More

    ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪಟ್ಟನಾಯಕನಹಳ್ಳಿ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯ

    ತುಮಕೂರು: ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸುವಂತೆ ಹಾಗೂ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹೋರಾಟ ರೂಪಿಸಲು ಒಕ್ಕಲಿಗರು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ತುಮಕೂರಿನ ಸಂಘದ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.

    ಪಟ್ಟನಾಯಕನಹಳ್ಳಿ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಒಕ್ಕಲಿಗರೂ ಬುಡಕಟ್ಟು ಸಮುದಾಯದಿಂದಲೇ ಬಂದವರು, ನಮ್ಮ ಮೂಲ ಸಂಸ್ಕೃತಿ ವ್ಯವಸಾಯ ಮತ್ತು ಹೈನುಗಾರಿಕೆ. ಇಂದಿಗೂ ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ವಿವಿಧೆಡೆ ಆದಿವಾಸಿಗಳಂತೆ ಬದುಕುತ್ತಿರುವ ಸಮುದಾಯದ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.

    ಬಿ.ಎಸ್.ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಉಪಜಾತಿ ಸಾದರ ಲಿಂಗಾಯಿತರನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಿದರು. ಬೇಡ ಜಂಗಮರನ್ನು ಪರಿಶಿಷ್ಟಕ್ಕೆ ಸೇರ್ಪಡೆ ಮಾಡಿದರು. ಜತೆಗೆ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದಕ್ಕೂ ನಮ್ಮ ವಿರೋಧವಿಲ್ಲ, ಒಕ್ಕಲಿಗ ಸಮುದಾಯದಲ್ಲಿ ಬಿಟ್ಟು ಹೋಗಿರುವ ಉಪಜಾತಿಗಳನ್ನು ಒಬಿಸಿಗೆ ಸೇರ್ಪಡೆ ಮಾಡಬೇಕು ಎಂದರು.

    ಒಕ್ಕಲಿಗ ಸಮುದಾಯಕ್ಕೆ ಶೇ.17 ಮೀಸಲಾತಿ ಹೆಚ್ಚಿಸಬೇಕು ಎಂಬುದು ಸಭೆಯ ಒಕ್ಕೊರಲ ಅಭಿಪ್ರಾಯವಾಗಿದ್ದು, ಇದು ಜನಾಂದೋಲನವಾಗಿ ಯಾವಾಗಬೇಕಾದರೂ ಮಾರ್ಪಾಡಾಗಬಹುದು, ಇದಕ್ಕೆ ಆಸ್ಪದ ಕೊಡದಂತೆ ಸರ್ಕಾರ ಮೀಸಲಾತಿ ಹೆಚ್ಚಿಸಿ, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
    ದೇಶದ ಆಡಳಿತ ನಿಯಂತ್ರಿಸುತ್ತಿರುವ ಬಲಿಷ್ಠ ವರ್ಗ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ.3 ಇರುವ ಮೇಲ್ವರ್ಗದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸಮುದಾಯಕ್ಕೆ ಶೇ.10 ವಿಶೇಷ ಮೀಸಲಾತಿ ಕಲ್ಪಿಸಲಾಯಿತು. ಶೇ.17ರಷ್ಟಿರುವ ಒಕ್ಕಲಿಗ ಸಮುದಾಯಕ್ಕೆ ಕೇವಲ ಶೇ.4 ಮೀಸಲಾತಿ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಬೇಸರಿಸಿದರು.

    ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಬಿ.ಬೋರೇಗೌಡ ಮಾತನಾಡಿ, ಬೆಂಗಳೂರು ಬೃಹದಾಕಾರವಾಗಿ ಬೆಳೆದು ಇಡೀ ವಿಶ್ವದಲ್ಲಿಯೇ ಗುರುತಿಸಲ್ಪಟ್ಟಿದೆ ಎಂದರೆ ಅದಕ್ಕೆ ಒಕ್ಕಲಿಗ ಸಮುದಾಯ ಕಾರಣ. ಮಾಗಡಿ ಕೆಂಪೇಗೌಡರು ನಿರ್ಮಿಸಿದ ಬೃಹದಾಕಾರದ ಕಟ್ಟಡಗಳು, ಮಾರುಕಟ್ಟೆಗಳು ಇಂದು ಎಲ್ಲರನ್ನೂ ನೆನಪಿಸುತ್ತಿವೆ. ಇಂತಹ ಸಮಾಜಕ್ಕೆ ಸರ್ಕಾರ ಕೊಡುಗೆ ನೀಡಬೇಕು ಎಂದರು.ಒಕ್ಕಲಿಗ ಸಮುದಾಯದ ಮುಖಂಡರಾದ ಆಡಿಟರ್ ನಾಗರಾಜು ಯಲಚವಾಡಿ, ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಚ್.ನಿಂಗಪ್ಪ, ಆರ್.ನಾರಾಯಣ್, ಸಾಹಿತಿ ಹಾಗೂ ಒಕ್ಕಲಿಗ ಹೋರಾಟ ಸಮಿತಿ ಮುಕುಂದರಾಜ್ ಇದ್ದರು.

    ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಇಲ್ಲದೆ ಬಹಳಷ್ಟು ಮಂದಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ, ಜತೆಗೆ ಉದ್ಯೋಗದಲ್ಲೂ ಮೀಸಲಾತಿ ಇಲ್ಲ, ಆದ್ದರಿಂದ ನಮ್ಮ ಸಮುದಾಯಕ್ಕೂ ಮೀಸಲಾತಿ ಹೆಚ್ಚಿಸಿ, ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
    ಶ್ರೀ ಮಂಗಳನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts