More

    ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹ

    ಬಾಗಲಕೋಟೆ: ಲೋಕಸಭೆ ಚುನಾವಣೆಗಾಗಿ ಈಗಾಗಲೇ ಭರ್ಜರಿ ತಯಾರಿ ಆರಂಭಿಸಿರುವ ಬಿಜೆಪಿ, ಇದೀಗ ಲೋಕ ಸಮರದ ಅಭ್ಯರ್ಥಿ ಯಾರಾಗಬೇಕು? ಸದ್ಯದ ಪರಿಸ್ಥಿತಿ ಹೇಗಿದೆ? ಎನ್ನುವುದೂ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಶುಕ್ರವಾರ ಪಕ್ಷದ ಕಚೇರಿಯಲ್ಲಿ ಮಾಹಿತಿ ಸಂಗ್ರಹ ಕಾರ್ಯ ನಡೆಯಿತು.

    ನವನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಈ ಸಭೆಗೆ ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಉಸ್ತುವಾರಿ ಲಿಂಗರಾಜ್ ಪಾಟೀಲ ಆಗಮಿಸಿ, ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಮುಂಚೂಣಿ ಮುಖಂಡರು, ಜಿಲ್ಲಾ ಪದಾಧಿಕಾರಿಗಳಿಂದ ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಿದರು.

    ಲೋಕಸಭೆಗೆ ಟಿಕೆಟ್ ಆಕಾಂಕ್ಷಿಗಳು ಸಹ ತಮ್ಮ ಅಭಿಪ್ರಾಯ ಹೇಳಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಕ್ಷೇತ್ರದಲ್ಲಿ ಬಿಜೆಪಿ ನಾಲ್ಕು ಚುನಾವಣೆಗಳಲ್ಲಿ ಗೆಲುವನ್ನು ಪಡೆದುಕೊಂಡಿದ್ದು, ಆ ಗೆಲುವಿನ ಯಾತ್ರೆ ಮುಂದುವರಿಯಲು ಅಗತ್ಯ ಸಲಹೆ ಸೂಚನೆಗಳನ್ನು ಸಹ ಮುಖಂಡರು ಆಲಿಸಿದ್ದಾರೆ.

    ಅಭ್ಯರ್ಥಿ ಯಾರೇ ಆಗಲಿ, ಗೆಲುವು ಬಿಜೆಪಿಯದ್ದಾಗಬೇಕು ಎನ್ನುವ ಕಿವಿಮಾತನ್ನು ಪಕ್ಷದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ನರಗುಂದ ಶಾಸಕ ಸಿ.ಸಿ. ಪಾಟೀಲ, ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತರ, ಬೆಳಗಾವಿ ವಿಭಾಗದ ಉಸ್ತುವಾರಿ ಬಸವರಾಜ್ ಯಂಕಂಚಿ, ಜಿಲ್ಲಾ ಅಧ್ಯಕ್ಷ ಎಸ್.ಟಿ. ಪಾಟೀಲ, ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ 40 ರಿಂದ 50 ಜನರು ವೈಯಕ್ತಿಕವಾಗಿ ತೆರಳಿ ಪಕ್ಷ ಸಂಘಟನೆ, ಅಭ್ಯರ್ಥಿ ಯಾರಾದರೆ ಒಳ್ಳೆಯದು, ಒಮ್ಮತದ ಅಭ್ಯರ್ಥಿ ಯಾರಾಗಬಹುದು ಎನ್ನುವ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

    ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲೂ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವುದು, ಬೂತಮಟ್ಟದಲ್ಲಿ ಕಾರ್ಯಕರ್ತ ಪಡೆಯನ್ನು ಸನ್ನದ್ದುಗೊಳಿಸುವುದು, ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ಮನದಟ್ಟು ಮಾಡಿಕೊಡುವುದು ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸ ಮಾಡಬೇಕು ಎಂದು ಎಸ್.ಎ. ರಾಮದಾಸ್ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts