More

    ಪಂಚಾಯ್ತಿ ಎಲೆಕ್ಷನ್ ವಿಘ್ನಕ್ಕೆ ಮೋಕ್ಷ?; ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಮೀಸಲಾತಿ ಕಾರ್ಯ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಜಿಪಂ, ತಾಪಂ ಹಾಗೂ ಬಿಬಿಎಂಪಿ ಚುನಾವಣೆಗೆ ಮುನ್ನ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಅನಿವಾರ್ಯತೆಗೆ ಸಿಲುಕಿರುವ ಸರ್ಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾನೂನಿನ ಕುಣಿಕೆಯಿಂದ ಪಾರಾಗಲು ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಜಾತಿ ಸಮೀಕ್ಷೆ ನಡೆಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

    ಏನಾಗಿದೆ ಸಮಸ್ಯೆ?: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಅಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳನ್ನು ಬಿಟ್ಟು ಉಳಿದ ಮೀಸಲಾತಿಯಿಂದ ಆಯ್ಕೆಯಾಗಿದ್ದ ಸದಸ್ಯರನ್ನು ರದ್ದು ಮಾಡಲಾಗಿದೆ. ಆದ್ದರಿಂದಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಭೀತಿ ಆರಂಭವಾಗಿದೆ. ಸುಪ್ರೀಂ ಹೇಳಿರುವ ಮಾನದಂಡದ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಲು ಈಗ ದಾರಿಯನ್ನು ಹುಡುಕಿಕೊಂಡಿದೆ.

    ಸಮೀಕ್ಷೆ ಬಳಕೆ: ಹಿಂದೆ ಎಚ್. ಕಾಂತರಾಜ್ ಅಧ್ಯಕ್ಷರಾಗಿದ್ದಾಗ ಆಯೋಗ 158.47 ಕೋಟಿ ರೂ. ವೆಚ್ಚ ಮಾಡಿ ಜಾತಿ ಸಮೀಕ್ಷೆ ಮಾಡಿದೆ. ಯಾವ ಜಾತಿ ಎಷ್ಟಿದೆ ಎಂಬ ನಿಖರವಾದ ಅಂಕಿಅಂಶಗಳಿವೆ. ಅವುಗಳನ್ನೇ ಬಳಸಿ ಮಾನದಂಡ ನಿಗದಿ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅಷ್ಟರೊಳಗೆ ಸುಪ್ರೀಂಕೋರ್ಟ್ ಮುಂದೆ ಈ ಎಲ್ಲ ಅಂಶಗಳನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

    ಹಿಂದುಳಿದವರಿಗೆ ಮೀಸಲಾತಿ ನೀಡದೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ. ಆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡಿಕೊಡಲು ವಿವಿಧ ಮಾರ್ಗ ಹುಡುಕುತ್ತಿದ್ದೇವೆ. ಆದಷ್ಟು ಬೇಗ ಸುಪ್ರೀಂಕೋರ್ಟ್​ಗೆ ಈ ಕುರಿತು ಅಫಿಡವಿಟ್ ಹಾಕುತ್ತೇವೆ.

    | ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ

    ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮಕ್ಕೆ ತಿದ್ದುಪಡಿ ತರುವ ಸಂಗತಿ ತಮ್ಮ ಗಮನಕ್ಕೆ ಬಂದಿಲ್ಲ. ಸರ್ಕಾರದ ಮಟ್ಟದಲ್ಲಿ ಯಾವ ನಿರ್ಧಾರ ಆಗಿದೆಯೋ ಗೊತ್ತಿಲ್ಲ. ಸರ್ಕಾರ ಆಯೋಗಕ್ಕೆ ಏನು ತಿಳಿಸುತ್ತದೆಯೋ ಅದರಂತೆ ಆಯೋಗ ತಮ್ಮ ಕರ್ತವ್ಯ ನಿರ್ವಹಿಸಲಿದೆ.

    | ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

    ವರದಿ ಒಪ್ಪುವುದೇ?: ಕಾಂತರಾಜ್ ಆಯೋಗ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷಾ ವರದಿ ಶಿಫಾರಸುಗಳನ್ನು ಒಪು್ಪವುದಕ್ಕೆ ಸರ್ಕಾರ ಸಿದ್ಧವಿಲ್ಲ. ವರದಿ ಒಪ್ಪಿದರೆ ರಾಜಕೀಯವಾಗಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸಮೀಕ್ಷೆಯಲ್ಲಿನ ಶಿಫಾರಸು ಬಿಟ್ಟು ಕೇವಲ ಅಂಕಿಅಂಶ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡಗಳಿದ್ದರೆ, ಇನ್ನೊಂದೆಡೆ ವರದಿ ಒಪ್ಪದಂತೆಯೂ ಒತ್ತಾಯಗಳಿವೆ.

    ಪಂಚಾಯ್ತಿ ಎಲೆಕ್ಷನ್ ವಿಘ್ನಕ್ಕೆ ಮೋಕ್ಷ?; ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಮೀಸಲಾತಿ ಕಾರ್ಯ ಪಂಚಾಯ್ತಿ ಎಲೆಕ್ಷನ್ ವಿಘ್ನಕ್ಕೆ ಮೋಕ್ಷ?; ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಮೀಸಲಾತಿ ಕಾರ್ಯ

    ಏನಾಗುತ್ತಿತ್ತು?: ಸರ್ಕಾರ ಏಪ್ರಿಲ್​ನಲ್ಲಿ ಜಿಪಂ, ತಾಪಂ, ಆ ನಂತರ ಬಿಬಿಎಂಪಿ ಚುನಾವಣೆ ನಡೆಸಲು ಕ್ಷೇತ್ರ ಪುನರ್ವಿಂಗ ಡಣಾ ಆಯೋಗ ರಚಿಸಿತ್ತು. ಆದರೀಗ ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಮೀಸಲಾತಿಗಾಗಿ ದಾರಿ ಹುಡುಕಿದೆ. ಪರಿಹಾರ ಸಿಗದೇ ಹೋದರೆ ಚುನಾವಣೆ ಮಾತ್ರವಲ್ಲ ಅಧ್ಯಕ್ಷ-ಉಪಾಧ್ಯಕ್ಷ, ಮೇಯರ್-ಉಪ ಮೇಯರ್ ಆಯ್ಕೆಗೂ ಸಮಸ್ಯೆಯಾಗುತ್ತದೆ.

    ಪರಿಹಾರವೇನು?: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಾನೂನು ತಜ್ಞರು, ಹಿರಿಯ ಸಚಿವರ ಜತೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಹಿಂದುಳಿದವರಿಗೆ ಮೀಸಲಾತಿ ಇಲ್ಲದಂತೆ ಚುನಾವಣೆ ನಡೆಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂಬ ಸ್ಪಷ್ಟ ಅರಿವು ಇರುವುದರಿಂದಲೇ ಮೀಸಲಾತಿ ನೀಡಿಯೇ ಚುನಾವಣೆ ನಡೆಸಲು ನಿರ್ಧರಿಸಿದ್ದಾರೆ. ಮೊದಲು ಪ್ರತ್ಯೇಕವಾದ ಆಯೋಗ ರಚಿಸಿ ಅದರ ಮೂಲಕ ಅಧ್ಯಯನ ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ ಹೊಸ ಆಯೋಗ ರಚನೆ ಮಾಡಿದರೆ ಸಮಯ ವ್ಯರ್ಥವಾಗುತ್ತದೆ. ಹೊಸ ಆಯೋಗ ಅಧ್ಯಯನ ಮಾಡುವುದರೊಳಗೆ ತಡವಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ರಾಜಕೀಯ ಮೀಸಲಾತಿ ಕಾರ್ಯ ಮಾಡಿ ಮುಗಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಾಯ್ದೆ ತಿದ್ದುಪಡಿ ಏಕೆ?: ಹಿಂದುಳಿದ ವರ್ಗಗಳ ಆಯೋಗಕ್ಕೀಗ ರಾಜಕೀಯ ಮೀಸಲಾತಿ ನೀಡುವ ಅಧಿಕಾರ ಇಲ್ಲ. ಏನಿದ್ದರೂ ಶೈಕ್ಷಣಿಕ , ಉದ್ಯೋಗದ ಬಗ್ಗೆ ಮಾತ್ರ ಮೀಸಲಾತಿಗೆ ಶಿಫಾರಸು ಮಾಡಬಹುದು. ಆದ್ದರಿಂದ ಆಯೋಗದ ಅಧಿನಿಯಮಕ್ಕೆ ತಿದ್ದುಪಡಿ ತಂದು ರಾಜಕೀಯ ಮೀಸಲಾತಿ ನೀಡುವ ಅಧಿಕಾರವನ್ನು ನೀಡಲಾಗುತ್ತದೆ. ಈ ಅಧಿವೇಶನ ಮಾರ್ಚ್ ಅಂತ್ಯದ ತನಕ ನಡೆಯಲಿದ್ದು, ಇದೇ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕ ಮಂಡನೆ ಮಾಡಿ ಒಪ್ಪಿಗೆ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts