More

    ಬದುಕು ಭಗವಂತನ ಆರಾಧನೆ: ಪೇಜಾವರ ಶ್ರೀ ಆಶೀರ್ವಚನ

    ಉಡುಪಿ: ಬದುಕಿನಲ್ಲಿ ವೃತ್ತಿಯನ್ನು ಭಗವಂತನ ಆರಾಧನೆ ಎಂಬ ಮನೋಭಾವದಲ್ಲಿ ಮಾಡಿದರೆ ಅದು ದೇವರ ಪೂಜೆಗೆ ಸಮನಾಗಿರುತ್ತದೆ. ಇದರಿಂದ ಅವ್ಯವಹಾರಕ್ಕೆ ಎಡೆಯೇ ಇಲ್ಲದೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಶನಿವಾರ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಸಂಸ್ಥೆ ವತಿಯಿಂದ ಹಿರಿಯ ಸಾಧಕರ ಸ್ಮರಣಾರ್ಥ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ 17 ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ಬದುಕನ್ನು ಕಲಾಸೇವೆಗೆ ಸಮರ್ಪಣೆ ಮಾಡುತ್ತಿರುವ ಯಕ್ಷಗಾನ ಕಲಾವಿದರೂ ತಪಸ್ವಿಗಳಾಗಿದ್ದಾರೆ. ಇದಕ್ಕಾಗಿ ಕೃಷ್ಣ ಸನ್ನಿಧಿಯಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.

    ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಕಲಾರಂಗ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಆದರ್ಶವನ್ನು ಮುಂದುವರಿಸಿ ಕಲಾವಿದರ ಪೋಷಣೆ ಮಾಡುತ್ತಿದೆ. ಸಂಸ್ಥೆಯ ಸಮಾಜಮುಖಿ ಕಾರ್ಯ ಸ್ಫೂರ್ತಿದಾಯಕವಾಗಿದೆ ಎಂದರು.

    ತೆಂಕು ಹಾಗೂ ಬಡಗಿನ ಹಿರಿಯ ಕಲಾವಿದರಾದ ಅನಂತ ಕುಲಾಲ ಕಕ್ಕುಂಜೆ, ಮಹಾಬಲ ನಾಕ್ ಬುಕ್ಕಿಗುಡ್ಡೆ, ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಾಬು ಕುಲಾಲ ಹಳ್ಳಾಡಿ, ನಗ್ರಿ ಮಹಾಬಲ ರೈ, ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ರಾಮಕೃಷ್ಣ ಮಂದಾರ್ತಿ, ಮಂಜುನಾಥ ಭಟ್ ಬೆಳ್ಳಾರೆ, ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಬಸವರಾಜ್ ಹುಣ್ಸೆಮಕ್ಕಿ, ರಾಮಚಂದ್ರ ಹೆಗಡೆ ಮೂರೂರು, ರಘುರಾಮ ಗೌಡ ಕೇಂಜ, ದಿನೇಶ ಅಮ್ಮಣ್ಣಾಯ ಅರಸಿನಮಕ್ಕಿ, ಉಮೇಶ ಹೆಬ್ಬಾರ್ ನಿಡ್ಲೆ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಮಹಾದೇವ ಪಟಗಾರ ಕುಮಟಾ, ರಾಘವದಾಸ್ ಮುಡಿಪು ಅವರನ್ನು ಸನ್ಮಾನಿಸಲಾಯಿತು.

    ವಿದ್ಯಾಪೋಷಕ್ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ. ಸದಾಶಿವ ರಾವ್ ಅವರಿಗೆ ಯಕ್ಷ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ‘ಮಾರ್ವಿ ಕಲಾವಿದರು’ ಎಂಬ ಪುಸ್ತಕವನ್ನು ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು. ಕಾಸರಗೋಡಿನ ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘಕ್ಕೆ ನೀಡಿದ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯನ್ನು ಉಪಾಧ್ಯಕ್ಷ ವಿಶ್ವಮೋಹನ ಬನಾರಿ ಸ್ವೀಕರಿಸಿದರು. ಶಾಸಕ ರಘುಪತಿ ಭಟ್, ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಎಸ್‌ವಿ ಭಟ್, ನಾರಾಯಣ ಹೆಗ್ಡೆ, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts