More

    ದೇವಸ್ಥಾನಗಳಲ್ಲಿ ಹೆಚ್ಚಿದ ಭಕ್ತಸಂದಣಿ

    ಮಂಗಳೂರು/ಉಡುಪಿ/ಸುಬ್ರಹ್ಮಣ್ಯ: ಕಿಸ್‌ಮಸ್ ಜತೆಗೆ ಮೂರು ದಿನ ಸರಣಿ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ದೇವಾಲಯ ಹಾಗೂ ಪ್ರವಾಸಿ ತಾಣಗಳಲ್ಲಿ ಮೂರು ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

    ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಎರಡು ದಿನಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಶನಿವಾರ ಒಂದೇ ದಿನ 30 ಸಾವಿರಕ್ಕೂ ಅಧಿಕ ಭಕ್ತರು ಬಂದಿದ್ದಾರೆ.

    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ 30 ಸಾವಿರ, ಶನಿವಾರ 40 ಸಾವಿರಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದರು. ಎಲ್ಲ ವಸತಿಗೃಹಗಳು ಭರ್ತಿಯಾಗಿವೆ. ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿವೆ. ಭಾನುವಾರ ಭಕ್ತರ ಆಗಮನ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

    ಉಡುಪಿ ಕೃಷ್ಣ ಮಠದಲ್ಲಿ ಶುಕ್ರವಾರ 10 ಸಾವಿರ, ಶನಿವಾರ 15 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಪಾರ್ಕಿಂಗ್ ಪ್ರದೇಶ ಭರ್ತಿಯಾಗಿತ್ತು. ರಾಜಾಂಗಣದ ಪೂರ್ವ ದ್ವಾರದಿಂದ ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿನಲ್ಲಿ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಮಠದೊಳಗೆ ಜನಜಂಗುಳಿ ತಪ್ಪಿಸುವ ಉದ್ದೇಶದಿಂದ 50 ಮಂದಿಯ ತಂಡವನ್ನು ರಚಿಸಿ ಹಂತ ಹಂತವಾಗಿ ಪ್ರವೇಶ ಕಲ್ಪಿಸಲಾಯಿತು. ವಿಶೇಷ ದರ್ಶನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು.
    ಕೊಲ್ಲೂರು, ಕಟೀಲು, ಕುದ್ರೋಳಿ ಸಹಿತ ಪ್ರಮುಖ ದೇವಾಲಯಗಳಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ಭಾರಿ ಸಂಖ್ಯೆಯಲ್ಲಿ ಭಕ್ತರು ಇದ್ದು, ಉದ್ದುದ್ದ ಸರತಿ ಸಾಲುಗಳು ಕಂಡುಬಂದವು.

    ಬೀಚ್, ಮಾಲ್‌ಗಳಿಗೆ ಜೀವಕಳೆ: ಮಂಗಳೂರು, ಉಡುಪಿಯ ಬೀಚ್, ಮಾಲ್‌ಗಳಲ್ಲಿ ಜನಜಂಗುಳಿ ಇತ್ತು. ಮಲ್ಪೆ, ಸೇಂಟ್‌ಮೇರಿಸ್ ದ್ವೀಪ, ಸೀವಾಕ್, ತಣ್ಣೀರುಬಾವಿ, ಉಳ್ಳಾಲ, ಪಣಂಬೂರು ಮೊದಲಾದ ಬೀಚ್‌ಗಳಲ್ಲಿ ಸಾಯಂಕಾಲ ಸಾವಿರಾರು ಪ್ರವಾಸಿಗರಿದ್ದರು. ಭಣಗುಡುತ್ತಿದ್ದ ಮಾಲ್‌ಗಳು ಕೆಲವು ದಿನಗಳಿಂದ ಜೀವಕಳೆ ಪಡೆದಿವೆ. ಖಾಲಿ ಸಂಚರಿಸುತ್ತಿದ್ದ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಅಧಿಕವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts