More

    ಪ್ರಜ್ವಲ್ ಪ್ರಕರಣದಲ್ಲಿ ನಿಸ್ಪಕ್ಷಪಾತವಾಗಿ ಎಸ್‌ಐಟಿ ತನಿಖೆ; ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದ ಗೃಹ ಸಚಿವ ಪರಮೇಶ್ವರ್; ಡಿಕೆಶಿ ವಿರುದ್ದ ದೂರು ಬಗ್ಗೆ ಎಸ್‌ಐಟಿ ಪರಿಶೀಲನೆ ಮಾಡಲಿದೆ

    ಬೆಂಗಳೂರು:
    ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಎಸ್‌ಐಟಿ ನಿಸ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರನ್ನು ಕರೆ ತರಲು ಬ್ಲೂ ಕಾರ್ನರ್ ನೋಟೀಸ್ ಕೊಡಲಾಗಿದೆ ಎಂದರು.
    ಬ್ಲೂ ಕಾರ್ನರ್ ನೋಟೀಸ್ ವ್ಯಾಪ್ತಿಯಲ್ಲಿ 34 ದೇಶಗಳಿದ್ದು, ಆರೋಪಿತ ವ್ಯಕ್ತಿಯನ್ನ ಹುಡುಕಿ, ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತಾರೆ. ಪ್ರಜ್ವಲ್ ಬರುವವರೆಗೂ ತೀವ್ರ ಗತಿಯಲ್ಲಿ ವಿಚಾರಣೆ ನಡೆಯೋದು ಕಷ್ಟ ಎಂದು ಹೇಳಿದರು.
    ರೇವಣ್ಣ ಅವರನ್ನ ಬಂಧಿಸಿ, ಮಾಹಿತಿ ಪಡೆಯಲಾಗಿದೆ. ದೂರು ಕೊಟ್ಟವರಿಂದ ಮಾಹಿತಿ ಪಡೆಯಲಾಗಿದೆ. ಇನ್ನು ತನಿಖೆಯ ಬಗ್ಗೆ ಹೆಚ್ಚಿನ ವಿವರಣೆ ಕೊಡಲು ಸಾಧ್ಯವಿಲ್ಲ ಎಂದರು.
    ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಲು ಆಗುವುದಿಲ್ಲ. ಎಸ್‌ಐಟಿ ಯಾವ ರೀತಿ ಕೆಲಸ ಮಾಡುತ್ತೆ ಅಂತ ಅವರಿಗೂ ಗೊತ್ತಿದೆ. ಜನಸಮುದಾಯ ಕೂಡ ಗಮನಿಸಿದೆ. ಸಿಬಿಐ ತನಿಖೆ ಅಗತ್ಯ ಕಂಡು ಬಂದಿಲ್ಲ. ಈ ಹಿಂದೆ ಸಿಬಿಐಗೆ ಕೊಟ್ಟ ಪ್ರಕರಣಗಳು ಏನಾಗಿದೆ ಎನ್ನುವುದು ಗೊತ್ತಿದೆ.
    ಐಎಎಸ್ ಅಧಿಕಾರಿ ರವಿ ಅವರ ಕೇಸ್ ಏನಾಯಿತು? ಸಿಬಿಐ ಅಂದ ತಕ್ಷಣ ಏನೋ ಆಗುತ್ತೆ ಅನ್ನೋ ಪರಿಕಲ್ಪನೆ ಬೇಡ ಎಂದರು.
    ಎಸ್‌ಐಟಿ ತನಿಖೆ ಮಧ್ಯೆ ಪ್ರವೇಶ ಮಾಡುವುದಿಲ್ಲ. ನಾವು ಅವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟಿದ್ದೇವೆ. ಕಾನೂನಿನ ಪ್ರಕಾರ ಏನು ಮಾಡಬೇಕು ಅಂತ ಅವರಿಗೆ ಗೊತ್ತಿದೆ. ಆದ್ದರಿಂದ ಅವರ ಮೇಲೆ ವಿಶ್ವಾಸ ಇಡೋಣ. ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದರು.

    ಸಾಕ್ಷಿ ಇಲ್ಲದೆ ಬಂಧನ ಸಾಧ್ಯವಿಲ್ಲ
    ಸಾಕ್ಷಿ ಇಲ್ಲದೆ ಯಾರನ್ನು ಬಂಧನ ಮಾಡಲು ಸಾಧ್ಯವಿಲ್ಲ. ಕಾರ್ತಿಕ್‌ಗೌಡ, ದೇವರಾಜೇಗೌಡರನ್ನ ವಕೀಲರಾಗಿ ಮಾಡಿಕೊಂಡಿದ್ದಾರೆ. ಟೆಕ್ನಿಕಲ್ ಆಗಿ ಕಾನೂನಿನ ಮೂಲಕ ಬಂಧನ ಮಾಡಬೇಕಾದರೆ ಮಾಹಿತಿ ಇರಬೇಕು. ಸಾಕ್ಷಿ ಇಲ್ಲದೆ, ದೇವರಾಜೇಗೌಡ ಅಥವಾ ಕಾರ್ತಿಕ್‌ಗೌಡ ಬಂಧನ ಸಾಧ್ಯವಿಲ್ಲ.
    ಅವರ ಹೇಳಿಕೆ ಪರಿಶೀಲಿಸಬಹುದು ಅಷ್ಟೆ ಎಂದರು.

    ಜರ್ಮನಿಗೆ ಹೋಗಿರೋದು ಸ್ಪಷ್ಟ
    ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿರೋದು ಸ್ಪಷ್ಟ ಇದೆ. ಯಾವುದೇ ಏಜೆನ್ಸಿ ಟಿಕೆಟ್ ಪರ್ಚೇಸ್ ಮಾಡಿದರೂ ನಮಗೆ ಗೊತ್ತಾಗಲಿದೆ. ಕೆಲವರು ದುಬೈಗೆ ಹೋಗಿದ್ದಾರೆ ಅಂತ ಹೇಳುತ್ತಿದ್ದಾರೆ.
    ಯಾವುದೇ ಸ್ಪೆಷಲ್ ಅಥವಾ ಚಾರ್ಟೆಡ್ ಫ್ಲೈಟ್ ಮಾಡಿದ್ರೂ ಮಾಹಿತಿ ಸಿಗಲಿದೆ ಎಂದರು.
    ಇಂಟಲಿಜೆನ್ಸಿ ೇಲೂರ್ ಎನ್ನುವುದು ಯಾಕೆ? ಇಮಿಗ್ರೇಷನ್ ನಮ್ಮ ಬಳಿ ಇದೆಯೇ?
    ಬ್ಲೇಮ್ ಗೇಮ್ ಮಾಡೋದಾದ್ರೆ ನಾವೂ ಅವರ ಮೇಲೆ ಹೇಳಬಹುದಲ್ಲವೇ? ಎಂದರು.

    ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ
    ಎಸ್‌ಐಟಿಗೆ ಎಲ್ಲಾ ಮಾಹಿತಿ ಇದೆ. ಸಂತ್ರಸ್ತ ಮಹಿಳೆಯರಿಗೆ ಮಾತ್ರ ರಕ್ಷಣೆ ಅಲ್ಲ, ಎಲ್ಲರಿಗೂ ರಕ್ಷಣೆ ಇದೆ. ಬಂದಿಸಲು ಸಾಕ್ಷಿ ಬೇಕು. ಇಲ್ಲದಿದ್ರೆ ಅವರಿಗೆ ಬೇಲ್ ಸಿಗಲಿದೆ ಎಂದರು.
    ದೇವರಾಜೇಗೌಡ ಎಸ್‌ಐಟಿ ವಿರುದ್ಧ ಮಾಡಿರುವ ಆರೋಪಗಳು ಅವರ ಹೇಳಿಕೆ. ಆ ರೀತಿ ಹೇಳಿದ್ದರೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅವರು ಅವರ ಕೆಲಸ ಮಾಡಬೇಕು. ಈವರೆಗೂ ಐದು ಕಂಪ್ಲೆಂಟ್ ದಾಖಲಾಗಿದೆ. ಎಷ್ಟು ದೂರು ಬಂದಿದೆ ಎನ್ನುವುದನ್ನು ಹೇಳಲಾಗಲ್ಲ ಎಂದರು.

    ಡಿಕೆಶಿ ವಿರುದ್ದ ದೂರು: ಎಸ್‌ಐಟಿ ಪರಿಶೀಲನೆ
    ಡಿಕೆಶಿ ಕೂಡ ಪ್ರಕರಣದಲ್ಲಿದ್ದಾರೆ ಅನ್ನೋ ಆರೋಪ ಇದ್ದರೆ ಅದನ್ನು ಎಸ್‌ಐಟಿ ಗಮನಿಸಲಿದೆ. ಎಸ್‌ಐಟಿ ಯಾರೂ ಕೂಡ ಪ್ರಭಾವ ಬೀರಲು ಸಾಧ್ಯವಿಲ್ಲ. ದೇವರಾಜೇಗೌಡರ ಹೇಳಿಕೆಯಲ್ಲಿ ಎಸ್‌ಐಟಿ ಅಧಿಕಾರಿ, ಡಿಕೆಶಿ ಹೆಸರನ್ನು ಡೆಲಿಟ್ ಮಾಡಿ ಅಂತ ಹೇಳಿದ್ದರೆ, ಅದನ್ನ ಮುಖ್ಯಸ್ಥರು ಗಮನಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
    ಯಾವುದನ್ನೂ ನಾವು ಮುಚ್ಚಿಡೋದಕ್ಕೆ ಆಗಲ್ಲ. ಎಸ್‌ಐಟಿ ಇಂದು ಮುಚ್ಚಿಡಬಹುದು. ಆದರೆ ನಾಳೆ ಹೊರಗೆ ಬರುತ್ತಲ್ವಾ? ಡಿಸಿಎಂ ಡಿಕೆಶಿ ದೇವರಾಜೇಗೌಡ ಜೊತೆ ಮಾತಾಡಿರೋ ಆಡಿಯೋ ವಿಷಯ ಗೊತ್ತಿದೆ. ಡಿಕೆಶಿ ಜವಬ್ದಾರಿ ಸ್ಥಾನದಲ್ಲಿದ್ದಾರೆ. ಅವರ ವಿರುದ್ಧ ದೂರು ವಿಚಾರದಲ್ಲಿ ನೋಟೀಸ್ ಕೊಡೋ ಬಗ್ಗೆ ಎಸ್‌ಐಟಿ ತೀರ್ಮಾನ ಮಾಡಲಿದೆ ಎಂದರು.

    ಸಭೆ ಮಾಡಬೇಕಲ್ವಾ?
    ಎಸ್‌ಐಟಿ ಏನು ಮಾಡುತ್ತಿದೆ ಎನ್ನುವ ಮಾಹಿತಿ ಸಿಎಂ ಹಾಗೂ ಗೃಹಸಚಿವರಿಗೆ ಮಾಹಿತಿ ಇರಬೇಕಲ್ವಾ.? ಹಾಗಾಗಿ ಅಧಿಕಾರಿಗಳ ಕರೆದು ಮಾಹಿತಿ ಪಡೀತೀವಿ. ಅದರಲ್ಲಿ ತಪ್ಪೇನಿದೆ ಎಂದರು.
    ಪರಮೇಶ್ವರ್‌ಗೆ ಬೆನ್ನು ಮೂಳೆ ಇದೆಯಾ ಎಂದು ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ನಮ್ಮನ್ನ ಆರಿಸಿ ಜನ ಕಳಿಸಿದ್ದಾರೆ ಎಂದರು.

    ಬಿಟ್ ಕಾಯಿನ್ ಹಗರಣ:
    ಬಿಟ್ ಕಾಯಿನ್ ಹಗರಣ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಹಂತ ಹಂತವಾಗಿ ವಿಚಾರಣೆ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ಶ್ರೀಕಿ ಅಂತ ಇದ್ದಾರೆ. ಎಲ್ಲಾ ರೀತಿ ಟೆಕ್ನಿಕಲ್ ನಾಲೆಡ್ಜ್ ಅವರಿಗಿದೆ. ಅವರಿಂದ ಎಲ್ಲಾ ಮಾಹಿತಿ ಪಡೆಯೋದ್ರಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. 62 ಬಿಟ್ ಕಾಯಿನ್ ಯೂಸ್ ಮಾಡಿದ್ದಾರೆ. ಅಂದಾಜು 32 ಕೋಟಿ ರೂಪಾಯಿ ಇರಬಹುದು. ಮಾಹಿತಿ ಸಿಕ್ಕ ಬಳಿಕ ಅವರನ್ನ ಬಂಧಿಸಲಾಗಿದೆ ಎಂದರು.
    ಕೇಂದ್ರದಲ್ಲಿ ಮತ್ತೊಂದು ಬಿಟ್ ಕಾಯಿನ್ ತನಿಖೆ ನಡೆಯುತ್ತಿದೆ. ನಮ್ಮಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಹಗರಣದಲ್ಲಿ ರಾಜಕಾರಣಿಗಳು ಇದ್ದಾರಾ? ಇಲ್ಲವೋ? ಬಗ್ಗೆಯೂ ವಿಚಾರಣೆ ನಡೆಯಲಿದ್ದು, ಸಾರ್ವಜನಿಕವಾಗಿ ಯಾರೆಲ್ಲಾ ಇದ್ದಾರೆ ಅಂತ ಗೊತ್ತಾಗಲಿದೆ ಎಂದರು.

    ಬರ ನಿರ್ವಹಣೆ:
    ರಾಜ್ಯದಲ್ಲಿ ಬರ ನಿರ್ವಹಣೆಗೆ ಕ್ರಮ ಸರಿಯಾಗಿ ಆಗುತ್ತಿದೆ. ಮೇವು ಬ್ಯಾಂಕ್ ಮಾಡ್ತಿದ್ದೇವೆ. ಮೇವನ್ನ ಹಂಚುತ್ತೇವೆ. ಜನರ ಕಷ್ಟಕ್ಕೆ ನಾವೂ ಬಾಗಿಯಾಗುತ್ತೇವೆ. ಜೂ.4ರ ವರೆಗೂ ಚುನಾವಣಾ ನೀತಿ ಸಂಹಿತೆ ಇದ್ದು, ಅದರ ತೆರವಿಗೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts