More

    ಭೌತಶಾಸ್ತ್ರ ಪತ್ರಿಕೆಯೂ ಬಹಿರಂಗ ? ;  ಎಸ್‌ಪಿಗೆ ದೂರು ನೀಡಲು ನಿರ್ಧಾರ

    ತುಮಕೂರು: ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಬುಧವಾರ ನಡೆಯಲಿರುವ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ಪದವಿಪೂರ್ವ ಶಿಕ್ಷಣ ಇಲಾಖೆ ತಳ್ಳಿಹಾಕಿದೆ. 23ರಂದು ನಡೆಯುವ ಪ್ರಥಮ ಪಿಯುಸಿ ಕಲಾ ವಿಭಾಗದ ಅರ್ಥಶಾಸ್ತ್ರ ವಿಷಯ ಪತ್ರಿಕೆಯು ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡಿದ್ದು ಅದು ಗಮನಕ್ಕೆ ಬರುತ್ತಿದ್ದಂತೆ ಪತ್ರಿಕೆ ಬದಲಿಸಿ ಇಲಾಖೆ ಕ್ರಮವಹಿಸಿದೆ. ಆದರೆ, ಬುಧವಾರ ಬೆಳಗ್ಗೆ ಭೌತಶಾಸ್ತ್ರ ಪರೀಕ್ಷೆ ಇದ್ದು ಪರೀಕ್ಷೆ ಮುಂದೂಡುವ ಸಾಹಸಕ್ಕೆ ಕೈಹಾಕಿಲ್ಲ. ಮಾ.9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿರುವುದರಿಂದ ಪರೀಕ್ಷೆ ಮುಂದೂಡಿಲ್ಲ ಎನ್ನುತ್ತಾರೆ ಉಪನಿರ್ದೇಶಕ ಗಂಗಾಧರ್.

    ಈ ನಡುವೆ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದೆ.
    ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮುನ್ನವೇ ಎಲ್ಲರ ಕೈಯಲ್ಲಿ ಸಿಕ್ಕಿದಾಗಲೇ ಇಲಾಖೆ ಎಚ್ಚೆತ್ತುಕೊಂಡಿದ್ದರೆ ಮೊದಲ ವರ್ಷದ ಪಿಯು ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರಲಿಲ್ಲ. ಪರೀಕ್ಷೆ ಅಕ್ರಮಗಳಿಗೆ ಇಲಾಖೆಯ ಜಾಣ ಕುರುಡುತನವೇ ಕಾರಣ ಎನ್ನಲಾಗಿದೆ.

    ದೂರು ಸ್ವೀಕರಿಸದ ಸೈಬರ್‌ಕ್ರೈಂ: ವಾಟ್ಸ್ ಆ್ಯಪ್‌ನಲ್ಲಿ ಪ್ರಥಮ ಪಿಯುಸಿ ಇಂಗ್ಲೀಷ್ ವಿಷಯದ ಪತ್ರಿಕೆ ಹರಿದಾಡಿದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮಾ.6ಕ್ಕೆ ಮುಂದೂಡಿದೆ. ಅಷ್ಟೇ ಅಲ್ಲದೆ, ಸೈಬರ್ ಕ್ರೈಂ ಠಾಣೆಗೂ ದೂರು ನೀಡಲು ಮುಂದಾಗಿದ್ದು, ದೂರು ಸ್ವೀಕರಿಸದೆ ಸಾಗಹಾಕಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್‌ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ದೂರು ನೀಡಿದ್ದಾರೆ.
    ಸ್ಕ್ರೀನಿಂಗ್ ಕಮಿಟಿ ಕಾರ್ಯಪ್ರವೃತ್ತ: ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಇಲಾಖೆ ಹಂತದಲ್ಲಿ ತನಿಖೆ ನಡೆಸಲು ಮೂವರು ಸದಸ್ಯರ ಸ್ಕ್ರೀನಿಂಗ್ ಕಮಿಟಿ ರಚಿಸಿದ್ದು, ಮಂಗಳವಾರ ಇನ್ನಿಬ್ಬರು ಸದಸ್ಯರನ್ನು ಸಮಿತಿಗೆ ಸೇರಿಸಲಾಗಿದೆ. ಈ ಸಮಿತಿಯು ಈಗಾಗಲೇ ಜಿಲ್ಲೆಯ ನೋಡಲ್ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದೆ.

    ಎಚ್ಚೆತ್ತುಕೊಳ್ಳದ ಇಲಾಖೆ: ಜ.23 ರಿಂದ ಫೆ.4ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆ (ಪ್ರಿಪರೇಟರಿ) ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿದ್ದರೂ ಇಲಾಖೆ ಜಾಣ ಮೌನವಹಿಸಿತ್ತು. ಅದರ ಪರಿಣಾಮವೇ ಈಗ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಇಂಗ್ಲೀಷ್ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆ ಎನ್ನಲಾಗಿದೆ. ಪರೀಕ್ಷೆ ಅಕ್ರಮಗಳನ್ನು ಆರಂಭದಲ್ಲೇ ಚಿವುಟಬೇಕು.

    ಸ್ಕ್ರೀನಿಂಗ್ ಕಮಿಟಿ ಕಾರ್ಯಾಚರಣೆ ಕೈಗೊಂಡಿದ್ದು, ಪ್ರಶ್ನೆಪತ್ರಿಕೆ ಬಹಿರಂಗದ ಮೂಲ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡಿದ್ದು, ಅದರ ಮೂಲ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಲಾಗಿದೆ.
    | ಗಂಗಾಧರ್ ಉಪನಿರ್ದೇಶಕ, ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts