More

    ಗಂಗೊಳ್ಳಿ ಬಂದರಿನಲ್ಲಿ ಮುಂದುವರಿದ ಪಾಸ್ ಗೊಂದಲ

    ಗಂಗೊಳ್ಳಿ: ಮೀನುಗಾರಿಕಾ ಬಂದರಿನಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಅನುಮತಿ ಮತ್ತು ಬಂದರು ಪ್ರವೇಶಿಸಲು ಪಾಸ್ ನೀಡಲು ನಿರ್ಧರಿಸಿರುವ ಇಲಾಖೆಯ ಅಧಿಕಾರಿಗಳ ಕ್ರಮ ಸಮಸ್ಯೆಗೆ ಕಾರಣವಾಗಿದೆ.

    ಮೀನುಗಾರಿಕೆ ನಡೆಸದವರಿಗೂ ಪಾಸ್ ನೀಡಿದ್ದು, ಪ್ರತಿನಿತ್ಯ ಬರುವವರಿಗೆ ಪಾಸ್ ನಿರಾಕರಿಸಲಾಗುತ್ತಿದೆ. ಮೀನುಗಾರಿಕಾ ಋತುವಿನ ಕೊನೆಯಲ್ಲಾದರೂ ಚಟುವಟಿಕೆಗೆ ಅವಕಾಶ ನೀಡಿ ಎಂದು ಮಹಿಳಾ ಮೀನುಗಾರರು ಮನವಿ ಮಾಡಿದ್ದಾರೆ.
    ಗಂಗೊಳ್ಳಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ, ಕುಂದಾಪುರದ ಚಂದ್ರಶೇಖರ, ದಿವಾಕರ ಎನ್.ಖಾರ್ವಿ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಂದೀಪ ಜಿ.ಎಸ್., ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್. ಬಂದರಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

    15ರ ಬಳಿಕ ಮೀನು ಖರೀದಿಯಿಲ್ಲ: ಮೇ 15ರವರೆಗೆ ಮೀನು ಖರೀದಿಗೆ ನಿರ್ಧರಿಸಿರುವ ಹಸಿ ಮೀನು ವ್ಯಾಪಾರಸ್ಥರು, ಬಳಿಕ ಖರೀದಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೊರರಾಜ್ಯಗಳಿಗೆ ಹೋಗಿ ಮೀನು ಮಾರಾಟ ಮಾಡಿ ಬಂದ ಮೇಲೆ ನಮ್ಮ ಜಿಲ್ಲೆಯಲ್ಲಿ ಚಾಲಕರಿಗೆ ಕ್ವಾರಂಟೈನ್ ಮಾಡುತ್ತಿರುವುದರಿಂದ ಚಾಲಕರು ಹೊರರಾಜ್ಯಗಳಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಆದ್ದರಿಂದ ಖರೀದಿ ಸ್ಥಗಿತಕ್ಕೆ ಚಿಂತನೆ ನಡೆಸಿರುವುದಾಗಿ ಹಸಿ ಮೀನು ವ್ಯಾಪಾರಸ್ಥರು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆೆ ಭಟ್ಕಳದಿಂದ ಬಂದ ಬೋಟುಗಳು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಆತಂಕ ಸೃಷ್ಟಿಸಿದ ಬೆನ್ನಿಗೆ ಮತ್ತೆರಡು ಪರ್ಸಿನ್ ಬೋಟುಗಳು ಭಟ್ಕಳದಿಂದ ಸೋಮವಾರ ರಾತ್ರಿ ಗಂಗೊಳ್ಳಿಗೆ ಬಂದಿದ್ದು, ಇಲ್ಲಿನ ಮ್ಯಾಂಗನೀಸ್ ವಾರ್ಫ್ ಬಳಿ ನಿಲ್ಲಿಸಲಾಗಿದೆ.
    ಲಾಕ್‌ಡೌನ್ ಮುಗಿಯುವವರೆಗೆ ಬೇರೆ ಜಿಲ್ಲೆಗಳ ಮೀನುಗಾರಿಕಾ ಬೋಟುಗಳು ಗಂಗೊಳ್ಳಿ ಬಂದರು ಪ್ರವೇಶ ನಿಷೇಧಿಸಿದ್ದರೂ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿರುವುದು ಮೀನುಗಾರರ ತೀವ್ರ ಆಕ್ರೋಶಕ್ಕೆ ಗುರಿಯಾಯಿತು. ಬೋಟುಗಳಲ್ಲಿರುವ ಮೀನುಗಾರರನ್ನು ಕ್ವಾರಂಟೈನ್ ಮಾಡಬೇಕು. ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸ್ಥಳೀಯ ಮೀನುಗಾರರು ಇಲಾಖೆಯ ಅಧಿಕಾರಿಗಳ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಂಗೊಳ್ಳಿ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

    ಪರವಾನಗಿ ರದ್ದತಿಗೆ ಪ್ರಸ್ತಾವನೆ: ಮೀನುಗಾರರ ಅಹವಾಲು ಆಲಿಸಿದ ಕುಂದಾಪುರ ತಹಸೀಲ್ದಾರ್ ತಿಪ್ಪೇಸ್ವಾಮಿ, ಅನುಮತಿ ಇಲ್ಲದೆ ಬೋಟುಗಳು ಭಟ್ಕಳದಿಂದ ಗಂಗೊಳ್ಳಿಗೆ ಬಂದಿರುವುದು ತಪ್ಪು. ಹೀಗಾಗಿ ಬಂದರು ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಹಸೀಲ್ದಾರ್ ಕಚೇರಿಗೆ ವರದಿ ನೀಡಬೇಕು. ಆ ಬಳಿಕ ಬೋಟಿನ ರಹದಾರಿಯನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

    ಬಂದರಿನಲ್ಲಿ ಜನಜಂಗುಳಿ ಉಂಟಾಗದಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಂದರಿನಲ್ಲಿ ಕಾರ್ಯನಿರ್ವಹಿಸುವ ಮೀನುಗಾರರು ಹಾಗೂ ಕಾರ್ಮಿಕರಿಗೆ ಇಲಾಖೆ ಮೂಲಕ ಪಾಸ್ ವಿತರಣೆ ಮಾಡಲಾಗುತ್ತಿದೆ. ಪಾಸ್ ಹೊಂದಿದವರಿಗೆ ಮಾತ್ರ ಬಂದರು ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
    ಅಂಜನಾದೇವಿ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಮೀನುಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts