More

    ಮನಪಾದಲ್ಲಿ ಆನ್‌ಲೈನ್ ಸೇವೆಗೆ ಒಲವು

    ಪಿ.ಬಿ ಹರೀಶ್ ರೈ, ಮಂಗಳೂರು

    ಮಹಾನಗರ ಪಾಲಿಕೆಯಲ್ಲಿ ಯಾವುದೇ ಸೇವೆ ಪಡೆಯ ಬೇಕಿದ್ದರೂ ಸರತಿ ಸಾಲಿನಲ್ಲಿ ನಿಂತು ಕಾಯುವುದು ಅನಿವಾರ್ಯ. ಆನ್‌ಲೈನ್ ಮೂಲಕ ಪಾವತಿ ಮಾಡುವ ಯೋಜನೆ ಪ್ರಸ್ತಾವನೆ ಹಂತದಲ್ಲೇ ಉಳಿದಿರುವುದು ಇದಕ್ಕೆ ಕಾರಣ. ಈಗ ಕರೊನಾ ಸಂಕಷ್ಟದಿಂದ ದೈಹಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಆನ್‌ಲೈನ್ ಸೇವೆಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸಲು ಮನಪಾ ಚಿಂತನೆ ನಡೆಸಿದೆ.

    2008ರಲ್ಲಿ ಮನಪಾ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಸಮೀರ್ ಶುಕ್ಲಾ ಆಸ್ತಿ ತೆರಿಗೆ ಪಾವತಿ ಸಹಿತ ಎಲ್ಲ ಪಾವತಿ ವ್ಯವಸ್ಥೆಗೆ ಆನ್‌ಲೈನ್ ಸೌಲಭ್ಯ ಕಲ್ಪಿಸುವ ಚಿಂತನೆ ನಡೆಸಿದ್ದರು. ಆದರೆ ಆಡಳಿತ ನಡೆಸುವವರು ಕೆಲವು ತಾಂತ್ರಿಕ ಅಡಚಣೆಯ ನೆಪವೊಡ್ಡಿದ ಕಾರಣ ಪ್ರಸ್ತಾವನೆ ನನೆಗುದಿಗೆ ಬಿತ್ತು. ಆ ಬಳಿಕ ಒಂದೆರಡು ಬಾರಿ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಯಾದರೂ ಅದು ಯಶಸ್ಸು ಕಾಣಲಿಲ್ಲ.

    ಘೋಷಣೆ ಮಾತ್ರ: ಆಸ್ತಿ ತೆರಿಗೆ, ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ, ಉದ್ಯಮ ಪರವಾನಗಿ ಸಹಿತ ವಿವಿಧ ಸೇವೆಗಳು ಶೀಘ್ರ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಎಂದು ಹಿಂದಿನ ಕಾಂಗ್ರೆಸ್ ಅಡಳಿತ ಎರಡು ಬಾರಿ ಘೋಷಿಸಿತ್ತು. ಕೆಲವು ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದೆ. ಆದರೆ ತಾಂತ್ರಿಕ ಕಾರಣದಿಂದ ಸೇವೆಗಳಲ್ಲಿ ಅಡಚಣೆಯಾಗಿದೆ. ನ್ಯೂನತೆಗಳನ್ನು ಸರಿಪಡಿಸಿ ಸೇವೆಗೆ ಮರು ಚಾಲನೆ ನೀಡಲಾಗುತ್ತಿದೆ ಆಗ ತಿಳಿಸಲಾಗಿತ್ತು. ಆದರೆ ಈ ಘೋಷಣೆ ಆಗಿನ ಮೇಯರ್‌ಗಳ ಸುದ್ದಿಗೋಷ್ಠಿಗೆ ಸೀಮಿತವಾಯಿತು. ಆನ್‌ಲೈನ್ ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಯಾಗಲೇ ಇಲ್ಲ.

    ಈಗ ಸರತಿ ಸಾಲು: ಈಗ ಲಾಕ್‌ಡೌನ್ ಸಡಿಲಿಕೆಯಾದ ಕಾರಣ ಮನಪಾ ಕಚೇರಿಯಲ್ಲಿ ವಿವಿಧ ಸೇವೆ ಪಡೆಯಲು ಹಾಗೂ ಶುಲ್ಕ ಪಾವತಿಗೆ ಜನಜಂಗುಳಿ. ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಸರ್ಕಾರ ಶೇ.5ರಷ್ಟು ರಿಯಾಯಿತಿ ಪ್ರಕಟಿಸಿತ್ತು. ಲಾಕ್‌ಡೌನ್ ಕಾರಣ ಈ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ರಿಯಾಯಿತಿ ಸೌಲಭ್ಯ ಪಡೆಯುವ ಸಲುವಾಗಿ ಜನ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ದೈಹಿಕ ಅಂತರ ಕಾಪಾಡುವುದು ಕೂಡಾ ಕಷ್ಟವಾಗಿದೆ. ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಇದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಈ ಹಿಂದೆ ಪಾಲಿಕೆಯಲ್ಲಿ ಆನ್‌ಲೈನ್ ಸೇವೆ ವಿವಿಧ ಕಾರಣದಿಂದ ಜಾರಿಯಾಗಿರಲಿಲ್ಲ. ಈಗ ಯೋಜನೆಗೆ ಮರು ಚಾಲನೆ ನೀಡಲು ನಿರ್ಧರಿಸಲಾಗಿದೆ. ಆನ್‌ಲೈನ್ ಸೇವೆ ಒದಗಿಸುವ ಸಂಸ್ಥೆಯೊಂದನ್ನು ಸಂಪರ್ಕಿಸಲಾಗಿದೆ. ಆದಷ್ಟು ಶೀಘ್ರ ಜಾರಿಗೊಳಿಸಲು ಪ್ರಯತ್ನಿಸಲಾಗುವುದು.
    ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಅಯುಕ್ತರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts