More

    ಹಳ್ಳಿಯಲ್ಲಿಲ್ಲ ಬಾಂಧವ್ಯ, ಎಲ್ಲೆಲ್ಲೂ ವೈಷಮ್ಯ

    ಬೆಳಗಾವಿ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಅಖಾಡದ ಸದ್ದು ಜೋರಾಗಿದ್ದು, ಮತದಾರರನ್ನು ಸೆಳೆಯಲು ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಲ್ಲದೆ, ಗ್ರಾಮಗಳ ಜನರಲ್ಲಿ ರಾಜಕೀಯ ವೈಷಮ್ಯಕ್ಕೂ ‘ಹಳ್ಳಿ ಕದನ’ ಎಡೆಮಾಡಿಕೊಟ್ಟಿದೆ.

    ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಳ್ಳಿ ಪ್ರಮುಖರು ಹಾಗೂ ಹಿರಿಯರ ಸಮ್ಮುಖದಲ್ಲಿ ಶೇ. 60ರಷ್ಟು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಪ್ರಸಕ್ತ ಅವಧಿಯ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳೂ ಧುಮುಕಿದ್ದು, ತಮ್ಮ ಕಾರ್ಯಕರ್ತರನ್ನೇ ಸ್ಪರ್ಧೆಗೆ ನಿಲ್ಲಿಸಿದ್ದಾರೆ. ಹೀಗಾಗಿ ಮತಭೇಟೆಗಾಗಿ ಉಭಯ ಸ್ಪರ್ಧಿಗಳಲ್ಲಿ ಮತ್ತು ಅವರ ಬೆಂಬಲಿಗರ ನಡುವೆ ವೈರುತ್ವ ಹುಟ್ಟುಕೊಂಡಿದೆ.

    ಅಬ್ಬರದ ಪ್ರಚಾರ: ಜಿಲ್ಲೆಯ 477 ಗ್ರಾಮ ಪಂಚಾಯಿತಿ ವ್ಯಾಪ್ತಿಯ 560ಕ್ಕೂ ಅಧಿಕ ಹಳ್ಳಿಗಳಲ್ಲಿ ಕುಟುಂಬಗಳ ಪ್ರತಿಷ್ಠೆ, ಸ್ಥಳೀಯ ರಾಜಕೀಯ ನಾಯಕರ ಸ್ವಪ್ರತಿಷ್ಠೆಗಾಗಿ ಗ್ರಾಪಂ ಫೈಟ್‌ಗೂ ವಿಧಾನಸಭಾ ಚುನಾವಣೆ ಮಾದರಿಯಲ್ಲಿ ಪ್ರಚಾರ ನಡೆಯುತ್ತಿದೆ. ಅಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಚಾರಕ್ಕೆ ತಾಲೂಕು, ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸುತ್ತಿದ್ದು, ಮತದಾರರಲ್ಲೂ ತೀವ್ರ ಕುತೂಹಲ ಮೂಡಿಸುತ್ತಿದೆ.

    ಮಾತಿನ ಚಕಮಕಿ: ಈಗಾಗಲೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕುಟುಂಬ ಸಮೇತ ತಮ್ಮ ವಾರ್ಡ್‌ಗಳಲ್ಲಿನ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದಾರೆ. ಅಲ್ಲದೆ, ರಾಜಕೀಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ ಅಲ್ಲಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆಗಳೂ ಆಗುತ್ತಿವೆ. ಹಾಗಾಗಿ ಗುಂಪು ಕಟ್ಟಿಕೊಂಡು ಹಳ್ಳಿಗಳಲ್ಲಿ ಓಡಾಡುತ್ತಿರುವವರ ಮೇಲೆ ಪೊಲೀಸರು ನಿಗಾ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸ್ಪರ್ಧೆಯಲ್ಲೂ ಇದೆ ಜಾತಿ ಲೆಕ್ಕಾಚಾರ

    ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸುತ್ತಿರುವ ಹಳ್ಳಿಗಳಲ್ಲಿ ಜಾತಿ ಲೆಕ್ಕಾಚಾರವೂ ಆರಂಭವಾಗಿದೆ. ಈಗಾಗಲೇ ವಾರ್ಡ್‌ನಲ್ಲಿ ಜಾತಿಗೊಬ್ಬ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚು ಮತದಾರರ ಸಂಖ್ಯೆ ಹೊಂದಿರುವ ಮತ್ತು ಕಡಿಮೆ ಸಂಖ್ಯೆ ಹೊಂದಿರುವ ಸಮುದಾಯದ ಅಭ್ಯರ್ಥಿಗಳು ಸಣ್ಣ ಮತ್ತು ಅತಿ ಸಣ್ಣ ಸಮುದಾಯದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಮದುರ್ಗ ತಾಲೂಕಿನ ಮಹಾದೇವ ದಡ್ಡಿಮನಿ, ಸಂಗಪ್ಪ ಎಂ. ಮಾದರ ತಿಳಿಸಿದ್ದಾರೆ.

    20 ವರ್ಷಗಳಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೊಂದಾಣಿಕೆ ಆಧಾರದ ಮೇಲೆ ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಈ ಬಾರಿ ಚುನಾವಣೆಯು ಗ್ರಾಮಸ್ಥರಲ್ಲಿ ವೈಷಮ್ಯ ಬೆಳೆಸುತ್ತಿದೆ. ಯುವಕರು ಗುಂಪು ಕಟ್ಟಿಕೊಂಡು ವೈರತ್ವ ಮಾಡಿಕೊಂಡು ಓಡಾಡುತ್ತಿದ್ದಾರೆ. ಇದು ಗ್ರಾಮದ ಒಗ್ಗಟ್ಟು ಮುರಿಯುತ್ತಿದೆ.
    | ಸುರೇಶ ಅಂಗಡಿ ವ್ಯಾಪಾರಿ, ಮೂಡಲಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts