More

    ಅದಿರು ಲಾರಿಗಳಿಂದ ಕೃಷಿಕರಿಗೆ ಕಿರಿಕಿರಿ – ಪ್ರತಿಭಟನೆ

    ಸಂಡೂರು: ಕೃಷ್ಣಾನಗರ, ದೌಲತ್‌ಪುರ ವ್ಯಾಪ್ತಿಯಲ್ಲಿ ಗಣಿ ಕಂಪನಿಯಿಂದ ಹೊಲಗಳಲ್ಲಿ ರಸ್ತೆ ನಿರ್ಮಿಸಿ ಅದಿರು ಸಾಗಣೆ ಮಾಡಲಾಗುತ್ತಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ಹಸಿರು ಸೇನೆ-ರೈತ ಸಂಘದ ನೇತೃತ್ವದಲ್ಲಿ ಭುಜಂಗನಗರ, ಸಂಡೂರು, ಕೃಷ್ಣಾನಗರ, ದೌಲತ್‌ಪುರ ರೈತರು ತಿಮ್ಮಪ್ಪನ ಗುಡಿ ಹತ್ತಿರ ಗುರುವಾರ ಪ್ರತಿಭಟನೆ ನಡೆಸಿದರು.

    ಈ ಮೊದಲು ಅದಿರು ಲಾರಿಗಳಷ್ಟೇ ಓಡಾಡುತ್ತಿದ್ದು, ಖಾಲಿ ಲಾರಿಗಳನ್ನು ಮುರಾರಿಪುರ ಮೂಲಕ ಕಳಿಸಿಕೊಡಲಾಗುತ್ತಿತ್ತು. ಆದರೀಗ ಅದಿರು ತುಂಬಿದ ಮತ್ತು ಖಾಲಿ ಲಾರಿಗಳನ್ನೂ ಇದೇ ಕೃಷ್ಣಾನಗರ ಕಡೆ ಬಿಡಲಾಗುತ್ತಿದೆ. ರೈತರ ಕಷ್ಟ ಯಾರೂ ಕೇಳುತ್ತಿಲ್ಲ. ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

    ಬೆಳೆಗಳ ಮೇಲೆ ಧೂಳು ಆವರಿಸಿ ಇಳುವರಿ ಕುಂಠಿತವಾಗುತ್ತಿದೆ. ಕೆಲ ರೈತರಿಂದ ಭೂ ಪರಿವರ್ತನೆ ಆಗದ ಜಮೀನುಗಳನ್ನು ಖರೀದಿಸಿ, ಅಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ರೈತರ ಕಷ್ಟ ಹೇಳತೀರದಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.

    ಇದನ್ನೂ ಓದಿ: ಅದಿರು ಲಾರಿಗಳಿಂದ ಜನರ ಬದುಕಿಗೆ ಸಂಚಕಾರ

    ರೈತರ ಮನವೊಲಿಸಲು ಎಂಎಂಎಲ್ ಕಂಪನಿ ವ್ಯವಸ್ಥಾಪಕ ಬಸವರಾಜ್ ಪ್ರಯತ್ನ ಮಾಡಿದರು. ಸಿಸಿ ರಸ್ತೆ ನಿರ್ಮಿಸಿಕೊಡಲಾಗುವುದು, ತಿಮ್ಮಪ್ಪನ ಗುಡಿಗೆ ಹೋಗಿಬರಲು ಪ್ರತಿ ಶನಿವಾರ ಯಾವುದೇ ಲಾರಿಗಳು ಓಡಾಡದಂತೆ ಕ್ರಮವಹಿಸಲಾಗುವುದು.

    ಏಪ್ರಿಲ್ ತನಕ ಅದಿರು ಸಾಗಣೆಯ ನಿಗದಿತ ಗುರಿಯಿದ್ದು, ನಂತರ ಈ ದಾರಿಯಲ್ಲಿ ಅದಿರು ತುಂಬಿದ ಲಾರಿಗಳನ್ನಷ್ಟೇ ಓಡಿಸಲಾಗುವುದು ಎಂದು ಭರವಸೆ ನೀಡಿದರು. 60 ದಿನ ಸಮಯ ನೀಡಿರುವುದಾಗಿ ಹೇಳಿರುವ ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ಎಸ್.ಧರ್ಮಾನಾಯ್ಕ, ಅದಿರು ಲಾರಿಗಳನ್ನು ಮಾತ್ರ ಓಡಿಸಬೇಕು. ಖಾಲಿ ಲಾರಿಗಳನ್ನು ಮುರಾರಿಪುರದ ಮೂಲಕ ಸಂಚರಿಸಲು ಒಪ್ಪಿಗೆ ಕೊಟ್ಟಿರುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts