More

    ‘ಒಕ್ಕಲಿಗ’ ದಾಳ ಉರುಳಿಸಿದ ಕಾಂಗ್ರೆಸ್: ಹಳೇ ಮೈಸೂರು ಪ್ರಾಂತ್ಯದ 21 ಕ್ಷೇತ್ರದಲ್ಲಿ ಪ್ರಾಬಲ್ಯ

    ಮಂಡ್ಯ: ಹಳೇ ಮೈಸೂರು ಭಾಗದ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಕ್ಕಲಿಗ ದಾಳವನ್ನು ಉರುಳಿಸುತ್ತಿದೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿಗೆ ಟಕ್ಕರ್ ಕೊಡಲು ತಂತ್ರಗಾರಿಕೆ ಎಣೆಯುತ್ತಿದೆ.
    ವಿಧಾನಸಭಾ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಯಲ್ಲಿ ಒಕ್ಕಲಿಗರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅದರಂತೆ ಹಿಂದಿನಿಂದಲೂ ಸಮುದಾಯದ ಬಲದೊಂದಿಗೆ ಜೆಡಿಎಸ್ ಪ್ರಾಬಲ್ಯ ಮೆರೆಯುತ್ತಿದೆ. ಇನ್ನು ಈ ಬಾರಿ ಬಿಜೆಪಿ ಕೂಡ ಸಮುದಾಯದ ಮತ ಬುಟ್ಟಿಗೆ ಕೈ ಹಾಕಿದ್ದು, ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಒಕ್ಕಲಿಗರನ್ನು ಓಲೈಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಸಮುದಾಯವನ್ನು ಸೆಳೆಯಲು ಮುಂದಾಗಿದೆ.
    21 ಕ್ಷೇತ್ರದಲ್ಲಿ ಪ್ರಾಬಲ್ಯ: ಹಳೇ ಮೈಸೂರು ಭಾಗದಲ್ಲಿ ಸಮುದಾಯ ಪ್ರಾಬಲ್ಯ ಹೊಂದಿದೆ. ಮಂಡ್ಯ ಜಿಲ್ಲೆಯಲ್ಲಿ ಏಳು, ಹಾಸನದಲ್ಲಿ ಏಳು, ಮೈಸೂರಿನಲ್ಲಿ ಆರು ಹಾಗೂ ಕೊಡಗಿನಲ್ಲಿ ಒಂದು ಕ್ಷೇತ್ರದಲ್ಲಿ ಒಕ್ಕಲಿಗರು ಫಲಿತಾಂಶ ಬದಲಿಸುವ ಶಕ್ತಿ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ 7, ಹಾಸನದಲ್ಲಿ 6 ಕ್ಷೇತ್ರದಲ್ಲಿ ಜೆಡಿಎಸ್ ಜಯಗಳಿಸಿದ ಪರಿಣಾಮ ಎಚ್.ಡಿ.ಕುಮಾರಸ್ವಾಮಿ ಸಿಎಂ ಹುದ್ದೆಗೇರುವಂತಾಯಿತು. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಬೇಕಾದರೂ ಹಳೇ ಮೈಸೂರು ಭಾಗದ ಜಿಲ್ಲೆಗಳ ಫಲಿತಾಂಶ ಮಹತ್ವದ್ದಾಗಿದೆ. ಆದ್ದರಿಂದಲೇ ಮೂರು ಪಕ್ಷಗಳು ಟಾರ್ಗೆಟ್ ಮಾಡಿವೆ.
    ಮಾತ್ರವಲ್ಲದೆ ಚಿಕ್ಕಮಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿಯೂ ಸಮುದಾಯ ಫಲಿತಾಂಶ ಬದಲಿಸುವ ಶಕ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಸಮುದಾಯದವರೊಂದಿಗೆ ಸಭೆಗಳನ್ನು ಆಯೋಜಿಸಲಾಗುತ್ತಿದೆ.
    ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡ ನಂತರ ಪಕ್ಷದ ಬಲವರ್ಧನೆಯಾಗಿದೆ. ಇನ್ನು 2018ರ ಸೋಲಿನಿಂದ ನಿತ್ರಾಣಗೊಂಡಿದ್ದ ಕಾಂಗ್ರೆಸ್‌ಗೆ ಹೊಸ ಚೈತನ್ಯ ತರುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದಕ್ಕೆ ಚಲುವರಾಯಸ್ವಾಮಿ ಸಾಥ್ ನೀಡಿದರು. ಪ್ರಮುಖವಾಗಿ ಮೇಕೆದಾಟು ಪಾದಯಾತ್ರೆ, 75ರ ಸ್ವಾತಂತ್ರೃ ನಡಿಗೆ, ಭಾರತ್ ಜೋಡೋ ಪಾದಯಾತ್ರೆ, ಪ್ರಜಾಧ್ವನಿ ಯಾತ್ರೆ ನಿರೀಕ್ಷೆಗೂ ಮೀರಿದ ಯಶಸ್ಸು ಡಿಕೆಶಿ ಅವರ ವರ್ಚಸ್ಸು ಹೆಚ್ಚಿಸಿದೆ. ಇದರಿಂದಾಗಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿಕೆಶಿ ಅವರಿಗೆ ಉನ್ನತ ಸ್ಥಾನ ಸಿಗಲಿದೆ ಎನ್ನುವುದು ಸಮುದಾಯದಲ್ಲಿ ಚರ್ಚಿತ ವಿಷಯವಾಗಿದೆ.
    ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರು ಭಾಗದವರಾಗಿದ್ದಾರೆ. ಹಿಂದುಳಿದ ಸಮುದಾಯದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಹಾಗೂ ಕಾಂಗ್ರೆನ್ ಸಾಂಪ್ರದಾಯಿಕ ಮತ ಬ್ಯಾಂಕ್‌ಗಳಾದ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳ ಕ್ರೋಢೀಕರಣವಾದರೆ ಹೆಚ್ಚಿನ ಸ್ಥಾನ ಗಳಿಸಬಹುದು. ಇದರೊಟ್ಟಿಗೆ ಒಕ್ಕಲಿಗ ಸಮುದಾಯವೂ ಸೇರಿಕೊಂಡರೆ ಹಳೇ ಮೈಸೂರಿನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯುವುದರಲ್ಲಿ ಅನುಮಾನವಿಲ್ಲ.
    ಡಿಕೆಶಿ ಬೆನ್ನಿಗೆ ಸಮುದಾಯ?: ಜೆಡಿಎಸ್ ಮತ್ತು ಬಿಜೆಪಿ ಸಮುದಾಯವನ್ನು ಓಲೈಸುತ್ತಿದ್ದರೂ ಹಳೇ ಮೈಸೂರು ಭಾಗದಲ್ಲಿ ಆ ಪಕ್ಷದಲ್ಲಿ ಒಕ್ಕಲಿಗ ಪ್ರಭಾವಿ ನಾಯಕ ಯಾರೆನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಮಾತ್ರವಲ್ಲದೆ ಅಧಿಕಾರಕ್ಕೆ ಬಂದರೂ ಉನ್ನತ ಹುದ್ದೆ ಸಿಗಲಿದೆಯೇ ಎನ್ನುವುದಕ್ಕೂ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಡಿಕೆಶಿ ಬೆನ್ನಿಗೆ ಸಮುದಾಯ ನಿಲ್ಲುವ ಸೂಚನೆ ಕಂಡುಬರುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿಕೆಶಿ ಅವರು ಸಿಎಂ ರೇಸ್‌ನಲ್ಲಿ ಪ್ರಮುಖವಾಗಲಿದ್ದಾರೆ. ಇದರಿಂದಾಗಿ ಸಮುದಾಯದ ಜನರು ಕೂಡ ಈ ಬಗ್ಗೆ ಯೋಚಿಸುತ್ತಿದ್ದಾರೆ.
    ಇನ್ನು ಈ ಬಗ್ಗೆ ಸ್ವತಃ ಡಿಕೆಶಿ ಅವರೇ ಪ್ರಜಾಧ್ವನಿ ಸಮಾವೇಶದಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಸಮುದಾಯದವರು ಎಲ್ಲರಿಗೂ ಒಂದು ಅವಕಾಶ ನೀಡಿದ್ದೀರಿ. ಈ ಬಾರಿ ನನಗೂ ಒಂದು ಅವಕಾಶ ನೀಡಿ ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಮಾತು ಒಕ್ಕಲಿಗ ಸಮುದಾಯವನ್ನು ಸೆಳೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts