More

    ಅನಿಯಂತ್ರಿತ ಜನಸಂಖ್ಯೆಯಿಂದ ಆರ್ಥಿಕ ಸಮಸ್ಯೆ: ಶಾಸಕ ರಘುಪತಿ ಭಟ್ ಹೇಳಿಕೆ

    ಉಡುಪಿ: ಜನಸಂಖ್ಯೆ ಅಸಮತೋಲನದಿಂದ ಆರ್ಥಿಕ ಸಮಸ್ಯೆ ಎದುರಾಗಲಿದೆ. ಒಂದು ಕುಟುಂಬ ಎರಡು ಮಕ್ಕಳ ನೀತಿ ಪಾಲಿಸಿಕೊಂಡರೆ ಜಗತ್ತಿಗೆ ಭಾರತ ಮಾನವ ಸಂಪನ್ಮೂಲಗಳನ್ನು ಒದಗಿಸುವ ಕೇಂದ್ರವಾಗಲಿದೆ. ಹೀಗಾಗಿ ಮುಂದಿನ ಆಧಿವೇಶನದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸುವಂತೆ ಸರ್ಕಾರ ಹಾಗೂ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.

    ಅಂಬಲಪಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಗತಿ ಸೌಧದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ, ಮಲೇರಿಯಾ ಹಾಗೂ ಡೆಂಗೆ ವಿರೋಧಿ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.
    ಉತ್ತರ ಪ್ರದೇಶ, ಅಸ್ಸಾಂನಲ್ಲಿ ಜಾರಿಗೆ ತರಲು ಉದ್ದೇಶಿದ ಮಸೂದೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಆಂತಹ ಪೋಷಕರಿಗೆ ಸರ್ಕಾರದಿಂದ ಯಾವುದೇ ಯೋಜನೆ ಹಾಗೂ ಸವಲತ್ತುಗಳು ಸಿಗುವುದಿಲ್ಲ. ಇದು ಸಮಾನ ನಾಗರಿಕ ಸಂಹಿತೆಗೆ ಹತ್ತಿರವಾದ ಹಾಗೂ ಒಳ್ಳೆಯ ಕಾನೂನು. ರಾಜ್ಯದಲ್ಲೂ ಈ ಕಾಯ್ದೆ ಜಾರಿಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.

    ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿ ಯೋಜನೆಯನ್ನು ಕೈಗೊಂಡಾಗ, ಗದ್ದೆಗಳಲ್ಲಿ ಹೆಚ್ಚು ನೀರು ಶೇಖರಣೆಯಾಗುವ ಜಾಗಗಳಲ್ಲಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದ್ದು, ಈ ರೀತಿ ಕಾರ್ಯಗಳನ್ನು ಕೈಗೊಂಡಾಗ ಡೆಂಗೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.

    ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌ಅಧ್ಯಕ್ಷತೆ ವಹಿಸಿದ್ದರು. ಜನಸಂಖ್ಯೆ ದಿನಾಚರಣೆ, ಮಲೇರಿಯಾ ಹಾಗೂ ಡೆಂಗೆ ಮಾಸಾಚರಣೆ ಕರಪತ್ರ ಬಿಡುಗಡೆಗೊಳಿಸಲಾಯಿತು. ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮ ರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್ ಉಪಾಧ್ಯಾಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

    ಜನಸಂಖ್ಯೆ ಏರಿಕೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಡತನ, ಅರ್ಥಿಕತೆ ಹಾಗೂ ಶಿಕ್ಷಣಕ್ಕೆ ಎದುರಾಗುವ ಕಷ್ಟಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದರು.
    ಸುಮಿತ್ರಾ ನಾಯಕ್, ನಗರಸಭೆ ಅಧ್ಯಕ್ಷೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts