More

    ಒಕ್ಕಲಿಗರ ಅಸ್ಮಿತೆಗಾಗಿ ‘ರಾಮನಗರ’ ಕಾಳಗ


    ಶಿವಾನಂದ ತಗಡೂರು, ಬೆಂಗಳೂರು:
    ರಾಮನಗರ ರಾಜಕಾರಣ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರಿದ್ದು, ಅದರ ಹಿಂದೆ ಒಕ್ಕಲಿಗರ ಅಸ್ಮಿತೆಗಾಗಿ ನಡೆಯುತ್ತಿರುವ ಹೋರಾಟ ಇನ್ನಷ್ಟು ಬಿರುಸಾಗಿದೆ.
    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಮುಗಿಬಿದ್ದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಮನಗರದ ಮೇಲೆ ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ಅಸ್ಮಿತೆಯ ಪ್ರಯೋಗ ಮಾಡಿರುವುದು ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಏಕಿಷ್ಟು ಸರ್ಕಸ್?
    ಎಚ್.ಡಿ.ದೇವೇಗೌಡರು ರಾಮನಗರಕ್ಕೆ ರಾಜಕಾರಣ ಹರಸಿ ಬಂದು 3 ದಶಕಗಳೇ ಕಳೆದಿವೆ. ಕಿರಿಯ ಪುತ್ರ ಎಚ್.ಡಿ.ಕುಮಾರಸ್ವಾಮಿಯನ್ನು ಈ ಕ್ಷೇತ್ರದಲ್ಲಿ ನೆಲೆಯಾಗಿಸಿ ತಮ್ಮ ರಾಜಕೀಯ ಪಗಡೆಯಾಟವನ್ನು ಲೀಲಾಜಾಲವಾಗಿ ಆಡಿಕೊಂಡೇ ಬಂದಿದ್ದಾರೆ. ಎಲ್ಲಿಯೂ ವಿರೋಧಿಗಳ ಕೈ ಮೇಲಾಗದಂತೆ ಎಚ್ಚರಿಕೆ ವಹಿಸುತ್ತಾ, ರಾಮನಗರ ಜಿಲ್ಲೆಯ ಹಿಡಿತ ಸಾಧಿಸುತ್ತಲೇ ಬಂದಿದ್ದ ದೊಡ್ಡಗೌಡರ ಕುಟುಂಬಕ್ಕೆ ಕಳೆದ ಚುನಾವಣೆ ಸೋಲು ಮರ್ಮಾಘಾತ ನೀಡಿದೆ.

    ಡಿಕೆಶಿ ಹಿಡಿತ
    ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಡಿಕೆಶಿ, ಅಧಿಕಾರದ ದಂಡ ಬಳಸಿಕೊಂಡು ಇಡೀ ಜಿಲ್ಲೆಯ ಹಿಡಿತ ಸಾಧಿಸ ಹೊರಟಿದೆ. ರಾಮನಗರದಲ್ಲಿರುವ ಗೌಡರ ಅಸ್ಮಿತೆಯನ್ನು ಕರಗಿಸಬೇಕು ಎನ್ನುವುದು ಡಿ.ಕೆ.ಶಿವಕುಮಾರ್ ಅವರ ಮುಂದಾಲೋಚನೆ. ಅದಕ್ಕಾಗಿಯೇ ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರನ್ನು ತೇಲಿಬಿಟ್ಟಿದ್ದಾರೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಜೊತೆ ಗುರುತಿಸಿಕೊಳ್ಳುವುದು ನಮಗೆ ಹೆಮ್ಮೆ ಎನ್ನುವ ಮಾತುಗಳನ್ನು ಹೇಳುವ ಮೂಲಕ ಜನರ ಮನವೊಲಿಕೆಗೂ ಮುಂದಾಗಿದ್ದಾರೆ.

    ಎಚ್ಡಿಕೆಗೂ ಪ್ರತಿಷ್ಠೆ
    1994ರಲ್ಲಿ ದೇವೇಗೌಡರು ಈ ಕ್ಷೇತ್ರ ಪ್ರತಿನಿಧಿಸಿ ಮುಖ್ಯಮಂತ್ರಿಯಾದರು. ನಾನು ಈ ಕ್ಷೇತ್ರದಿಂದಲೇ ಗೆದ್ದು ಎರಡು ಬಾರಿ ಸಿಎಂ ಆಗಿದ್ದೇನೆ ಎಂದು ರಾಮನಗರ ಜೊತೆಗೆ ಭಾವುಕ ಸಂಬಂಧಗಳನ್ನು ಬೆಸೆದುಕೊಂಡಿರುವ ಎಚ್‌ಡಿಕೆಗೆ ಇದನ್ನು ಜಿಲ್ಲೆಯಾಗಿ ಉಳಿಸಿಕೊಳ್ಳಬೇಕು ಎನ್ನುವ ಪ್ರತಿಷ್ಠೆಗೆ ಬಿದ್ದಿದ್ದಾರೆ. ಯಾಕೆಂದರೆ, ತಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದ ರಾಮನಗರವನ್ನು ಜಿಲ್ಲೆಯಾಗಿ ೋಷಣೆ ಮಾಡಿದ್ದಲ್ಲದೆ, ಅಭಿವೃದ್ಧಿ ಹೊಳೆಯನ್ನೆ ಹರಿಸಿ ಜಿಲ್ಲೆಯಲ್ಲಿ ಎರಡು ದಶಕಗಳಿಂದಲೂ ರಾಜಕೀಯ ಅಸ್ಥಿತ್ವವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ರಾಮನಗರ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡಲು ಹೊರಟಿರುವ ಡಿಕೆಶಿಯನ್ನು ರಾಜಕೀಯವಾಗಿ ಹಿಮ್ಮೆಟ್ಟಿಸಬೇಕು. ಇಲ್ಲದಿದ್ದರೆ ತಮ್ಮ ಭವಿಷ್ಯದ ರಾಜಕಾರಣಕ್ಕೆ ಬಾರಿ ಹಿನ್ನೆಡೆಯಾಗಲಿದೆ ಎನ್ನುವುದು ಎಚ್.ಡಿ.ಕುಮಾರಸ್ವಾಮಿ ಅವರ ಅಂದಾಜು. ಆ ಕಾರಣಕ್ಕಾಗಿಯೇ ರಾಮನಗರ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಡಿಕೆಶಿ ಮೇಲೆ ಮುಗಿಬಿದ್ದಿದ್ದಾರೆ.

    ಸ್ವಾಮೀಜಿಗಳ ಬುದ್ದಿವಾದ
    ಇಬ್ಬರು ಒಕ್ಕಲಿಗ ಮುಖಂಡರ ನಡುವೆ ಸಂಘರ್ಷ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಚುನಾವಣೆ ಪೂರ್ವ ಮತ್ತು ಚುನಾವಣೆ ನಂತರ ಸಮಾಜದ ಪ್ರಮುಖ ಸ್ವಾಮೀಜಿಗಳು ನಡೆಸಿದ ಮಾತುಕತೆ, ಪಂಚಾಯ್ತಿ ಲ ನೀಡಿಲ್ಲ. ಕುಮಾರಸ್ವಾಮಿ ಸಿಎಂ ಆಗುವಾಗ ಡಿಕೆಶಿ ಸಹಕಾರ ನೀಡಿದ್ದಾರೆ. ಅದೇ ರೀತಿ ಈ ಬಾರಿ ಡಿಕೆಶಿ ಸಿಎಂ ಆಗುವ ಯೋಗ ಬಂದಿದೆ. ಯಾರೂ ಅಡ್ಡಿಯಾಗಬೇಡಿ. ಸಮಾಜದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳೋಣ ಎಂದು ಸ್ವಾಮೀಜಿ ಮಾಡಿದ ಮನವಿಗೆ ಎಲ್ಲರೂ ಓಗೊಟ್ಟಿದ್ದರು. ದಿನವೂ ಎಚ್‌ಡಿಕೆ ವಾಗ್ದಾಳಿ ಮಾಡುತ್ತಿರುವ ಕಾರಣ ಡಿಕೆಶಿ ಸಹನೆಯ ಕಟ್ಟೆಯೊಡೆದಿದೆ. ಸಮಾಜದವರ ಮಾತು ಕೇಳಿ ಎಲ್ಲವನ್ನು ನುಂಗಿಕೊಂಡು ಸಮ್ಮನಿದ್ದೆ. ಇನ್ನು ಸಹಿಸಲಾಗದೆ ಎಂದು ಗುಡುಗಿರುವ ಡಿಕೆಶಿ ಅಖಾಡಕ್ಕೆ ಬಹಿರಂಗವಾಗಿಯೇ ದುಮುಖಿದ್ದಾರೆ.

    ಒಂದಿಷ್ಟು ಇತಿಹಾಸ:
    ರಾಜ್ಯ ರಾಜಕಾರಣದಲ್ಲಿ ರಾಮನಗರಕ್ಕೆ ದೊಡ್ಡ ಇತಿಹಾಸವೇ ಇದೆ. ಈ ಕ್ಷೇತ್ರ ಒಂದು ರೀತಿಯಲ್ಲಿ ಗಂಡು ಮೆಟ್ಟಿದ ನೆಲ ಎನ್ನುವ ವ್ಯಾಖ್ಯಾನವೂ ಇದೆ. ವಿಧಾನಸೌಧ ನಿರ್ಮಾಣ ಮಾಡಿದ ಖ್ಯಾತಿಯ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಇದೇ ಕ್ಷೇತ್ರವನ್ನು ಪ್ರತಿನಿಧಿಸಿದವರು.
    ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿದ್ದ ಎಚ್.ಡಿ.ದೇವೇಗೌಡರು ಅಲ್ಲಿ ಸೋತ ಮೇಲೆ, 1994ರಲ್ಲಿ ರಾಜಕೀಯ ಭವಿಷ್ಯ ಹರಿಸಿ ಬಂದಿದ್ದು ಇದೇ ರಾಮನಗರ ಕ್ಷೇತ್ರಕ್ಕೆ. ಇಲ್ಲಿ ಗೆದ್ದು ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದ್ದು ಇತಿಹಾಸ.
    ದೊಡ್ಡ ಗೌಡರ ರಾಜಕಾರಣದ ತೆಕ್ಕೆಗೆ ಒಲಿದ ಈ ಕ್ಷೇತ್ರವನ್ನು ಹಾಸನದ ರಾಜಕಾರಣಕ್ಕೆ ಒಗ್ಗಿಸಿಕೊಳ್ಳಲು ಮುಂದಾಲೋಚನೆ ಮಾಡಿ ಉತ್ತರಾದಿಕಾರಿಯಾಗಿ ತಮ್ಮ ಕಿರಿಯ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಲ್ಲಿಗೆ ನೆಲೆಯಾಗಿಸಿದರು.
    ಹೊಳೆನರಸೀಪುರ ರಾಜಕಾರಣವನ್ನು ರಾಮನಗರಕ್ಕೆ ಮಗನ ಮೂಲಕವೂ ಯಶಸ್ವಿಯಾಗಿ ಪ್ರಯೋಗಿಸಿದ ಕೀರ್ತಿಯೂ ಗೌಡರದ್ದು. ಹಲವು ರಾಜಕೀಯ ಏಳುಬೀಳು ಕಂಡರೂ, ರಾಮನಗರವನ್ನೆ ಗೌಡರು ತಮ್ಮ ರಾಜಕೀಯ ಶಕ್ತಿಯ ಗುರಾಣಿಯಾಗಿಸಿಕೊಂಡರು. ಈ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರ ನಡುವೆ ರಾಜಕೀಯ ಸಂಘರ್ಷಗಳೇ ನಡೆದಿವೆ. ಕುಮಾರಸ್ವಾಮಿ ಅವರ ಕಾಲಘಟ್ಟಕ್ಕೆ ಹೊಂದಾಣಿಕೆ ರಾಜಕಾರಣವೂ ನಡೆದಿದೆ. ಆದರೆ, ಈಗ ಇಬ್ಬರು ನಾಯಕರು ಮದಗಜಗಳಂತೆ ರಾಜಕೀಯ ಕಾದಾಟಕ್ಕೆ ತಿರುಗಿಬಿದ್ದಿದ್ದಾರೆ.
    ದೊಡ್ಡಗೌಡರ ಉತ್ತರಾಧಿಕಾರಿಯಾಗಿ ಬಂದ ರಾಮನಗರದಲ್ಲಿ ನೆಲೆ ಕಂಡ ಎಚ್.ಡಿ.ಕುಮಾರಸ್ವಾಮಿ, ತಮ್ಮ ಅಧಿಪತ್ಯದಲ್ಲಿ ರಾಜಕಾರಣದ ಹೊಸ ಶಕೆಗೆ ಕಾರಣರಾದರು.
    ಮೊದಲ ಸಲವೇ ಶಾಸಕರಾಗಿ ಗೆದ್ದು ಮುಖ್ಯಮಂತ್ರಿಯಾದ ಕುಮಾರಸ್ವಾಮಿ, ರಾಮನಗರ ಜಿಲ್ಲೆ ಮಾಡುವ ಮಹತ್ವದ ತೀರ್ಮಾನ ತೆಗೆದುಕೊಂಡದ್ದು, ಅವರಿಗೆ ರಾಜಕೀಯವಾಗಿ ಬಹು ದೊಡ್ಡ ಮೈಲೇಜ್ ನೀಡಿತು. ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ ಎಚ್‌ಡಿಕೆ, 2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ 2 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ವರ್ಚಸ್ಸು ವೃದ್ಧಿಸಿಕೊಂಡರು. ಚನ್ನಪಟ್ಟಣವನ್ನು ಉಳಿಸಿಕೊಂಡು, ರಾಮನಗರವನ್ನು ಪತ್ನಿ ಅನಿತಾಗೆ ಬಿಟ್ಟುಕೊಟ್ಟರು. ಆದರೆ, ಅದೇ ರಾಮನಗರದ ಮತದಾರ ಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಕಳೆದ ಚುನಾವಣೆಯಲ್ಲಿ ಮಣೆ ಹಾಕಲಿಲ್ಲ. ರಾಮನಗರದಲ್ಲಿ ಡಿಕೆಶಿ ಕೈ ಮೇಲಾಗಿದ್ದು, ಸಹಜವಾಗಿಯೇ ಕುಮಾರಸ್ವಾಮಿ ಅವರನ್ನು ಘಾಸಿಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts