪ್ರೇಮಶೇಖರರ ಅಂಕಣ

    ದೇಶವೊಂದರ ವಿದೇಶನೀತಿಯನ್ನು ರೂಪಿಸುವಾಗ ರಾಷ್ಟ್ರನಾಯಕರು ಗಮನಕ್ಕೆ ತೆಗೆದುಕೊಳ್ಳಬೇಕಾದ ಅಂಶಗಳು ಯಾವುದಾಗಿರಬೇಕು ಎಂಬ ಬಗ್ಗೆ ವಿಖ್ಯಾತ ಇಟಾಲಿಯನ್ ರಾಜತಂತ್ರಜ್ಞ ನಿಕೊಲೋ ಮೆಕಿಯಾವೆಲ್ಲಿ ಐದು ಶತಮಾನಗಳ ಹಿಂದೆ ಹೇಳಿದ ಮಾತಿದು- ‘ತನ್ನ ದೇಶದ ರಕ್ಷಣೆಯ ಪ್ರಶ್ನೆಯೇ ಅತಿ ಮುಖ್ಯವಾದಾಗ, ನ್ಯಾಯ-ನೈತಿಕತೆ ಮುಂತಾದ ಆದರ್ಶವಾದಿ ವಿಚಾರಗಳನ್ನೆಲ್ಲಾ ಬದಿಗೊತ್ತಿ ಆ ಗಳಿಗೆಯಲ್ಲಿ ಯಾವ ನಿಲುವು ಅಗತ್ಯವೋ ಅದನ್ನು ಅನುಸರಿಸಬೇಕು.’ ಆ ಮಾತನ್ನು ಒಂದು ಸಿದ್ಧಾಂತದ ರೂಪಕ್ಕಿಳಿಸಿದ್ದು ಜರ್ಮನ್ ಲೇಖಕ-ರಾಜಕಾರಣಿ ಆಗಸ್ಟ್ ಲುಡ್ವಿಗ್ ವಾನ್ ರೋಖ್ಹಾವ್, 1853ರಲ್ಲಿ ಪ್ರಕಟವಾದ ತನ್ನ ‘Grundsätze der Realpolitik angewendet auf die staatlichen Zustände Deutschlands’ (ಜರ್ಮನಿಯ ರಾಷ್ಟ್ರೀಯ ವಿದ್ಯಮಾನಗಳಲ್ಲಿ ರಿಯಲ್​ಪಾಲಿಟಿಕ್ ತತ್ತ್ವಗಳ ಅನುಸರಣೆ) ಕೃತಿಯಲ್ಲಿ. ‘Real‘ ಅಂದರೆ ‘ವಾಸ್ತವ’ ಮತ್ತು ‘Politik‘ ಅಂದರೆ ‘ರಾಜಕೀಯ’ ಎಂಬ ಎರಡು ಜರ್ಮನ್ ಪದಗಳನ್ನುಪಯೋಗಿಸಿ ರೋಖ್ಹಾವ್ ಸೃಷ್ಟಿಸಿದ ‘Realpolitik‘ ಪದ ಸೂಚಿಸಿದ್ದು ಮೆಕಿಯಾವೆಲ್ಲಿ ಹೇಳಿದ್ದ ಮಾತುಗಳನ್ನೇ. ಇದಕ್ಕೆ ಸರಿಯಾದ ಪದ ಕನ್ನಡದಲ್ಲಿಲ್ಲ. ಹೀಗಾಗಿ ನಾವೂ ‘ರಿಯಲ್​ಪಾಲಿಟಿಕ್’ ಎಂಬ ಪದವನ್ನೇ ಬಳಸೋಣ.

    ರೋಖ್ಹಾವ್ ಹೇಳಿದ್ದನ್ನು ಮುಂದಿನ ದಶಕದಲ್ಲೇ ಪ್ರಶಿಯಾದ ಪ್ರಧಾನಿ ಒಟ್ಟೋ ವಾನ್ ಬಿಸ್​ವಾರ್ಕ್ ಆಚರಣೆಗೆ ತಂದು ಸಣ್ಣಪುಟ್ಣ ರಾಜ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಜರ್ಮನ್ನರನ್ನು ಒಂದುಗೂಡಿಸಿ ಬಲಾಢ್ಯ ಜರ್ಮನಿಯನ್ನು ನಿರ್ವಿುಸಿದ. ಅದಕ್ಕಾಗಿ ಆತ ಡೆನ್​ವಾರ್ಕ್ (1864), ಆಸ್ಟ್ರಿಯನ್ ಸಾಮ್ರಾಜ್ಯ (1866) ಮತ್ತು ಫ್ರಾನ್ಸ್ (1970-71) ವಿರುದ್ಧ ಯುದ್ಧವೆಸಗಲೂ ಹಿಂಜರಿಯಲಿಲ್ಲ. ಯುದ್ಧವೆಂದರೆ ಮತ್ತೊಂದು ಬಗೆಯ ರಾಜತಂತ್ರ ಎಂದು ನಂಬಿದ್ದ ಬಿಸ್​ವಾರ್ಕ್ ಯುದ್ಧಾನಂತರ ಸೋತ ಆ ಮೂರೂ ನೆರೆ ನಾಡುಗಳ ಜತೆ ವ್ಯವಹರಿಸಿದ ನೀತಿಯೂ ರಿಯಲ್ ಪಾಲಿಟಿಕ್​ಗೆ ಉದಾಹರಣೆಯಾಗುತ್ತದೆ. ಡೆನ್​ವಾರ್ಕ್ ಅನ್ನು ಸೋಲಿಸಿ ಅದರ ಹಿಡಿತದಲ್ಲಿದ್ದ ಜರ್ಮನ್ ಬಹುಸಂಖ್ಯಾತ ಪ್ರದೇಶಗಳಾದ ಶ್ಲೇಷ್​ವೀಗ್-ಹೋಲ್​ಸ್ಟೈನ್ ಅನ್ನು ಕಿತ್ತುಕೊಂಡ. ಆದರೆ ಎರಡೇ ವರ್ಷಗಳ ನಂತರ ಆಸ್ಟ್ರಿಯಾವನ್ನು ಮಣ್ಣುಮುಕ್ಕಿಸಿದರೂ ಅದರಲ್ಲಿದ್ದ ಜರ್ಮನ್ ಪ್ರದೇಶಗಳಿಗೆ ಕೈಹಾಕಲು ಹೋಗಲಿಲ್ಲ. ಅವನ ರಿಯಲ್​ಪಾಲಿಟಿಕ್ ಪ್ರಖರವಾಗಿ ಗೋಚರವಾಗುವುದು ಅಲ್ಲಿ. ಆಗಿನ ಆಸ್ಟ್ರಿಯಾ ಬಹುಜನಾಂಗೀಯ ಬೃಹತ್ ಸಾಮ್ರಾಜ್ಯ. ಅದರ ಪಶ್ಚಿಮ ತುದಿಯಲ್ಲಷ್ಟೇ ಇದ್ದ ಆಸ್ಟ್ರಿಯನ್ನರೂ ಜನಾಂಗೀಯವಾಗಿ, ಭಾಷಿಕವಾಗಿ ಜರ್ಮನ್ನರೇ. ಅವರಿಗಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿದ್ದವರು ಝೆಕ್, ಸ್ಲೋವಾಕ್, ರಶಿಯನ್, ಹಂಗೇರಿಯನ್, ಇಟಾಲಿಯನ್, ಸ್ಲೊವೇನಿಯನ್, ರುಮೇನಿಯನ್ ಮತ್ತು ಕ್ರೊಯೇಷಿಯನ್ ಜನತೆ (ಪ್ರಥಮ ಮಹಾಯುದ್ಧದ ನಂತರ ಅವೆಲ್ಲಾ ಪ್ರತ್ಯೇಕಗೊಂಡು ಈಗ ಪುಟಾಣಿ ಆಸ್ಟ್ರಿಯಾ ಅಷ್ಟೇ ಉಳಿದುಕೊಂಡಿದೆ). ಯುದ್ಧದಲ್ಲಿ ಆಸ್ಟ್ರಿಯಾ ಸಾಮ್ರಾಜ್ಯವನ್ನು ಸೋಲಿಸಿದ ಮೇಲೆ ಅದರಲ್ಲಿದ್ದ ಜರ್ಮನ್ ಪ್ರದೇಶವಾದ (ಈಗಿನ) ಆಸ್ಟ್ರಿಯಾವನ್ನು ಬಿಸ್​ವಾರ್ಕ್ ಜರ್ಮನಿಗೆ ಸೇರಿಸಿಕೊಂಡಿದ್ದರೆ ಏನಾಗುತ್ತಿತ್ತು? ಆಗಿನ ಯೂರೋಪ್​ನಲ್ಲಿ ಪ್ರಶಿಯಾಗಿಂತಲೂ ಆಸ್ಟ್ರಿಯಾ ಹೆಚ್ಚು ಪ್ರಭಾವಶಾಲಿಯಾಗಿತ್ತು. ಆ ಸಾಮ್ರಾಜ್ಯದ ಹಿಡಿತವಿದ್ದದ್ದು ಅಲ್ಪಸಂಖ್ಯಾತರಾಗಿದ್ದ ಆಸ್ಟ್ರಿಯನ್ ಜರ್ಮನ್ನರ ಕೈಯಲ್ಲಿ. ಒಂದು ವೇಳೆ ಅವರನ್ನು ಜರ್ಮನಿಗೆ ಸೇರಿಸಿಕೊಂಡಿದ್ದರೆ ಹೊಸ ಏಕೀಕೃತ ಜರ್ಮನಿಯಲ್ಲಿ ಆಸ್ಟ್ರಿಯನ್ ಜರ್ಮನ್ನರದೇ ಪ್ರಭಾವ ಹೆಚ್ಚಾಗಿಬಿಡುತ್ತಿತ್ತು ಮತ್ತು ಅಲ್ಲಿಯವರೆಗೂ ಏಕೀಕರಣಕ್ಕಾಗಿ ಶ್ರಮಿಸಿದ ಪ್ರಶಿಯನ್ ಜರ್ಮನ್ನರ ಪ್ರಭಾವ ಕುಗ್ಗುವ ಸಾಧ್ಯತೆ ಇತ್ತು. ಇದು ಪ್ರಶಿಯಾದ ನೇತೃತ್ವದಲ್ಲೇ ಜರ್ಮನಿಯ ಏಕೀಕರಣವಾಗುವುದರ ಔಚಿತ್ಯವನ್ನು ಮನಗಂಡಿದ್ದ, ಅದಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದ್ದ ಬಿಸ್​ವಾರ್ಕ್​ಗೆ ಸಮ್ಮತವಾಗುವ ಸಾಧ್ಯತೆಯೇ ಇರಲಿಲ್ಲ. ಹೀಗೆ ಆಸ್ಟ್ರಿಯನ್ ಜರ್ಮನ್ನರನ್ನು ದೂರವೇ ಇಟ್ಟು ತನ್ನ ಪ್ರಶಿಯಾದ ನಾಯಕತ್ವದಲ್ಲಿ ಜರ್ಮನಿಯನ್ನು ಒಂದುಗೂಡಿಸಿದ ಬಿಸ್​ವಾರ್ಕ್​ಗೆ ನಂತರ ಫ್ರಾನ್ಸ್ ಮೇಲೆ ಎರಗುವ ಭೂ-ರಾಜಕೀಯ, ಸಾಮರಿಕ, ಆರ್ಥಿಕ, ರಾಜಕೀಯ ಅಗತ್ಯವಿರಲೇ ಇಲ್ಲ. ಆದಾಗ್ಯೂ, ಹಾಗೆಮಾಡಲು ಬಿಸ್​ವಾರ್ಕ್​ಗಿದ್ದ ಒಂದೇ ಕಾರಣ ರಾಜತಂತ್ರ! ಜರ್ಮನಿ ಏಕೀಕೃತಗೊಂಡು ಮಧ್ಯ ಯೂರೋಪಿನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಜಗತ್ತಿಗೆ ಸಾರಬೇಕಾಗಿತ್ತು ಅಷ್ಟೇ. ಅದಕ್ಕೆ ಆತ ಕಂಡುಕೊಂಡ ಅತ್ಯುತ್ತಮ ವಿಧಾನವೆಂದರೆ ಆಗಿನ ಯೂರೋಪ್​ನ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ದೇಶವೊಂದನ್ನು ಯುದ್ಧದಲ್ಲಿ ಮಣಿಸುವುದು. ಸೇನಾಶಕ್ತಿಯಲ್ಲಿ ಅಗ್ರಗಣ್ಯವಾಗಿದ್ದ ಇಂಗ್ಲೆಂಡ್ ವಿರುದ್ಧ ಆ ಆಟ ಸಾಧ್ಯವೇ ಇರಲಿಲ್ಲ. ರಶಿಯಾ ಸಹ ಕೈಗೆಟುಕದ ತುತ್ತು. ಸುಲಭವಾಗಿ ಸಿಕ್ಕಿದ್ದು, ಹಿಂದಿನ ವೈಭವದಿಂದಷ್ಟೇ ಈಗಲೂ ಮೆರೆದಾಡುತ್ತಿದ್ದ, ಆದರೆ ವಾಸ್ತವವಾಗಿ ಬಲಹೀನಗೊಂಡಿದ್ದ ಬಡಪಾಯಿ ಫ್ರಾನ್ಸ್. ಇನ್ನೂ ಒಂದು ಅನುಕೂಲವೆಂದರೆ ಫ್ರಾನ್ಸ್ ತಲುಪಲು ಸಮುದ್ರ ದಾಟಬೇಕಾಗಿರಲಿಲ್ಲ, ತನ್ನ ಗಡಿಯಿಂದ ಬಹು ದೂರದ ಅಪರಿಚಿತ ವಾತಾವರಣದಲ್ಲಿ ಹೋರಾಡಬೇಕಾಗಿರಲಿಲ್ಲ. ನೈಋತ್ಯದಲ್ಲಿ ಗಡಿ ದಾಟಿದರೆ ಫ್ರಾನ್ಸ್, ಜತೆಗೆ ಅದರ ರಾಜಧಾನಿಯೂ ಗಡಿಯಿಂದ ಹೆಚ್ಚೇನೂ ದೂರವಿಲ್ಲ!

    ಸಿಕ್ಕಿದ ನೆಪಗಳನ್ನೊಡ್ಡಿ ಫ್ರಾನ್ಸ್ ಅನ್ನು ಪ್ರಚೋದಿಸಿ ಯುದ್ಧಕ್ಕೆಳೆದು ಸೋಲಿಸಿದ್ದಲ್ಲದೇ, ಅದರ ರಾಜಧಾನಿಗೂ ನುಗ್ಗಿ, ಅಲ್ಲಿನ ವರ್ಸೆಲ್ಸ್ ಅರಮನೆಯ ಶೀಶ್ ಮಹಲ್​ನಲ್ಲಿ ತನ್ನ ಪ್ರಶಿಯಾದ ಅರಸ ವಿಲ್​ಹೆಲ್ಮ್ ಫ್ರೆಡರಿಕ್ ಲುಡ್ವಿಗ್​ನನ್ನು ನವಜರ್ಮನಿಯ ಸಾಮ್ರಾಟನಾಗಿ ಪಟ್ಟಾಭಿಷೇಕ ಮಾಡಿಯೂಬಿಟ್ಟ ಬಿಸ್​ವಾರ್ಕ್ ಮಹಾಶಯ. ಆ ದಿನದ ಜಾಗತಿಕ ವಾಸ್ತವಗಳಿಗೆ ಹೊಂದುವಂತೆ ಜರ್ಮನಿಯ ಉದಯವನ್ನು ಭೂಮಂಡಲಕ್ಕೆ ಸಾರಲು ಇದಕ್ಕಿಂತ ಪರಿಣಾಮಕಾರಿ ವಿಧಾನ ಬಹುಶಃ ಬೇರೊಂದಿರಲಿಲ್ಲ.

    ರಿಯಲ್​ಪಾಲಿಟಿಕ್ ಪರಿಕಲ್ಪನೆ ಇಂಗ್ಲಿಷ್​ನಲ್ಲೂ ಒಂದಕ್ಷರವೂ ಬದಲಾಗದೇ ಬಳಕೆಗೆ ಬಂತು. ನಿಜ ಹೇಳಬೇಕೆಂದರೆ ಇಂಗ್ಲೀಷರು ಆ ನೀತಿಯನ್ನು ಸಣ್ಣ ಪ್ರಮಾಣದಲ್ಲಿ ಒಂದು ಶತಮಾನದ ಹಿಂದಿನಿಂದಲೂ ಅನುಸರಿಸುತ್ತಲೇ ಬಂದಿದ್ದರು. ಅದಕ್ಕೊಂದು ಹೆಸರು ಸೃಷ್ಟಿಸಿರಲಿಲ್ಲ ಅಷ್ಟೇ. ಆ ನೀತಿಗನುಗುಣವಾಗಿಯೇ ಅವರು ಅಂದಿನ ಜಗತ್ತಿನಲ್ಲಿ ತಮ್ಮ ಏಕಮೇವಾದ್ವಿತೀಯತೆಯನ್ನು ಮೂರು ಶತಮಾನಗಳ ಕಾಲ ಕಾಪಾಡಿಕೊಂಡದ್ದು. ಆ ನೀತಿಯ ಮುಖ್ಯ ಅಂಶವೆಂದರೆ ಬಲಾಢ್ಯ ಹಾಗೂ ಬಲಹೀನ ರಾಷ್ಟ್ರಗಳ ನಡುವಿನ ಸಮರದಲ್ಲಿ ಬ್ರಿಟನ್ ಬಲಹೀನ ರಾಷ್ಟ್ರದ ಪರ ನಿಲ್ಲುವುದಾಗಿತ್ತು. ಇದರಿಂದಾಗಿ ಬ್ರಿಟನ್​ಗೆ ಎರಡೂ ಬಗೆಯ ಲಾಭಗಳಾಗುತ್ತಿದ್ದವು. ಶಕ್ತಿಶಾಲಿ ಬ್ರಿಟನ್ ಬಲಹೀನ ರಾಷ್ಟ್ರದ ಪರ ನಿಲ್ಲುತ್ತಿದ್ದುದರಿಂದ ಬಲಾಢ್ಯ ರಾಷ್ಟ್ರಕ್ಕೆ ಯುದ್ಧದಲ್ಲಿ ಜಯ ದೊರೆಯುತ್ತಿರಲಿಲ್ಲ, ಪರಿಣಾಮವಾಗಿ ಅದರ ಸೇನಾ-ರಾಜಕೀಯ-ರಾಜತಾಂತ್ರಿಕ ವರ್ಚಸ್ಸು ಕುಗ್ಗಿ ಅದೆಂದೂ ಬ್ರಿಟನ್​ಗೆ ಸಮರ್ಥ ಪ್ರತಿಸ್ಪರ್ಧಿಯಾಗಿ ಬೆಳೆಯಲು ಅವಕಾಶವಾಗುತ್ತಿರಲಿಲ್ಲ. ಇನ್ನು ಬ್ರಿಟನ್​ನ ದಯೆಗೆ ಬಿದ್ದ ಬಲಹೀನ ರಾಷ್ಟ್ರ ಸಹ ಬ್ರಿಟನ್​ನ ಹಿತಾಸಕ್ತಿಗೆ ಧಕ್ಕೆಯೊಡ್ಡುವ ಮಟ್ಟಿಗೆ ಬೆಳೆಯುವಂತೇ ಇರಲಿಲ್ಲ. ರಶಿಯಾ-ತುರ್ಕಿ ಸಮರದಲ್ಲಿ ತುರ್ಕಿ ಪರ, ಜರ್ಮನಿ-ರಶಿಯಾ ಹಣಾಹಣಿಯಲ್ಲಿ ರಶಿಯಾ ಪರ, ಜರ್ಮನಿ-ಪೋಲ್ಯಾಂಡ್ ಕಾಳಗದಲ್ಲಿ ಪೋಲ್ಯಾಂಡ್ ಪರ, ಆಸ್ಟ್ರಿಯಾ-ಸರ್ಬಿಯಾ ವೈಮನಸ್ಯದಲ್ಲಿ ಸರ್ಬಿಯಾ ಪರ ವಹಿಸಿ ತನ್ನ ಹಿತಾಸಕ್ತಿಗಳನ್ನು ಬ್ರಿಟನ್ ನಿರಂತರವಾಗಿ ಕಾಪಾಡಿಕೊಂಡದ್ದೇ ಈ ದ್ವಿಲಾಭಕಾರಿ ನೀತಿಯಿಂದ. ಈ ನೀತಿಗೆ ವಿರುದ್ಧವಾಗಿ ನಡೆದುಕೊಂಡ ಏಕೈಕ ಬ್ರಿಟಿಷ್ ಪ್ರಧಾನಮಂತ್ರಿ ನೆವಿಲ್ ಚೇಂಬರ್ಲೀನ್. ಆಸ್ಟ್ರಿಯಾ, ಜೆಕೋಸ್ಲೊವೇಕಿಯಾ ಮುಂತಾದ ಸಣ್ಣ ದೇಶಗಳ ಮೇಲೆ ಹಿಟ್ಲರ್ ಎಸಗಿದ ದಾಳಿಗಳನ್ನೆಲ್ಲಾ ಚೇಂಬರ್ಲೀನ್ ಮನ್ನಿಸಿದ್ದರಿಂದಾಗಿ ಆ ನಾಜಿ ಸರ್ವಾಧಿಕಾರಿ ಜಗತ್​ಕಂಟಕನಾಗಿ ಬೆಳೆಯಲು ಅವಕಾಶವಾದದ್ದು, ಬ್ರಿಟನ್ ಎರಡನೆಯ ಮಹಾಯುದ್ಧದಲ್ಲಿ ಹೋರಾಡುವ ಸಂಕಷ್ಟಕ್ಕೀಡಾದದ್ದು.

    ಯೂರೋಪಿನಲ್ಲಿ ಇಷ್ಟೆಲ್ಲಾ ಅಲೆದಾಡಿದ ನಾವೀಗ ಮನೆಗೇ ಬರೋಣ. ಮೆಕಿಯಾವೆಲ್ಲಿ ಉಪದೇಶಿಸಿದ, ರೋಖ್ಹಾವ್ ಹೆಸರಿಟ್ಟು ಸಾರಿದ, ಬಿಸ್​ವಾರ್ಕ್ ಅನುಸರಿಸಿದ ಮತ್ತು 1937ವರೆಗೆ ಬಹುತೇಕ ಪ್ರತಿಯೊಬ್ಬ ಬ್ರಿಟಿಷ್ ಪ್ರಧಾನಮಂತ್ರಿಯೂ ನಿಷ್ಠೆಯಿಂದ ಪಾಲಿಸಿದ ರಿಯಲ್​ಪಾಲಿಟಿಕ್ ನಮ್ಮ ದೇಶಕ್ಕೆ ಬರಲಿಲ್ಲವೇ? ಸ್ವಾತಂತ್ರಾ್ಯನಂತರದ ಮೊದಲ ಎರಡು ದಶಕಗಳಲ್ಲಿನ ನಮ್ಮ ವಿದೇಶನೀತಿಯನ್ನು ಅವಲೋಕಿಸಿದರೆ ಆ ಪದವಾಗಲೀ, ಅದು ಸೂಚಿಸುವ ಅರ್ಥವಾಗಲೀ ನಮ್ಮಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ನೋಡೋಣ. ‘ಚೀನಾದ ಬಗ್ಗೆ ಎಚ್ಚರಿಕೆಯಿಂದಿರಿ’ ಎಂದು ಅಮೆರಿಕಾದ ಇಬ್ಬರು ಅಧ್ಯಕ್ಷರು ಮತ್ತು ಇಬ್ಬರು ವಿದೇಶಾಂಗ ಕಾರ್ಯದರ್ಶಿಗಳಷ್ಟೇ ಅಲ್ಲದೇ ನಮ್ಮ ಉಪಪ್ರಧಾನಿ ಸರ್ದಾರ್ ಪಟೇಲ್ ಸಹ ನೆಹರೂಗೆ ಲಿಖಿತವಾಗಿ ಎಚ್ಚರಿಸಿದ್ದರು. ಅವರ ಯಾವ ಮಾತನ್ನೂ ನೆಹರೂ ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ಮೂಲತಃ ಚೀನಾ ಮತ್ತು ಪಾಕಿಸ್ತಾನಗಳ ನಡುವೆ ನೇರ ಭೂಸಂಪರ್ಕ ಇರಲೇ ಇಲ್ಲ. ಆದರೆ, 1947-48ರ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಬೇಡಿಕೆಯನ್ನು ತಿರಸ್ಕರಿಸಿ ನೆಹರೂ ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನದ ವಶದಲ್ಲೇ ಬಿಟ್ಟು ಕದನವಿರಾಮ ಘೊಷಿಸಿದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಗಿ ಅದರ ಮೂಲಕ ಚೀನಾ ಮತ್ತು ಪಾಕಿಸ್ತಾನ ಸಂಪರ್ಕ ಸ್ಥಾಪಿಸಿಕೊಂಡವು. ಇಂದು ಅದರ ಮೂಲಕ ಚೀನಾ ಅರಬ್ಬೀ ಸಮುದ್ರತೀರದ ಗ್ವಾದಾರ್ ಬಂದರು ತಲುಪಿದೆ, ನಮ್ಮ ಪಶ್ಚಿಮ ತೀರಕ್ಕೆ ಅಪಾಯ ಒಡ್ಡುತ್ತಿದೆ.

    ಟಿಬೆಟನ್ನು ಚೀನಾ ಸೇನಾಕ್ರಮಣದ ಮೂಲಕ ನುಂಗುತ್ತಿದ್ದಾಗಲೇ ನೇಪಾಳದ ಅರಸ ತ್ರಿಭುವನ್ ತನ್ನ ದೇಶವನ್ನು ಭಾರತದಲ್ಲಿ ವಿಲೀನಗೊಳಿಸಿಕೊಳ್ಳುವಂತೆ ನೆಹರೂರನ್ನು ಕೇಳಿಕೊಂಡರು. ನೆಹರೂ ನಿರಾಕರಿಸಿದ್ದಲ್ಲದೇ, ನೇಪಾಳ ಸ್ವತಂತ್ರವಾಗಿಯೇ ಇರುವುದು ಭಾರತಕ್ಕೆ ಹಿತಕಾರಿ ಎಂದು ಮುತ್ತು ಉದುರಿಸಿದರು! ಅದು ಎಷ್ಟರ ಮಟ್ಟಿಗೆ ಹಿತಕಾರಿ ಎಂದು ನಾವೀಗ ದಿನನಿತ್ಯವೂ ನೋಡುತ್ತಲೇ ಇದ್ದೇವೆ.

    ನಮ್ಮ ಅಂಡಮಾನ್ ದ್ವೀಪಗಳ ಉತ್ತರಕ್ಕಿರುವ ಎರಡು ಕೋಕೋ ದ್ವೀಪಗಳನ್ನು ನೆಹರೂ 1950ರ ದಶಕದ ಆದಿಯಲ್ಲಿ ತಟ್ಟೆಯಲ್ಲಿಟ್ಟು ಬರ್ವಗೆ (ಇಂದಿನ ಮ್ಯಾನ್ಮಾರ್) ಕೊಟ್ಟದ್ದು ನಿಮಗೆ ಗೊತ್ತೇ? ಆ ದ್ವೀಪಗಳಲ್ಲಿ 150 ವರ್ಷಗಳ ಹಿಂದೆ ದಕ್ಷಿಣ ಬರ್ವದ ಹಂಪಾವದಿಯ ರೆವಿನ್ಯೂ ಅಧಿಕಾರಿಗಳು ತೆರಿಗೆ ಸಂಗ್ರಹಿಸಿದ ದಾಖಲೆ ಇದೆ, ಆ ಕಾರಣದಿಂದಾಗಿ ಅವುಗಳ ಮೇಲೆ ನಮ್ಮ ಹಕ್ಕಿದೆ ಎಂದು ಬರ್ವಿುಯರು ಹೇಳಿದ್ದನ್ನು ನೆಹರೂ ಪ್ರತಿಯಾಡದೇ ಒಪ್ಪಿಕೊಂಡರು! ಇಂದು ಬರ್ವ ಆ ದ್ವೀಪಗಳನ್ನು ಚೀನಾಗೆ ಗುತ್ತಿಗೆಗೆ ಕೊಟ್ಟಿದೆ, ಅಲ್ಲಿ ಚೀನೀಯರು ಸೇನಾನೆಲೆಗಳನ್ನು ನಿರ್ವಿುಸಿದ್ದಾರೆ. ಅವು ಯಾರ ವಿರುದ್ಧ ಎಂದು ಹೇಳಬೇಕಾಗಿಲ್ಲ. 1939ರವರೆಗೂ ಬರ್ವ ಭಾರತದ ಭಾಗವಾಗಿದ್ದದ್ದು ನೆಹರೂಗೆ ಮರೆತುಹೋಗಿತ್ತು. ನೂರೈವತ್ತು ವರ್ಷಗಳ ಹಿಂದೆ ಬರ್ವಿುಯರು ಕೋಕೋದಲ್ಲಿ ತೆರಿಗೆ ಸಂಗ್ರಹಿಸಿದ್ದಕ್ಕಿಂತಲೂ, ಕೇವಲ 13 ವರ್ಷಗಳ ಹಿಂದಷ್ಟೇ ಇಡೀ ಬರ್ವ ಭಾರತದ ಭಾಗವಾಗಿದ್ದು ದೊಡ್ಡದಲ್ಲವೇ, ಮುಖ್ಯವಾಗುವುದಿಲ್ಲವೇ, ಅದನ್ನು ಮಾನ್ಯ ಮಾಡಬೇಕಲ್ಲವೇ ಎಂದು ಕೇಳಿ ನೆಹರೂ ಬರ್ವಿುಯರ ಬಾಯಿ ಮುಚ್ಚಿಸಬಹುದಾಗಿತ್ತು. ಹೀಗೆ ನೆಹರೂ ದೇಶಹಿತದ ವಿರುದ್ಧ ಎಸಗಿದ ಒಂದೊಂದು ಕ್ರಮಕ್ಕೂ ದೇಶವಿಂದು ಅಗಾಧ ಬೆಲೆ ತೆರುತ್ತಿದೆ. ಬ್ರಿಟಿಷರ ಸಂಪರ್ಕದಲ್ಲೇ ಬಹುಪಾಲು ಬದುಕನ್ನು ಕಳೆದ ನೆಹರೂರಿಗೆ ಅದೇ ಬ್ರಿಟಿಷರು ತಮ್ಮ ದೇಶದ ಹಿತಾಸಕ್ತಿ ಕಾಪಾಡಿಕೊಳ್ಳಲು ಅನುಕ್ಷಣವೂ ಬಳಸಿದ ರಿಯಲ್​ಪಾಲಿಟಿಕ್ ಯಾಕೆ ಪರಿಚಯವಾಗಲಿಲ್ಲ? ಪ್ರಪಂಚದ ಚರಿತ್ರೆಯ ಬಗ್ಗೆ Glimpses of World History ಎಂಬ ಬೃಹದ್ ಗ್ರಂಥ ಬರೆದ ಪಂಡಿತನಿಗೆ ರಿಯಲ್​ಪಾಲಿಟಿಕ್ ನೋಟವೇಕೆ ದಕ್ಕಲಿಲ್ಲ? ಯಾಕೆಂದರೆ ನೆಹರೂರ ಜ್ಞಾನ ಪುಸ್ತಕದ ಬದನೆಕಾಯಿಯಷ್ಟೇ. ಅವರದನ್ನು ಗಳಿಸಿದ್ದು ಸೆರೆವಾಸ ಎಂಬ ಹೆಸರಿನಲ್ಲಿ ಬ್ರಿಟಿಷರು ಇರಿಸಿದ ಐಷಾರಾಮಿ ಜೈಲುಗಳ ಲೈಬ್ರರಿಗಳಲ್ಲಿದ್ದ ಪುಸ್ತಕಗಳಿಂದಷ್ಟೇ, ಜಗತ್ತನ್ನು ಅವಲೋಕಿಸಿ ಅಲ್ಲ.

    ಆದರೆ ರಿಯಲ್​ಪಾಲಿಟಿಕ್ ಅನ್ನು ಅನುಸರಿಸಿದ್ದು ಇಂದಿರಾ ಗಾಂಧಿ. ವಿಧುರ ತಂದೆಯ ಮನೆವಾಳ್ತೆಯನ್ನು ನೋಡಿಕೊಳ್ಳುತ್ತಾ, ಅಲ್ಲಿಗೆ ಭೇಟಿ ನೀಡುತ್ತಿದ್ದ ವಿದೇಶೀ ನಾಯಕರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ರಾಜತಂತ್ರವನ್ನು ಕರಗತ ಮಾಡಿಕೊಂಡ ಇಂದಿರಾ ತಾವು ಪ್ರಧಾನಮಂತ್ರಿಯಾದ ಒಂದೂವರೆ ವರ್ಷದಲ್ಲಿ ಚೀನಾಗೆ ಮರೆಯಲಾಗದ ಪಾಠ ಕಲಿಸಿದರು. ಸೆಪ್ಟೆಂಬರ್-ಅಕ್ಟೋಬರ್ 1967ರಲ್ಲಿ ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೇನೆ ಚೀನೀ ಸೇನೆಯನ್ನು ಬಗ್ಗುಬಡಿದದ್ದು ಇಂದಿಗೂ ಆ ದೇಶದ ವಿರುದ್ಧ ನಮ್ಮ ಅತಿದೊಡ್ಡ ವಿಜಯ. ಹಾಗೆಯೇ, 1971ರಲ್ಲಿ ಪಶ್ಚಿಮ ಪಾಕಿಸ್ತಾನೀಯರ ವಿರುದ್ಧ ಪೂರ್ವ ಪಾಕಿಸ್ತಾನೀಯರು ದಂಗೆಯೆದ್ದಾಗ ಅವರಿಗೆ ಬೆಂಬಲಿಗರಾಗಿ ನಿಂತ ಇಂದಿರಾ, ನವೆಂಬರ್ 23ರಂದು ತಾವೇ ರಹಸ್ಯವಾಗಿ ಯುದ್ಧ ಆರಂಭಿಸಿ, ಹತ್ತು ದಿನಗಳ ನಂತರ ಪ್ರತಿಕ್ರಿಯಿಸಿದ ಪಾಕಿಸ್ತಾನವನ್ನೇ ಅಪರಾಧಿಯಾಗಿ ಜಗತ್ತಿನ ಮುಂದೆ ನಿಲ್ಲಿಸಿದರು. ಅವರ ನೀತಿಯನ್ನು ಮುಂದುವರಿಸಿದ ಅವರ ಮಗ ರಾಜೀವ್ ಗಾಂಧಿ ಪಂಜಾಬ್​ನಲ್ಲಿ ಪಾಕಿಸ್ತಾನ ಎಸಗುತ್ತಿದ್ದ ಕುಕೃತ್ಯಗಳಿಗೆ ಪ್ರತಿಯಾಗಿ ಅಂಥದೇ ಕೃತ್ಯಗಳನ್ನು ಬಲೂಚಿಸ್ತಾನ ಮತ್ತು ಸಿಂಧ್​ನಲ್ಲಿ ಎಸಗುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿ ಆ ದೇಶ ಖಲಿಸ್ತಾನ್ ಭಯೋತ್ಪಾದನೆಯನ್ನು ತಗ್ಗಿಸುವಂತೆ ಮಾಡಿದರು. ಪಾಕಿಸ್ತಾನ ಮತ್ತೆ ತಂಟೆ ತೆಗೆದದ್ದು ರಾಜೀವ್ ಅಧಿಕಾರ ಕಳೆದುಕೊಂಡ ಮೇಲೇ.

    ಇದೆಲ್ಲವೂ ಹೇಳುವುದು ನೆಹರೂರ ಆದರ್ಶವಾದಕ್ಕಿಂತ ಇಂದಿರಾ ಮತ್ತು ರಾಜೀವ್ ಪಾಲಿಸಿದ ರಿಯಲ್​ಪಾಲಿಟಿಕ್​ನಿಂದಲೇ ಒಳಿತಾಗಿದೆ ಎಂದು. ಇಂದು ಅದೇ ರಿಯಲ್​ಪಾಲಿಟಿಕ್ ಅನ್ನು ನರೇಂದ್ರ ಮೋದಿ ಹಿಂದೆಂದಿಗಿಂತಲೂ ದೊಡ್ಡದಾಗಿ ಅನುಸರಿಸುತ್ತಿದ್ದಾರೆ. ಪಾಕಿಸ್ತಾನದ ಕೈಗಳನ್ನು ಕಟ್ಟಿಹಾಕಿದ್ದಾರೆ, ಚೀನಾವನ್ನು ಕಕ್ಕಾಬಿಕ್ಕಿಗೊಳಿಸಿದ್ದಾರೆ. ಈಗ ರಿಯಲ್​ಪಾಲಿಟಿಕ್ ಅಂದರೇನು ಎಂದು ನಿಮಗೆ ಅರ್ಥವಾಗಿರಬೇಕಲ್ಲ. ಕನ್ನಡದಲ್ಲಿ ಇದನ್ನು ‘ವಾಸ್ತವಿಕರಾಜತಂತ್ರ’ ಎಂದು ಕರೆಯೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts