More

    ಇಂದು ಪಾಕ್-ಕಿವೀಸ್ ಕಾದಾಟ ; ಶುಭಾರಂಭದ ನಿರೀಕ್ಷೆಯಲ್ಲಿ ವಿಲಿಯಮ್ಸನ್ ಪಡೆ

    ಶಾರ್ಜಾ: ಏಕದಿನ ಹಾಗೂ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಎದುರು ಚೊಚ್ಚಲ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿರುವ ಪಾಕಿಸ್ತಾನ ತಂಡ ಮಂಗಳವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಹಣಾಹಣಿಗೆ ಸನ್ನದ್ಧವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ನ್ಯೂಜಿಲೆಂಡ್ ಎದುರು ಜಯ ದಾಖಲಿಸಿದರೆ ಪಾಕ್ ತಂಡ ಬಹುತೇಕ ಸೆಮಿಫೈನಲ್ ಹಂತವನ್ನು ಖಚಿತಪಡಿಸಿಕೊಳ್ಳಲಿದೆ. ಪಂದ್ಯಕ್ಕೆ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಟಾಸ್ ಜಯಿಸಿದ ತಂಡ ಯಾವುದೇ ಮುಲಾಜಿಲ್ಲದೆ ಫೀಲ್ಡಿಂಗ್ ಆಯ್ದುಕೊಳ್ಳಲಿದೆ.

    ಟೂರ್ನಿಗೂ ಮುನ್ನ ಪಾಕ್ ಪ್ರವಾಸ ಕೈಗೊಂಡರೂ ಸರಣಿ ಆರಂಭಕ್ಕೂ ಮುನ್ನವೇ ಭದ್ರತಾ ಭೀತಿಯ ಕಾರಣ ನೀಡಿ ನ್ಯೂಜಿಲೆಂಡ್ ತಂಡ ತವರಿಗೆ ವಾಪಸಾಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡ ಕೂಡ ಪಾಕ್ ಪ್ರವಾಸದಿಂದ ಹಿಂದೆ ಸರಿದಿತ್ತು. ವಿಶ್ವಕಪ್ ತಯಾರಿ ದೃಷ್ಟಿಯಿಂದ ಪಾಕ್ ತಂಡಕ್ಕೆ ಭಾರಿ ಹಿನ್ನಡೆಯುಂಟಾಗಿತ್ತು. ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಗೆ ಶಹೀನ್ ಷಾ ಅಫ್ರಿದಿ ಆಘಾತ ನೀಡಿದ್ದರೆ, ನಾಯಕ ಬಾಬರ್ ಅಜಮ್, ಮೊಹಮದ್ ರಿಜ್ವಾನ್ 10 ವಿಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಖರ್ ಜಮಾನ್, ಮೊಹಮದ್ ಹಫೀಜ್, ಶೋಯಿಬ್ ಮಲಿಕ್ ಒಳಗೊಂಡ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ.

    *ವಿಲಿಯಮ್ಸನ್ ಫಿಟ್ನೆಸ್ ಸಮಸ್ಯೆ?
    ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫಿಟ್ನೆಸ್ ಸಮಸ್ಯೆ ಇನ್ನು ಬಗೆ ಹರಿದಿಲ್ಲ. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿಲಿಯಮ್ಸನ್ ಬ್ಯಾಟಿಂಗ್ ಮಾಡಿರಲಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಲಯ ಹೊಂದಿರುವ ನ್ಯೂಜಿಲೆಂಡ್ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಟ್ರೆಂಟ್ ಬೌಲ್ಡ್, ಲಾಕಿ ಫರ್ಗ್ಯುಸನ್, ಟಿಮ್ ಸೌಥಿರಂಥ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಕಿವೀಸ್ ತಂಡ ಪಾಕ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 24, ಪಾಕಿಸ್ತಾನ: 14, ನ್ಯೂಜಿಲೆಂಡ್: 10
    ಟಿ20 ವಿಶ್ವಕಪ್‌ನಲ್ಲಿ: 5, ಪಾಕಿಸ್ತಾನ: 3, ನ್ಯೂಜಿಲೆಂಡ್: 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts