More

    ಪಕ್ಷದ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುವಂತಿಲ್ಲ

    ಹಾನಗಲ್ಲ: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾವುದೇ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸುವಂತಿಲ್ಲ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಸ್ಪಷ್ಟಪಡಿಸಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಣೆಬೆನ್ನೂರ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬ ರಾಜಕೀಯ ಪಕ್ಷದ ಚಿಹ್ನೆ ಹಾಕಿ ಕರಪತ್ರ ಮುದ್ರಿಸಿರುವುದು ವಾಟ್ಸ್​ಆಪ್​ನಲ್ಲಿ ಹರಿದಾಡುತ್ತಿದೆ. ಇಂಥ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಬೇಕು.

    ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸ್​ಆಪ್ ಮತ್ತಿತರ ಮಾಧ್ಯಮಗಳು, ಖಾಸಗಿ ವೇದಿಕೆಗಳಲ್ಲಿ ಚುನಾವಣಾ ವಿಷಯಗಳ ಕುರಿತು ಮಾಹಿತಿ ಹಾಕಬಾರದು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ಕರಪತ್ರ ಮುದ್ರಿಸುವಾಗ ಮಾದರಿ ನೀಡಿ, ಚುನಾವಣಾಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು. ಗ್ರಾಮದಲ್ಲಿ ಸಭೆ-ಸಮಾರಂಭ, ಮನೆ-ಮನೆ ಪ್ರಚಾರಕ್ಕೂ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು. ಫ್ಲೆಕ್ಸ್ , ಬಾವುಟ, ಭಿತ್ತಿಚಿತ್ರ, ಪ್ರಚಾರ ಫಲಕ ಹಾಕಬಾರದು ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಎಂಸಿಸಿ ತಂಡ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಜರುಗಿಸುತ್ತಾರೆ ಎಂದು ಎಚ್ಚರಿಸಿದರು.

    ನಾಮಪತ್ರ ಹಿಂಪಡೆಯಲು ಅಭ್ಯರ್ಥಿಯಾಗಲಿ, ಸೂಚಕರಾಗಲಿ ಕಡ್ಡಾಯವಾಗಿ ಹಾಜರಿರಬೇಕು. ದೂರವಾಣಿಯಲ್ಲಿ ತಿಳಿಸುವುದು ಕಾನೂನು ಕ್ರಮವಲ್ಲ. ಡಿ. 17ರಂದು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆ ಸಿಬ್ಬಂದಿ ಅಭ್ಯರ್ಥಿಗಳ ಸಭೆ ನಡೆಸಲಿದ್ದಾರೆ. ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬಂದೂಕು ಪರವಾನಗಿ ಹೊಂದಿರುವವರು ಪೊಲೀಸ್ ಠಾಣೆಗಳಿಗೆ ಒಪ್ಪಿಸಲು ಸೂಚಿಸಲಾಗಿದೆ ಎಂದರು.

    ಸಭೆಯಲ್ಲಿ ಇಒ ಸುನೀಲಕುಮಾರ, ಸಿಪಿಐ ಶಿವಶಂಕರ ಗಣಾಚಾರಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಗೌಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎಸ್. ಪಾಟೀಲ, ಜೆಡಿಎಸ್ ಅಧ್ಯಕ್ಷ ಸುರೇಶ ನಾಯ್ಕ ಇತರರು ಇದ್ದರು.

    ಗ್ರಾಪಂ ಚುನಾವಣೆ ನೀತಿ ಸಂಹಿತೆ ಅವಧಿ ಮುಗಿಯುವವರೆಗೆ ಎಲ್ಲ ಗೂಡಂಗಡಿಗಳು, ಢಾಬಾಗಳು ರಾತ್ರಿ 10 ಗಂಟೆಯೊಳಗಾಗಿ ಬಾಗಿಲು ಮುಚ್ಚಬೇಕು. ನಿರ್ಲಕ್ಷಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು.
    | ಪಿ.ಎಸ್. ಎರ್ರಿಸ್ವಾಮಿ ತಹಸೀಲ್ದಾರ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts