More

    ಸಂತೆ ಸ್ಥಳಾಂತರಕ್ಕೆ ಪರ-ವಿರೋಧ

    ಕುಶಾಲನಗರ: ಆರ್‌ಎಂಸಿ ಮಾರುಕಟ್ಟೆ ಮೈದಾನ ನಡೆಯುತ್ತಿರುವ ಸಂತೆಯನ್ನು ಇಲ್ಲಿಯೇ ಮುಂದುವರಿಸಬೇಕು ಎಂದು ಸಾರ್ವಜನಿಕರು ಹಾಗೂ ವರ್ತರ ಸಂಘದ ಒಂದು ಬಣ ಒತ್ತಾಯಿಸಿದೆ.

    ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಇರುವುದರಿಂದ ಸಂತೆಗೆ ಆರ್‌ಎಂಸಿ ಮೈದಾನ ಸೂಕ್ತ ಸ್ಥಳವಾಗಿದೆ ಎಂದು ಸಾರ್ವಜನಿಕರು ಹಾಗೂ ಬಹುತೇಕ ವ್ಯಾಪಾರಿಗಳ ಅಭಿಪ್ರಾಯವಾಗಿದೆ. ಆದರೆ ಕೆಲವರು ಮಾತ್ರ ಈ ಹಿಂದೆ ಇದ್ದ ಕೆಇಬಿ ಕಚೇರಿ ಮುಂಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಕುಶಾಲನಗರ ಸಂತೆ ಆರಂಭವಾದಾಗಿನಿಂದ ಕೆಇಬಿ ಕಚೇರಿ ಮುಂಭಾಗದ 1.75 ಎಕರೆ ಜಾಗದಲ್ಲಿ ನಡೆಸಲಾಗುತ್ತಿತ್ತು. ಊರು ಬೆಳೆದಂತೆ ಸಂತೆಯೂ ಬೆಳೆಯುತ್ತ ಹೋಯಿತು. ಇದರಿಂದ ಅಕ್ಕಪಕ್ಕದ ಜಿಲ್ಲೆಯ ವರ್ತಕರು ಇಲ್ಲಿಗೆ ವ್ಯಾಪಾರಕ್ಕೆ ಬರಲು ಆರಂಭಿಸಿದರು. ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ವ್ಯಾಪಾರಿಗಳು ಮತ್ತು ಗ್ರಾಹಕರ ಒತ್ತಡ ಹೆಚ್ಚಾದಂತೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಆರ್‌ಎಂಸಿ ಮೈದಾನಕ್ಕೆ ಸ್ಥಳಾಂತರ ಮಾಡಲು ಪ್ರಮುಖರು ಚಿಂತನೆ ನಡೆಸಿದರು. ಹಳೆಯ ಮಾರುಕಟ್ಟೆ ಪ್ರದೇಶದಲ್ಲಿ 66 ಕೆವಿ ವಿದ್ಯುತ್ ಲೈನ್ ಹಾದು ಹೋಗಿದ್ದರಿಂದ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು.
    ಮಾರುಕಟ್ಟೆ ಪ್ರದೇಶದಲ್ಲಿ ಕನಿಷ್ಠ ಮೂಲಸೌಕರ್ಯವಿರಲಿಲ್ಲ. ಮಳೆ ಬಂದರೆ ಇಡೀ ಪ್ರದೇಶ ಕೇಸರುಮಯ ಆಗುತ್ತಿತ್ತು. ಸಮೀಪದಲ್ಲೇ ಇರುವ ಮಾಂಸ ಮಳಿಗೆಗಳಿಂದ ಕಿರಿಕಿರಿ, ಕೊಳೆತ ಮಾಂಸದಿಂದ ದುರ್ವಾಸನೆ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ ಎನ್ನುವ ದೂರಿನ ಮೇರೆಗೆ ಆಗಿನ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸಂತೆ ವರ್ತಕರು, ಗ್ರಾಹಕರು, ಊರಿನ ಪ್ರಮುಖರ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಲಾಗಿತ್ತು. ಸ್ಥಳಾಂತರಕ್ಕೆ ಪರ, ವಿರೋಧ ಹೇಳಿಕೆಗಳನ್ನು ಅವಲೋಕಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಆರ್‌ಎಂಸಿ ಮೈದಾನದಲ್ಲಿ ಸಂತೆ ಮಾಡುವುದು ಸೂಕ್ತವೆಂದು ನಿರ್ಧಾರ ಮಾಡಲಾಯಿತು. ಸ್ಥಳಾಂತರಕ್ಕೆ ಆರ್‌ಎಂಸಿ ಆಡಳಿತ ಮಂಡಳಿ, ಅಧಿಕಾರಿಗಳು, ತಹಸೀಲ್ದಾರ್‌ಗೆ ಮೌಖಿಕ ಆದೇಶ ನೀಡಿದರು.

    ಆರ್‌ಎಂಸಿ ಮೈದಾನ ಒಟ್ಟು 11.5 ಎಕರೆ ಜಾಗದಲ್ಲಿ ಕಟ್ಟಡಗಳನ್ನು ಹೊರತುಪಡಿಸಿದರೆ 8 ಎಕರೆಯಷ್ಟು ವಿಶಾಲವಾದ ಸ್ಥಳಾವಕಾಶ ಸಂತೆಗಾಗಿ ದೊರೆತಿದ್ದರಿಂದ ಎರಡು ವರ್ಷಗಳ ಹಿಂದೆ ಸಂತೆ ಸ್ಥಳಾಂತರವಾಗಿದೆ. ವರ್ತಕರು, ಗ್ರಾಹಕರು ಈ ಹೊಸ ಮಾರುಕಟ್ಟೆಗೆ ಹೊಂದಿಕೊಂಡು ಹೋಗಿದ್ದಾರೆ. ಆದರೆ ಈಗ ಮತ್ತೆ ಹಳೆಯ ಸಂತೆಮಾಳಕ್ಕೆ ಸ್ಥಳಾಂತರ ಮಾಡಲು ದೊಡ್ಡ ಮಟ್ಟದ ಲಾಬಿ ಆರಂಭವಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ.
    ಆರ್‌ಎಂಸಿ ಮೈದಾನದಲ್ಲಿ ಮುಂದುವರಿಸುವಂತೆ ಸಂತೆ ವ್ಯಾಪಾರಿಗಳ ಸಂಘದ ಒಂದು ಬಣ ಒತ್ತಾಯವಾಗಿದ್ದರೆ, ಈ ಹಿಂದೆ ನಡೆಯುತ್ತಿದ್ದ ಜಾಗಕ್ಕೆ ಸ್ಥಳಾಂತರಿಸಬೇಕು. ಇದರಿಂದ ಪುರಸಭೆಗೆ ವಾರ್ಷಿಕ 15 ರಿಂದ 16 ಲಕ್ಷ ರೂ. ಆದಾಯ ಬರುತ್ತದೆ ಎಂದು ಮತ್ತೊಂದು ಬಣ ಒತ್ತಡ ಹಾಕುತ್ತಿದೆ.
    ಈ ಪ್ರದೇಶವನ್ನು ಸ್ವಚ್ಛವಾಗಿಡಲು ಪುರಸಭೆಯ ಪೌರಕಾರ್ಮಿಕರ ಶ್ರಮವಿದೆ. ಇಲ್ಲಿ ಬರುವ ಆದಾಯ ಸಂಪೂರ್ಣವಾಗಿ ಆರ್‌ಎಂಸಿ ಉಪಯೋಗಿಸಿಕೊಳ್ಳುತ್ತಿದೆ. ಈಗಿನ ಪುರಸಭೆ ಆಡಳಿತ ಸಂಗ್ರಹವಾಗುವ ಸುಂಕದಲ್ಲಿ ಅರ್ಧ ಭಾಗಬೇಕೆಂದು ಪತ್ರ ಬರೆದಿದೆ. ಆರ್‌ಎಂಸಿ ಆಡಳಿತಾಧಿಕಾರಿಯಾಗಿರುವ ಕುಶಾಲನಗರ ತಹಸೀಲ್ದಾರ್ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts