More

    ನೀರು ಕಾಣದ ಕೆರೆಗಳು

    ಕೆ.ಮಹದೇವ್ ವಿರುದ್ಧ ಮಾಜಿ ಸಚಿವ ಕೆ.ವೆಂಕಟೇಶ್ ಟೀಕೆ

    ವಿಜಯವಾಣಿ ಸುದ್ದಿಜಾಲ ಪಿರಿಯಾಪಟ್ಟಣ
    ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಬಗ್ಗೆ ಶಾಸಕರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಕೆ.ವೆಂಕಟೇಶ್ ಟೀಕಿಸಿದರು.
    ಪಟ್ಟಣದ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆದು ಈ ಯೋಜನೆಯನ್ನು ಆರಂಭಿಸಿದ್ದು, ಹಂತ ಹಂತವಾಗಿ ಕಾಮಗಾರಿಯನ್ನು ಪೂರೈಸಿ ಹಣ ಬಿಡುಗಡೆ ಮಾಡಿಸಬೇಕಿದೆ. ಆದರೆ ಈ ಕೆಲಸವನ್ನು ಮಾಡದೆ ಹಣಕ್ಕಾಗಿ ಗುತ್ತಿಗೆದಾರರನ್ನು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದರು.
    ಶಾಸಕ ಕೆ.ಮಹದೇವ್ ತಮ್ಮ ಅವಧಿಯಲ್ಲಿ ತಾಲೂಕಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಎಸೆದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶಾಸಕನಾಗಿದ್ದ ನಾನು 5 ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿಗಾಗಿ 1,300 ಕೋಟಿ ರೂ.ಗಳ ಅನುದಾನ ತಂದಿದ್ದೇನೆ. ಆದರೆ ಹಾಲಿ ಶಾಸಕ ಈವರೆಗೂ ಕೇವಲ 100 ಕೋಟಿ ರೂ.ಗಳ ಅನುದಾನವನ್ನೂ ತಂದಿಲ್ಲ ಎಂದು ಟೀಕಿಸಿದರು.
    ಮುಂಬರುವ ಗ್ರಾಪಂ ಚುನಾವಣೆ, ಸಹಕಾರ ಸಂಘಗಳು ಮತ್ತು ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಜೆಡಿಎಸ್‌ಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಮನವಿ ಮಾಡಿದರು.
    ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೆರಿಗೆ ವಸೂಲಾತಿ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜ್ಯ, ಇದೀಗ 16ನೇ ಸ್ಥಾನಕ್ಕೆ ಕುಸಿದಿದೆ ಎಂದು ಟೀಕಿಸಿದರು.
    ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿ ಬೆದರಿಸುವ ತಂತ್ರ ಮಾಡಲಾಗುತ್ತಿದ್ದು, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಶಾಸಕ ಬರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
    ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಡಿ.ಟಿ.ಸ್ವಾಮಿ, ತಾ.ಪಂ. ಅಧ್ಯಕ್ಷೆ ಕೆ.ಆರ್.ನಿರೂಪಾ, ಎಪಿಎಂಸಿ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷ ಮೋಹನ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎನ್.ಚಂದ್ರಶೇಖರ್, ತಾಪಂ ಸದಸ್ಯರಾದ ಶ್ರೀನಿವಾಸ್, ಶಿವಮ್ಮ, ಕುಂಜಪ್ಪ ಕಾರ್ನಾಡ್, ಪುರಸಭೆ ಸದಸ್ಯರಾದ ಎಚ್.ಕೆ.ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts