More

    ಉಡುಪಿ ಸ್ಮಾರ್ಟ್ ಸಿಟಿಗೆ ಪ್ರಸ್ತಾವನೆ

    ಗೋಪಾಲಕೃಷ್ಣ ಪಾದೂರು, ಉಡುಪಿ

    ಉಡುಪಿ-ಮಣಿಪಾಲ ಅವಳಿ ನಗರಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಿಂದ 150 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಅಂತಾರಾಷ್ಟ್ರೀಯ ಗುಣ್ಣಮಟ್ಟದ ಮೂಲಸೌಕರ್ಯ, ಸಂಚಾರ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಲಭಿಸಲಿದ್ದು, ಜನರಿಗೆ ಆನ್‌ಲೈನ್ ಮೂಲಕವೇ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ಈ ಬಗ್ಗೆ ಬೆಂಗಳೂರಿನ ಸಂಸ್ಥೆ ಡಿಪಿಆರ್ ತಯಾರಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.

    ಏನೇನು ಸೌಲಭ್ಯ?: ಪಿಪಿಪಿ ಮಾದರಿಯನ್ವಯ ನಗರಸಭೆ ಹಾಗೂ ಜಿಲ್ಲಾಡಳಿತ ಖಾಸಗಿ ಸಂಸ್ಥೆಗಳೊಂದಿಗೆ ಆಯಾ ಪ್ರದೇಶಗಳ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಜಾಹೀರಾತು ಹಾಗೂ ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯಗಳಿಂದ ಹೂಡಿಕೆ ಮೊತ್ತ ಪಡೆದು ದೈನಂದಿನ ನಿರ್ವಹಣೆ ಮಾಡಬೇಕಿದೆ. ಪ್ರಮುಖ ಬಸ್ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಇರಲಿದೆ. ಬಸ್‌ಗಳ ಸಂಚಾರ ಮಾಹಿತಿಗಳನ್ನು ಆ್ಯಪ್ ಮೂಲಕ ಪಡೆಯಬಹುದು. ಸ್ಮಾರ್ಟ್ ಪಾರ್ಕಿಂಗ್ ಆ್ಯಪ್ ಮೂಲಕ ಬಹುಮಹಡಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಜಾಗವನ್ನು ಮನೆಯಿಂದ ಹೊರಡುವಾಗಲೇ ಗೊತ್ತುಪಡಿಸಿಕೊಳ್ಳಬಹುದು. ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಯಿಂದ ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಸಿಗಲಿದೆ.

    ಸ್ಮಾರ್ಟ್ ಸಿಗ್ನಲ್: ನಗರದ ಪ್ರಮುಖ ಕಡೆ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗೆ ಎಲ್‌ಪಿ ಕ್ಯಾಮರಾ ಅಳವಡಿಸಿರುವ ಸ್ಮಾರ್ಟ್ ಸಿಗ್ನಲ್ ಗಳು ನಗರದ ಕಲ್ಸಂಕ, ಡಯಾನಾ ಸರ್ಕಲ್ ಸಹಿತ 15 ಕಡೆ ನಿರ್ಮಾಣವಾಗಲಿವೆ. ಸಿಸಿಟಿವಿ ಪರಿವೀಕ್ಷಣೆಗೆ ಕಮಾಂಡ್ ಸೆಂಟರ್, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕೊಠಡಿ ನಿರ್ಮಿಸಲಾಗುತ್ತದೆ. ಭವಿಷ್ಯದಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಬಳಕೆ ಗಮನದಲ್ಲಿ ಇರಿಸಿಕೊಂಡು ಇ- ಚಾರ್ಜಿಂಗ್ ಸೆಂಟರ್‌ಗಳ ನಿರ್ಮಾಣ, ಬಸ್‌ಬೇ, ಆಟೋ ಬೇ, ಬೈಕ್ ಬೇ, ಸೈಕ್ಲಿಂಗ್ ಪಾಥ್, ಇ-ಟಾಯ್ಲೆಟ್, ಸ್ಮಾರ್ಟ್ ಲಾಂಜ್ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ.

    ಪಿಪಿಪಿ ಮಾದರಿಯಲ್ಲಿ ಉಡುಪಿ ಮತ್ತು ಮಣಿಪಾಲ ಅವಳಿ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನ ಖಾಸಗಿ ಸಂಸ್ಥೆ ಡಿಪಿಆರ್ ತಯಾರಿಸಿ ವರದಿ ನೀಡಿದೆ. ಭವಿಷ್ಯದಲ್ಲಿ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಇದು ಪೂರಕ. ಉಡುಪಿ ಒನ್ ಆ್ಯಪ್ ಮೂಲಕ ಎಲ್ಲ ಸೌಲಭ್ಯಗಳು ಒಂದೇ ಕಡೆ ಸಿಗಲಿವೆ. ಸರ್ಕಾರದಿಂದ ಅನುಮೋದನೆ ಲಭಿಸಿದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
    ಕೆ.ರಘುಪತಿ ಭಟ್
    ಶಾಸಕರು, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts