More

    ಪೌರಕಾರ್ಮಿಕರ ಮಕ್ಕಳ ದಿನ ಘೋಷಿಸಲು ಶಿಫಾರಸು: ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿಕೆ

    ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ನ.7ರಂದು ಶಾಲೆಗೆ ದಾಖಲಾತಿ ಪಡೆದಿದ್ದರು. ಈ ದಿನ ಜಿಲ್ಲೆಯಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ವಿಷಯ. ಈ ಹಿನ್ನೆಲೆಯಲ್ಲಿ ನ.7 ಅನ್ನು ಪೌರಕಾರ್ಮಿಕರ ಮಕ್ಕಳ ದಿನವೆಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ(ಕೋಟೆ) ತಿಳಿಸಿದರು.
    ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಂ.ಎಸ್.ಕಾಯ್ದೆ-2013 ರಂತೆ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
    ಪೌರಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಾತ್ರವಲ್ಲದೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಕೌಶಲಗಳನ್ನು ರೂಢಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಮುಂದಿನ ದಿನದಲ್ಲಿ ಎಸ್‌ಎಸ್‌ಎಲ್ಸಿಯಿಂದ ಮೇಲ್ಪಟ್ಟು ಎಲ್ಲ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೌರಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಗುವುದು. ಪೌರಕಾರ್ಮಿಕರು ನಿರ್ವಹಿಸುವಂತಹ ಕೆಲಸ ಬಹಳ ಕಷ್ಟಕರ. ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಗುತ್ತಿಗೆ ಹಾಗೂ ನೇರ ಪಾವತಿಯಲ್ಲಿ ಕಾರ್ಯನಿರ್ವಹಿಸುವಂತಹ ಕಾರ್ಮಿಕರನ್ನು ಕಾಯಂಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡರು. ಇದರಿಂದಾಗಿ ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರು ಕಾಯಂಗೊಂಡರು. ಇನ್ನುಳಿದ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಉನ್ನತ ಅಧಿಕಾರಿಗಳು, ಮುಖಂಡರನ್ನೊಳಗೊಂಡ ಸಮಿತಿ ರಚಿಸಿದ್ದಾರೆ. ಸಮಿತಿಗಳು ಸಭೆ ನಡೆಸಿ ಡಿಸೆಂಬರ್ ಅಂತ್ಯಕ್ಕೆ ಉಳಿದವರನ್ನೂ ಕಾಯಂಗೊಳಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.
    ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಮಾಜಿ ಸದಸ್ಯ ಜಗದೀಶ್ ಹಿರೇಮಣಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದಪೂಜೆ ಮಾಡಿದ್ದರು. ಪೌರಕಾರ್ಮಿಕರ ಸ್ವಾಭಿಮಾನ ಹೆಚ್ಚಿಸಿ ಗೌರವ ನೀಡುವ ನಿಟ್ಟಿನಲ್ಲಿ ಹಾಗೂ ಪೌರಕಾರ್ಮಿಕರ ಹುದ್ದೆ ಕಾಯಂ ಮಾಡಲು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಬಹಳಷ್ಟು ಸಭೆಗಳನ್ನು ನಡೆಸಿದ್ದಾರೆ ಎಂದರು.
    ಪೌರಕಾರ್ಮಿಕ ಹುದ್ದೆ ಗೌರವಯುತ ಹುದ್ದೆ. ಇಂದು 38 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗಲಿ. ಜಿಲ್ಲಾಡಳಿತದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಾವಂತ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಜತೆ ಪಿಯುಸಿ, ಪದವಿ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
    ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತೀಮಾ, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಮಾರಸ್ವಾಮಿ, ಮುಖಂಡರಾದ ಕೃಷ್ಣ, ನಂಜುಂಡ ಮೌರ್ಯ, ಎನ್.ಆರ್.ಚಂದ್ರಶೇಖರ್, ಕುಮಾರ್ ಇತರರಿದ್ದರು.
    ಇದೇ ವೇಳೆ ಮ್ಯಾನುಯಲ್ ಸ್ಕಾೃವೆಂಜಿಂಗ್ ನಿರ್ಮೂಲನೆ ಬಗ್ಗೆ ನಾಟಕ ಪ್ರದರ್ಶನ ನಡಯಿತು. ಐರಾವತ ಯೋಜನೆಯಡಿ ನಿಗಮದ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ಕಾರನ್ನು ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts