More

    ಪ್ರಚಾರದಲ್ಲಿ ಸುಂಟರಗಾಳಿ ಎಬ್ಬಿಸಲು ಬಿಜೆಪಿ ಪ್ಲ್ಯಾನ್; ಆಂಧ್ರ, ತೆಲಂಗಾಣ ಗಡಿ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಗರ್ಜನೆ ನಿರೀಕ್ಷೆ | ಅಖಾಡದಲ್ಲಿ ತಾರೆಯರ ಮಿಂಚು

    ಮೃತ್ಯುಂಜಯ ಕಪಗಲ್
    ಬೆಂಗಳೂರು: ಅಬ್ಬರದ ಪ್ರಚಾರ, ಜನಶಕ್ತಿ ಪ್ರದರ್ಶನವು ಚುನಾವಣಾ ರಾಜಕೀಯದ ಎರಡು ಪ್ರಬಲ ಅಸ್ತ್ರಗಳಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಸ್ಪರ್ಧೆಗೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಪ್ರಚಾರದ ಅಸ್ತ್ರಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳಲಾರಂಭಿಸಿವೆ.

    ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬಿರುಸಿನ ಪೈಪೋಟಿಗೆ ಚುನಾವಣಾ ಕಣ ಸಾಕ್ಷಿಯಾಗಲಿದೆ. ಅಲ್ಲದೆ, ಆಮ್​ದಿ್ಮಾರ್ಟಿ, ಸಿಪಿಐ, ಸಿಪಿಎಂ, ಇನ್ನಿತರ ಪಕ್ಷಗಳು ತಮ್ಮ ಅಸ್ತಿತ್ವ ಸಾರಲು ಮುಂದಾಗಿದ್ದು, ತಮ್ಮದೇ ಆದ ಇತಿಮಿತಿಯೊಳಗೆ ಪ್ರಚಾರದ ಸನ್ನದ್ಧವಾಗುತ್ತಿವೆ. ಚುನಾವಣಾ ಪೂರ್ವ ತಾಲೀಮು, ಡಬಲ್ ಇಂಜಿನ್ ಸರ್ಕಾರದ ಪ್ರಯೋಜನ ಬಗ್ಗೆ ಸಾರುವಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಚಿತ್ರತಾರೆಯರನ್ನು ಇಳಿಸುವ ಮೂಲಕ ಚುನಾವಣಾ ಕಣದಲ್ಲೂ ಪ್ರಚಾರದ ಸುಂಟರಗಾಳಿ ಎಬ್ಬಿಸಲು ಪ್ಲ್ಯಾನ್ ಮಾಡಿಕೊಂಡಿದೆ.

    ಸರಿದೂಗಿಸುವ ಚಿಂತನೆ

    ಚುನಾವಣೆ ಪ್ರಚಾರ ಮತ್ತು ನಿರ್ವಹಣೆಗೆ ರಾಜ್ಯಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳು ತಮ್ಮ ಕೆಲಸ ಆರಂಭಿಸಿದ್ದು, ವಿವಿಧ ವಿಭಾಗಗಳಿಗೆ ಜವಾಬ್ದಾರಿ ಹಂಚಲಾಗಿದೆ. ವಿಡಿಯೋ ತುಣುಕುಗಳು, ಭಿತ್ತಿಪತ್ರಗಳು, ಕರಪತ್ರಗಳ ವಸ್ತುವಿಷಯ, ಭಾಷಣದ ಪಠ್ಯಾಂಶಗಳು ಹೀಗೆ ಪ್ರತಿಯೊಂದನ್ನು ಕೂಲಂಕಷವಾಗಿ ಪರಿಶೀಲಿಸಿ ಸಿದ್ಧಪಡಿಸುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಎಲ್ಲೆಡೆ ಬೇಡಿಕೆಯಿದೆ. ಮೋದಿ ಒಳಗೊಂಡು ರಾಷ್ಟ್ರೀಯ ನಾಯಕರ ಲಭ್ಯತೆ, ನೀಡಲಿರುವ ಕಾಲಾವಕಾಶ, ಅಗತ್ಯವಿರುವ ಕ್ಷೇತ್ರಗಳಿಗೆ ಜೋಡಣೆ ಬಗ್ಗೆ ರೂಪರೇಷೆ ತಯಾರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ನಾಯಕರು ಎಲ್ಲ 224 ವಿಧಾನಸಭೆ ಕ್ಷೇತ್ರಗಳಿಗೆ ಸುತ್ತಾಡಲಾಗದು. ಹಾಗೆಯೇ ಬೇಡಿಕೆ ಸರಿದೂಗಿಸುವ ಭಾಗವಾಗಿ ಬೆಳ್ಳಿತೆರೆಯ ಖ್ಯಾತ ನಟ-ನಟಿಯರನ್ನು ಅಖಾಡದ ತೆರೆಯ ಮೇಲೆ ಕರೆತರುವ ಭೂಮಿ ಸಿದ್ಧವಾಗುತ್ತಿದೆ.

    ರಂಗ ಪ್ರವೇಶ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ನಟ ಸುದೀಪ್ ಸನ್ನದ್ಧರಾಗಿದ್ದಾರೆ. ಜತೆಗೆ ಬಿಜೆಪಿಯಲ್ಲಿರುವ ಕೆಲವು ಸ್ನೇಹಿತರ ಪರವಾಗಿಯೂ ಪ್ರಚಾರದಲ್ಲಿ ಪಾಲ್ಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದು, ಅವರ ಜನಪ್ರಿಯತೆಯನ್ನು ಕಮಲಪಡೆ ಸರಿಯಾಗಿ ಬಳಸಿಕೊಳ್ಳಲು ಯೋಚಿಸಿದೆ.

    ಅಭಿಮಾನಿಗಳ ಪಡೆ ಹಾಗೂ ಪರಿಶಿಷ್ಟ ಪಂಗಡಗಳ ಬಾಹುಳ್ಯ ಕ್ಷೇತ್ರಗಳಿಗೆ ಹೆಚ್ಚೆಚ್ಚು ಕರೆದುಕೊಂಡು ಹೋಗುವ ನೀಲನಕ್ಷೆ ಸಿದ್ಧಪಡಿಸುತ್ತಿದ್ದು, ಸಿಎಂ ಬೊಮ್ಮಾಯಿ ಸ್ಪರ್ಧಿಸಲಿರುವ ಅಖಾಡದಿಂದ ಸುದೀಪ್ ಅವರು ಚುನಾವಣಾ ಪ್ರಚಾರದ ರಂಗ ಪ್ರವೇಶಿಸುವ ಸಾಧ್ಯತೆಗಳಿವೆ.

    ಗರ್ಜನೆ ನಿರೀಕ್ಷೆ

    ಮುಂಬರುವ ತೆಲಂಗಾಣ, ಆಂಧ್ರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ತೆಲುಗು ಚಿತ್ರರಂಗದ ಖ್ಯಾತ ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ ಆಸಕ್ತಿ ಹೊಂದಿದ್ದಾರೆ.

    ಇದೇ ಕಾರ್ಯಸೂಚಿಯನ್ನು ಇಟ್ಟುಕೊಂಡು ದೆಹಲಿಗೆ ಇತ್ತೀಚೆಗೆ ತೆರಳಿದ್ದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಷಾ, ಇನ್ನಿತರ ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ತವರು ರಾಜ್ಯಗಳ ವಿಧಾನಸಭೆ ಚುನಾವಣೆ ಪೂರ್ವ ಹೊಂದಾಣಿಕೆ ಬಗ್ಗೆ ನಡೆದ ಚರ್ಚೆಯ ವೇಳೆ ಕರ್ನಾಟಕದ ವಿಧಾನಸಭೆ ಚುನಾವಣೆ ಪ್ರಚಾರದ ಬಗ್ಗೆ ಪ್ರಸ್ತಾಪವಾಗಿವೆ. ತೆಲಂಗಾಣ ಸಿಎಂ ಚಂದ್ರಶೇಖರರಾವ್​ರನ್ನು ಪ್ರಚಾರಕ್ಕೆ ಕರೆತರಲು ಜೆಡಿಎಸ್ ಯೋಚಿಸುತ್ತಿದೆ. ಈ ತಂತ್ರಕ್ಕೆ ಪ್ರತಿತಂತ್ರದ ಜತೆಗೆ ಪ್ರಚಾರದ ಅಬ್ಬರದಲ್ಲಿ ಕಾಂಗ್ರೆಸ್​ನ್ನು ಹಿಮ್ಮೆಟ್ಟಿಸಲು ಬಿಜೆಪಿ ಒತ್ತು ನೀಡಿದೆ.

    ತೆಲಂಗಾಣ, ಆಂಧ್ರದ ಗಡಿಗೆ ಹೊಂದಿಕೊಂಡ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ರಾಯಚೂರು ಜಿಲ್ಲೆಗಳ ಪ್ರಚಾರ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ ಪಾಲ್ಗೊಂಡು ಗರ್ಜಿಸುವ ನಿರೀಕ್ಷೆಯಿದೆ.

    ನಟ-ನಟಿಯರ ದಂಡು

    ಖ್ಯಾತ ನಟರಿಬ್ಬರ ಹೊರತಾಗಿ ಪಕ್ಷದಲ್ಲಿ ತಾರೆಯರ ಪಡೆಯಿದೆ. ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್, ಸಂಸದೆ, ನಟಿ ಸುಮಲತಾ ಅಂಬರೀಷ್, ತಾರಾ ಅನುರಾಧ, ಶೃತಿ, ಮಾಳವಿಕಾ ಅವಿನಾಶ್ ಕೂಡ ಅಖಾಡದಲ್ಲಿ ಪ್ರಚಾರದ ಮಿಂಚುಹರಿಸುವ ಸಂಭವವಿದೆ. ಸಿನಿಮಾ ನಟ-ನಟಿಯರ ಪ್ರಚಾರದಿಂದ ಅಭ್ಯರ್ಥಿಗಳು ಗೆದ್ದೇ ಬಿಡುತ್ತಾರೆಂದಲ್ಲ. ಸಮಾವೇಶಕ್ಕೆ ಬಂದವರೆಲ್ಲ ಮತಗಳಾಗಿ ಪರಿವರ್ತನೆಯಾಗುತ್ತಾರೆ ಎಂದೂ ಹೇಳಲಾಗದು. ಆದರೆ, ಹವಾ ಸೃಷ್ಟಿ, ಪ್ರಚಾರದ ಅಬ್ಬರ, ಜನ ಸಮೂಹವನ್ನು ಸೆಳೆಯಲು, ಪಕ್ಷದ ಸಾಧನೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಇದು, ಉತ್ತಮ ಅಭಿಪ್ರಾಯ ಮೂಡಿಸಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಸಮರ್ಥಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts