More

    ಹಿಂದುಳಿದ ವರ್ಗಗಳಿಗೂ ಮೀಸಲಾತಿ ಸಿಗ್ಬೇಕು; ಹಿಂದುಳಿದ ವರ್ಗಗಳ ಜಾಗೃತಿ ಸಭೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ್ ಅಭಿಪ್ರಾಯ

    ತುಮಕೂರು: ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಬೇಕು. ರಾಜಕೀಯ ಸ್ಥಾನಮಾನ ಎಲ್ಲರಿಗೂ ಲಭಿಸುವಂತೆ ಆಗಬೇಕು ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.

    ನಗರದ ಖಾಸಗಿ ರೆಸಾರ್ಟ್‌ನಲ್ಲಿ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ದಲಿತರಷ್ಟೇ ಅವಮಾನವನ್ನು ಇತರ ಹಿಂದುಳಿದ ಸಮುದಾಯಗಳು ಅನುಭವಿಸುತ್ತಿವೆ ಎಂದು ಬೇಸರಿಸಿದರು.

    ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಹಿಂದುಳಿದ ಸಮುದಾಯಗಳ ಅಸಹಾಯಕರಿಗೆ ಅನ್ಯಾಯವಾಗುವುದನ್ನು ತಡೆಯಬೇಕು. ಅಸಹಾಯಕ ಸಮುದಾಯಗಳ ಮೀಸಲಾತಿ ಕಿತ್ತುಕೊಳ್ಳಲು ಹುನ್ನಾರ ನಡೆಯುತ್ತಿದೆ. ಇತ್ತೀಚೆಗೆ 2ಎ ಮೀಸಲಾತಿಗೆ ಸೇರಿಸುವಂತೆ ಬಂದಿರುವ ಬಲಾಢ್ಯರ ಬಗ್ಗೆಯೂ ಎಚ್ಚರಗೊಂಡು ವಿರೋಧ ವ್ಯಕ್ತಪಡಿಸಬೇಕಿದೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.

    ರಾಜ್ಯದಲ್ಲಿ ಹಿಂದುಳಿದ ವರ್ಗದ ದೇವರಾಜ ಅರಸು, ಬಂಗಾರಪ್ಪ, ವೀರಪ್ಪಮೊಯ್ಲಿ, ಧರಂಸಿಂಗ್ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆದರೂ ಜನರ ಮನಸ್ಸಿನಲ್ಲಿ ಉಳಿದಿರುವುದು ಅರಸು, ಬಂಗಾರಪ್ಪ, ಸಿದ್ದರಾಮಯ್ಯ ಮಾತ್ರ. ಬಡಜನರ ಕಲ್ಯಾಣಕ್ಕಾಗಿ ದುಡಿಯುವ ನಾಯಕರಿಗೆ ಅಗತ್ಯ ಬೆಂಬಲ ನೀಡಬೇಕು ಎಂದರು.

    ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮಾತನಾಡಿ, ಹಿಂದುಳಿದ ವರ್ಗಗಳ ಹೆಚ್ಚು ಸಮುದಾಯ ಇರುವ ಜಿಲ್ಲೆಯಲ್ಲಿ ಸಂಘಟನೆಗೆ ಒತ್ತು ನೀಡಬೇಕಿದೆ. ಸಂವಿಧಾನದ ಉದ್ದೇಶದಂತೆ ಸಮಸಮಾಜ ನಿರ್ಮಾಣವಾಗುವವರೆಗೂ ಮೀಸಲಾತಿ ಅಗತ್ಯವಿದೆ ಎಂದರು.

    ಮೀಸಲಾತಿ ತಲುಪಿಯೇ ಇಲ್ಲ: ಡಾ.ಬಿ.ಆರ್.ಅಂಬೇಡ್ಕರ್ ರಾಜಕೀಯ ಮೀಸಲಾತಿ ಹತ್ತು ವರ್ಷ ಮಾತ್ರ ಇರಬೇಕು ಎಂದು ಹೇಳಿದ್ದರು. ಹತ್ತು ವರ್ಷಕ್ಕೆ ಸಮಸಮಾಜದ ನಿರ್ಮಾಣ ಸಾಧ್ಯ ಎಂಬುದು ಅವರ ನಂಬಿಕೆ ಆಗಿತ್ತು. ಆದರೆ, ಅದು ಹುಸಿಯಾಗಿದೆ. ಇಂದಿಗೂ ಸಮಾನತೆ ಬಂದಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ.52 ಜನರು ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಶೇ.27 ಮೀಸಲಾತಿ ಸಿಗುತ್ತಿದೆ. ಇದರಲ್ಲೂ ಬಹುತೇಕ ಸಮುದಾಯಗಳಿಗೆ ಇಂದಿಗೂ ಮೀಸಲಾತಿ ತಲುಪಿಲ್ಲ ಎಂದು ಕಾಂತರಾಜು ಹೇಳಿದರು.

    ಜಾತಿ ಗಣತಿ ಅಲ್ಲ:53 ಅಂಶಗಳೊಂದಿಗೆ ಸಾಮಾಜಿಕ, ಆರ್ಥಿಕ ಗಣತಿ ಮಾಡಲಾಗಿದೆ. ಅದನ್ನು ಜಾತಿ ಗಣತಿ ಎಂದು ಭಾವಿಸಬಾರದು. ಜಾತಿಯನ್ನು ಹೊಡೆದೋಡಿಸಲು ಅಗತ್ಯವಾದ ಜಾತಿಯ ಬಗೆಗಿನ ಮಾಹಿತಿಯನ್ನು ನಮ್ಮ ಆಯೋಗದ ವರದಿಯಲ್ಲಿ ನೀಡಲಾಗಿದೆ. ಸರ್ಕಾರ ಅದನ್ನು ಒಪ್ಪಿ ಬಹಿರಂಗಪಡಿಸುವ ಬಗ್ಗೆ ಯೋಚಿಸಬೇಕು ಎಂದು ಕಾಂತರಾಜು ಸಲಹೆ ನಿಡಿದರು.

    75ಕ್ಕೂ ಹೆಚ್ಚು ಸಮುದಾಯಕ್ಕೆ ಮೀಸಲು ಸಿಕ್ಕಿಲ್ಲ: ದಲಿತರಷ್ಟೇ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳು ಒಬಿಸಿಯಲ್ಲಿವೆ. 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಸೇರಿದರೆ ಸಹಜವಾಗಿ ಆತಂಕವುಂಟಾಗುತ್ತದೆ. ಪ್ರಸ್ತುತ 2ಎ ಪ್ರವರ್ಗದಲ್ಲಿ 102 ಸಮುದಾಯಗಳಿದ್ದು 75ಕ್ಕೂ ಹೆಚ್ಚು ಸಮುದಾಯಕ್ಕೆ ಇನ್ನೂ ಮೀಸಲಾತಿ ಸಿಕ್ಕಿಲ್ಲ. ಇಂಥ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಈ ಪ್ರವರ್ಗದಲ್ಲಿರುವ ಸಣ್ಣಪುಟ್ಟ ಸಮುದಾಯಗಳು ತಬ್ಬಲಿಗಳಾಗುತ್ತವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದರು.

    ಕಾಂಗ್ರೆಸ್ ಮುಖಂಡರಾದ ಎಂ.ಸಿ.ವೇಣುಗೋಪಾಲ್, ವಿ.ಆರ್.ಸುದರ್ಶನ್, ಮುಖ್ಯಮಂತ್ರಿಚಂದ್ರು, ರಮೇಶ್, ಜೆಡಿಎಸ್ ಮುಖಂಡ ಗೋವಿಂದರಾಜು ಮತ್ತಿತರರು ಇದ್ದರು.

    ಚುನಾವಣೆಗೆ ಸ್ಪರ್ಧಿಸುವವರೇ ಇಲ್ಲ!: ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿಯಿರುವ ಮುಖಂಡರು ಕಾಂಗ್ರೆಸ್‌ನಲ್ಲಿಲ್ಲ. ಹಾಗಾಗಿ, ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲು ಸಾಧ್ಯವಾಗಿಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು. ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರಿಗೆ ವಿಧಾನಸಭೆಯಲ್ಲಿ ಟಿಕೆಟ್ ನೀಡುವ ಸಾಮರ್ಥ್ಯವಿದ್ದರೂ ಏಕೆ ಅವಕಾಶ ನೀಡಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಮುಖಂಡರ ಕೊರತೆಯಿದೆ. ಜೆಡಿಎಸ್, ಬಿಜೆಪಿ ಸೋಲುವ ಕಡೆಯಷ್ಟೇ ಟಿಕೆಟ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಸಮರ್ಥರಾದ ನಾಯಕರನ್ನು ಏಕೆ ಬೆಳೆಸಲಾಗುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ರಾಜಣ್ಣ ನಿರುತ್ತರರಾದರು.

    ಸಿದ್ದರಾಮಯ್ಯ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದಿದ್ದ ಐತಿಹಾಸಿಕ ಅಹಿಂದ ಸಮಾವೇಶಕ್ಕೆ ನಾನು ಹಣ ನೀಡಿದ್ದೆ. ಪಕ್ಷದ ಸೂಚನೆಯನ್ನೂ ಧಿಕ್ಕರಿಸಿ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಆದರೆ, ಇದನ್ನು ಯಾರೂ ಹೇಳುವುದಿಲ್ಲ. ನಾನೇ ಹೇಳಿಕೊಳ್ಳಬೇಕು. ಅಹಿಂದ ಸಮಾವೇಶ ಯಶಸ್ವಿಯಾಗಿದ್ದು ಸಿದ್ದರಾಮಯ್ಯ ಸಿಎಂ ಆಗಲು ಕಾರಣವಾಯಿತು.
    ಡಾ. ಜಿ.ಪರಮೇಶ್ವರ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts