More

    ಜೆಎನ್​ಯು ಗುಂಪು ಹಲ್ಲೆ: ಗೇಟ್​ವೇ ಆಫ್​ ಮುಂಬೈನಲ್ಲಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ಎಳೆದೊಯ್ದ ಮುಂಬೈ ಪೊಲೀಸರು

    ಮುಂಬೈ: ಜವಾಹರ‌ಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್​ಯು) ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಡೆದ ಗುಂಪು ಹಲ್ಲೆಯನ್ನು ಖಂಡಿಸಿ, ಮುಂಬೈನ ಭಾರತದ ಹೆಬ್ಬಾಗಿಲು ಬಳಿ ಭಾನುವಾರ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಮುಂಬೈ ಪೊಲೀಸರು ಬಲವಂತವಾಗಿ ಭಾರತದ ಹೆಬ್ಬಾಗಿಲಿನಿಂದ 2 ಕಿ.ಮೀ ದೂರದಲ್ಲಿರುವ ಆಜಾದ್​ ಮೈದಾನಕ್ಕೆ ಎಳೆದೊಯ್ಯಲಾಗಿದೆ.

    ಮಂಗಳವಾರ ಬೆಳಗ್ಗೆ ಅಧಿಕ ಸಂಖ್ಯೆಯಲ್ಲಿ ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಗೇಟ್​ವೇ ಆಫ್​ ಇಂಡಿಯಾ ಮುಂಬೈ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸ್​ ವ್ಯಾನ್​ಗಳಲ್ಲಿ ತುಂಬಿಕೊಂಡು ಆಜಾದ್​ ಮೈದಾನಕ್ಕೆ ಕರೆದೊಯ್ದರು.

    ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ಮುಂಬೈ ಗೇಟ್​ವೇ ಬಳಿ ಯಾವುದೇ ಶೌಚಗೃಹ ಮತ್ತು ನೀರಿನ ಅನುಕೂಲಗಳಾಗಲಿ ಇಲ್ಲ. ಮುಂಬೈನ ಜನನಿಬಿಡ ಪ್ರದೇಶವಾಗಿರುವ ಸ್ಥಳದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸವಾಲಾಗಿದೆ. ಹೀಗಾಗಿ ಅವರನ್ನು ಆಜಾದ್​ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶಾಂತಿ ಕಾಪಾಡುವಂತೆ ಎರಡ್ಮೂರು ಬಾರಿ ಪ್ರತಿಭಟನಾಕಾರರ ಬಳಿ ಮನವಿ ಮಾಡಿಕೊಂಡೆವು. ಅವರಿಂದಾಗಿ ರಸ್ತೆಗಳು ಕೂಡ ಬ್ಲಾಕ್​ ಆಗಿದ್ದವು. ಇಂದರಿಂದ ಸಾಕಷ್ಟು ಜನರಿಗೆ ತೊಂದರೆಯಾಯಿತು. ದೈನಂದಿನ ಜನಜೀವನಕ್ಕೂ ಅಡ್ಡಿಯಾಯಿತು. ಈ ಕಾರಣದಿಂದ ಮಾನವೀಯ ದೃಷ್ಟಿಯಿಂದಲೇ ಪೊಲೀಸರು ಕ್ರಮ ಕೈಗೊಳ್ಳಬೇಕಾಯಿತು ಎಂದರು.

    ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆದ ಒಂದು ಗಂಟೆಯ ಬಳಿಕ ವಿದ್ಯಾರ್ಥಿಗಳೇ ಹೆಚ್ಚು ತುಂಬಿದ್ದ ಗುಂಪು ದಕ್ಷಿಣ ಮುಂಬೈನ ಸಮುದ್ರ ತೀರದ ಬಳಿಯಿರುವ ಸ್ಮಾರಕದ ಬಳಿ ಒಟ್ಟಿಗೆ ಸೇರಲು ಭಾನುವಾರ ಮಧ್ಯರಾತ್ರಿ ಆರಂಭಿಸಿತು. ಮೇಣದ ಬೆಳಕಿನ ಮರವಣಿಗೆಯಿಂದ ಆರಂಭವಾದ ಪ್ರತಿಭಟನೆಯಲ್ಲಿ ಜೆಎನ್​ಯುನ ಹಳೇ ವಿದ್ಯಾರ್ಥಿಗಳಾಗಿರುವ ಉಮರ್​ ಖಾಲಿದ್​ ಮತ್ತು ಕುನಾಲ್​ ಕುಮ್ರಾ ಕೂಡ ಭಾಗವಹಿಸಿದ್ದರು. ಬಳಿಕ ಸಿನಿಮಾ ಕ್ಷೇತ್ರದ ಅನೇಕರು ಮತ್ತು ಇತರೆ ಸೆಲೆಬ್ರಿಟಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಜೆಎನ್​ಯು ಕಡೆಗಿನ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

    ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿರುವ ವಿಡಿಯೋಗಳಲ್ಲಿ ರಾಷ್ಟ್ರ ಧ್ವಜ ಹಿಡಿದು ಹಲ್ಲೆ ವಿರೋಧಿಸಿ ಘೋಷಣೆ ಕೂಗುತ್ತಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಹಲವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್​(ಎಬಿವಿಪಿ) ಸಂಘಟನೆಯನ್ನು ಟರ್ಗೇಟ್​ ಮಾಡಿ ಘೋಷಣೆ ಕೂಗಲಾಗಿದೆ. ಬಿಜೆಪಿ ವಿದ್ಯಾರ್ಥಿ ಒಕ್ಕೂಟದ ಎಬಿವಿಪಿ ಸದಸ್ಯರು ಹಲ್ಲೆ ಮಾಡಿರುವುದಾಗಿ ಜೆಎನ್​ಯು ಆರೋಪಿಸಿದೆ. ದೇಶಾದ್ಯಂತ ಹಲ್ಲೆಗೆ ಭಾರಿ ಖಂಡನೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts