More

    ಅಹಿಂಸೆ, ಸತ್ಯ, ಬ್ರಹ್ಮಚರ್ಯ ಇಂದಿಗೂ ಪೂರಕ

    ಶ್ರವಣಬೆಳಗೊಳ : ಬದುಕು ಬದುಕಲು ಬಿಡು ಎಂಬ ಭಗವಾನ್ ಮಹಾವೀರ ತೀರ್ಥಂಕರರ ಸಂದೇಶವು ಇಂದಿಗೂ ಪ್ರಚಲಿತವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಸಮಾಜಕ್ಕೆ ಅತ್ಯವಶ್ಯಕವಾಗಿದೆ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀಮದ್ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

    ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನವ ಚಾರುಶ್ರೀಗಳವರ ಪ್ರಥಮ ವರ್ಷದ ಪಟ್ಟಾಭಿಷೇಕ ವರ್ಧಂತೋತ್ಸವ ಹಾಗೂ 2636ನೇ ಮಹಾವೀರ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಅಹಿಂಸೆ, ಸತ್ಯ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ ಈ ಸಂದೇಶಗಳು ಅಂದಿನಿಂದಲೂ ಇಂದಿನವರೆಗೂ ಮನುಷ್ಯ ಜೀವನಕ್ಕೆ ಪೂರಕವಾಗಿವೆ. ಶ್ರಾವಕರು ಸನ್ಯಾಸ ಜೀವನ ನಡೆಸುವುದು ಸಾಧ್ಯವಾಗದಿದ್ದರೂ, ಸಂಸಾರ ಜೀವನದಲ್ಲೇ ಮಹಾವೀರರ ದಿವ್ಯ ಸಂದೇಶಗಳನ್ನು, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.

    ನಮ್ಮ ದೀಕ್ಷಾ ಗುರುಗಳಾದ ಕರ್ಮ ಯೋಗಿ ಸೃಷ್ಟಿಸಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಇಚ್ಛಾಶಕ್ತಿ ಅಪಾರವಾದದ್ದು, ಅವರ ಆಶೀರ್ವಾದದಿಂದ ಕ್ಷೇತ್ರದ ಪೀಠಾಧ್ಯಕ್ಷರಾಗಿ ಮಠದ ಅಭಿವೃದ್ಧಿ ಹಾಗೂ ಧರ್ಮಕಾರ್ಯ ಮಾಡಲು ಶಕ್ತಿ ತುಂಬಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಮಾಜ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

    ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ಸಿಂಹಾಸನ ಪೂಜೆ, ಶ್ರೀಗಳವರ ಪ್ರಥಮ ವರ್ಷದ ವಾರ್ಷಿಕ ಪಟ್ಟಾಭಿಷೇಕ ವರ್ಧಂತೋತ್ಸವ, ನಂತರ ಭಗವಾನ್ ಮಹಾವೀರ ತೀರ್ಥಂಕರರ ಮೂರ್ತಿಯನ್ನು ರಜತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಶ್ರೀಮಠದ ಆವರಣದಿಂದ ಮಂಗಳವಾದ್ಯ, ಚಿಟ್ಟಿಮೇಳ, ಚಂಡೆವಾದ್ಯ ಹಾಗೂ ನಗಾರಿ ವಾದನಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

    ಆಚಾರ್ಯಶ್ರೀ 108 ಅಂತರ್ಮನ ಪ್ರಸನ್ನಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts