More

    ವಲಸೆ ಕಾರ್ಮಿಕರಿಗೆ ವಿಶೇಷ ರೈಲು, ಉಚಿತ ಪ್ರಯಾಣ; ರೈಲ್ವೆ ಇಲಾಖೆಯಿಂದಲೇ ಸಿದ್ಧವಾಗುತ್ತಿದೆ ಯೋಜನೆ

    ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ರಾಜ್ಯಗಳಿಗೂ ಹೊರೆಯಾಗಿ ಪರಿಣಮಿಸಿದವರೆಂದರೆ ವಲಸೆ ಕಾರ್ಮಿಕರು. ಇವರಿಗೆ ತಾತ್ಕಾಲಿಕ ನೆಲೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ನೆಲೆ ಕಲ್ಪಿಸಿದ್ದರೂ, ಲಾಕ್​ಡೌನ್​ ತೆರವಾಗಿ ಅವರು ಯಾವಾಗ ತಮ್ಮೂರನ್ನು ಸೇರಿಕೊಳ್ಳುವಂತಾಗುತ್ತದೆ ಎಂಬುದು ಯಕ್ಷಪ್ರಶ್ನೆಯೇ ಸರಿ. ಏಕೆಂದರೆ, ಮೇ 3ರ ಬಳಿಕ ಲಾಕ್​ಡೌನ್​ ತೆರವಾದರೂ, ಬಸ್​, ರೈಲು ಹಾಗೂ ವಿಮಾನ ಸಂಚಾರವಂತೂ ಕೂಡಲೇ ಆರಂಭವಾಗದು. ಅಲ್ಲಿಯವರೆಗೆ ಇವರನ್ನು ನೋಡಿಕೊಳ್ಳುವುದು ಹೇಗೆ ಎಂಬ ಚಿಂತೆ ರಾಜ್ಯಗಳದ್ದಾಗಿದೆ.

    ಅಲ್ಲದೇ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಂಥ ರಾಜ್ಯಗಳು ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕರೆಯಿಸಿಕೊಳ್ಳಲು ಮುಂದಾಗಿವೆ. ಆದರೆ, ಬಸ್​ಗಳಲ್ಲಿ ಹೆಚ್ಚು ಜನರನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಹೀಗಾಗಿ ವಿಶೇಷ ರೈಲು ಸೇವೆ ಆರಂಭಿಸಿ ಎಂದು ಮಹಾರಾಷ್ಟ್ರ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದೆ.

    ಇದೇ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕೂಡ ಯೋಜನೆ ಸಿದ್ಧಪಡಿಸುತ್ತಿದೆ. ಆಯಾ ರಾಜ್ಯ ಸರ್ಕಾರಗಳು ನಿಗದಿತ ರೈಲು ನಿಲ್ದಾಣಗಳಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಕಾರ್ಮಿಕರನ್ನು ಬಸ್​ಗಳಲ್ಲಿ ಕರೆತಂದರೆ ಅಲ್ಲಿಂದ ಅವರನ್ನು ಅವರ ರಾಜ್ಯಗಳಿಗೆ ತಲುಪಿಸುವ ಯೋಜನೆ ಸಿದ್ಧಪಡಿಸಿದೆ.

    ಲಾಕ್​ಡೌನ್​ ಬಳಿಕ ರೈಲು ಸಂಚಾರ ಆರಂಭವಾದರೂ, ಸಾಮಾನ್ಯ ಪ್ರಯಾಣಿಕರಿಂದಲೇ ನಿಲ್ದಾಣಗಳು ಭರ್ತಿಯಾಗುತ್ತವೆ. ಹೀಗಾಗಿ ವಲಸೆ ಕಾರ್ಮಿಕರನ್ನು ರೈಲು ಸಂಚಾರದ ಮೇಲಿರುವ ನಿರ್ಬಂಧವನ್ನು ತೆರೆಯುವ ಮೊದಲೇ ಮಾಡಬೇಕು. ಏಕೆಂದರೆ, ದೇಶದ ಉದ್ದಗಲಕ್ಕೂ ಸಾವಿರಾರು ರೈಲುಗಳನ್ನು ಇದಕ್ಕಾಗಿ ಸುಧೀರ್ಘ ಅವಧಿವರೆಗೆ ಓಡಿಸಬೇಕಾಗುತ್ತದೆ. ಈಗಾಗಲೇ ಉದ್ಯೋಗ ಕಳೆದುಕೊಂಡ ಸಂಕಷ್ಟದಲ್ಲಿರುವ ಕಾರಣ ಈ ಸೇವೆಯನ್ನು ಉಚಿತವಾಗಿ ಒದಗಿಸಬೇಕೆಂಬ ಸಲಹೆಯನ್ನು ಯೋಜನೆ ರೂಪಿಸಿದ 2014ರ ಭಾರತೀಯ ರೈಲ್ವೆ ಸಂಚಾರ ಅಧಿಕಾರಿ ಹರ್ಷ ಶ್ರೀವಾಸ್ತವ್​ ಹಾಗೂ ಇದೇ ತಂಡದ ಇನ್ನೊಬ್ಬ ಅಧಿಕಾರಿ ಸೃಷ್ಟಿ ಗುಪ್ತಾ ನೀಡಿದ್ದಾರೆ.

    ಆಯಾ ರಾಜ್ಯಗಳ ಹಾಟ್​ಸ್ಪಾಟ್​ ಹಾಗೂ ಕಂಟೇನ್​ಮೆಂಟ್​ ಝೋನ್​ಗಳನ್ನು ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಎಲ್ಲೆಂದರಲ್ಲಿ ಚೈನ್​ ಎಳೆದು ನಿಲ್ಲಿಸುವುದನ್ನು ತಡೆಯಲು ಚೈನ್​ಗಳಿಗೆ ಪುಡಿ ರೂಪದ ಬಣ್ಣ ಬಳಿಯಬೇಕು. ಇದರಿಂದ ಯಾರು ವಿನಾಕಾರಣ ರೈಲನ್ನು ನಿಲ್ಲಿಸಲು ಯತ್ನಿಸುತ್ತಾರೆ ಎಂಬುದು ಗೊತ್ತಾಗಲಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ ನೀಡಬೇಕು. ಪ್ರಯಾಣಿಕರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಆರೋಗ್ಯ ಸೇತು ಆ್ಯಪ್​ ಅಥವಾ ಮುಂಗಡ ಕಾಯ್ದಿರಿಸುವಿಕೆ ವಿಧಾನ ಅನುಸರಿಸುವಂತೆ ತಿಳಿಸಲಾಗಿದೆ.

    ಈ ಯೋಜನಾ ವರದಿಯನ್ನು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ನಿಮ್ಮವರನ್ನು ಕರೆಯಿಸಿಕೊಳ್ಳಿ, ವಲಸೆ ಕಾರ್ಮಿಕರ ರಾಜ್ಯಗಳಿಗೆ ಮೊರೆಯಿಟ್ಟ ಮಹಾರಾಷ್ಟ್ರ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts