More

    ರೈತರ ಟ್ರ್ಯಾಕ್ಟರ್ ರ‍್ಯಾಲಿ ರದ್ದಿಲ್ಲ; 2024ರವರೆಗೂ ಪ್ರತಿಭಟನೆ ಮುಂದುವರಿಕೆ, ಕೇಂದ್ರಕ್ಕೆ ರೈತರ ಎಚ್ಚರಿಕೆ..

    ನವದೆಹಲಿ: ಮೂರು ಕೃಷಿ ಕಾಯ್ದೆಯನ್ನು ಸರ್ಕಾರ ಹಿಂಪಡೆಯದಿದ್ದರೆ 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ದಿನದ ಟ್ರಾ್ಯಕ್ಟರ್ ರ್ಯಾಲಿಯನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ನಿರಶನವು ಕೇವಲ ಪ್ರತಿಭಟನೆಯಲ್ಲ. ಇದು ಸೈದ್ಧಾಂತಿಕ ಕ್ರಾಂತಿ. ಇದನ್ನು ನಾವು ಮುಂದಿನ ಲೋಕಸಭಾ ಚುನಾವಣೆಯವರೆಗೂ ನಡೆಸಲು ಸಿದ್ಧರಿದ್ದೇವೆ ಎಂದು ಭಾರತೀಯ ಕಿಸಾನ್ ಸಂಘದ (ಬಿಕೆಯು) ನೇತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ನಾಗಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಜತೆ ಮಂಗಳವಾರ ಮಾತುಕತೆ ನಡೆಸುವುದಿಲ್ಲ. ಈ ಪ್ರತಿಭಟನೆಗೆ ಶ್ರೀಮಂತ ರೈತರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ರೈತರು ಹಳ್ಳಿಗಳಿಂದ ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ವಿವಿಧ ಸಂಘಟನೆಗಳು ನಿರಶನದಲ್ಲಿ ಭಾಗಿಯಾಗಿವೆ ಎಂದಿದ್ದಾರೆ.

    ಈ ಮಧ್ಯೆ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಸುಪ್ರೀಂಕೋರ್ಟ್ ಕಾಯ್ದೆಗಳ ಜಾರಿಗೆ ತಡೆಯಾಜ್ಞೆ ನೀಡಿದೆ. ಈಗಲಾದರೂ ಪ್ರತಿಭಟನಾಕಾರರು ಮೊಂಡುತನ ಬಿಡಬೇಕು. ಕಾಯ್ದೆಗಳಲ್ಲಿ ಆಕ್ಷೇಪ ಇರುವ ಅಂಶಗಳನ್ನು ಜ. 19ರ ಸಭೆಯಲ್ಲಿ ಒಂದೊಂದಾಗಿ ರ್ಚಚಿಸಲು ಮುಂದಾಗಬೇಕು. ಕಾಯ್ದೆ ಹಿಂಪಡೆಯವುದಕ್ಕೆ ಪರ್ಯಾಯ ಆಯ್ಕೆ ಬಗ್ಗೆ ಸರ್ಕಾರ ಗಂಭೀರವಾಗಿದೆ ಮತ್ತು ಮುಕ್ತವಾಗಿ ರ್ಚಚಿಸಲು ಸಿದ್ಧವಿದೆ ಎಂದಿದ್ದಾರೆ. ರೈತರ ಅಪೇಕ್ಷೆಗೆ ಅನುಗುಣವಾಗಿ ಸರ್ಕಾರ ಕೆಲವೊಂದು ವಿಷಯದಲ್ಲಿ ರಾಜಿಯಾಗಿದೆ. ಆದರೆ, ರೈತರು ಕಾಯ್ದೆಗಳನ್ನು ಹಿಂಪಡೆಯುವುದನ್ನು ಬಿಟ್ಟು ಬೇರೆ ಮಾತನ್ನಾಡುತ್ತಿಲ್ಲ ಎಂದು ತೋಮರ್ ಹೇಳಿದ್ದಾರೆ.

    ಇಂದು ಕೋರ್ಟ್ ವಿಚಾರಣೆ

    ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಆಕ್ಷೇಪಣೆಗಳ ಪರಾಮರ್ಶೆ ನಡೆಸುವಂತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯಿಂದ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭೆಯ ಮಾಜಿ ಸಂಸದ ಭೂಪಿಂದರ್ ಸಿಂಗ್ ಮಾನ್ ಹೊರಬಂದ ಹಿನ್ನೆಲೆಯಲ್ಲಿ ಹೊಸ ಸದಸ್ಯನ ನೇಮಕ ಮಾಡುವ ಕುರಿತು ಸುಪ್ರೀಂಕೋರ್ಟ ಸೋಮವಾರ ವಿಚಾರಣೆ ನಡೆಸಲಿದೆ. ಸಮಿತಿಯಲ್ಲಿರುವ ಎಲ್ಲಾ ಸದಸ್ಯರು ಕಾನೂನಿನ ಪರ ಧೋರಣೆ ಹೊಂದಿರುವುದರಿಂದ ಸಮಿತಿ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದರು. ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ರ‍್ಯಾಲಿ ಮೂಲಕ ಬರಲಿದ್ದೇವೆ ಎಂದೂ ತಿಳಿಸಿದ್ದರು. ಈ ರಾಲಿಗೆ ತಡೆ ನೀಡಬೇಕು ಎಂದು ಪೊಲೀಸ್ ಇಲಾಖೆ ಮೂಲಕ ಕೇಂದ್ರ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ವಿಚಾರಣೆ ನಡೆಸಲಿದೆ. ಕೇಂದ್ರದ ಅರ್ಜಿಗೆ ಉತ್ತರಿಸಿ ಆಕ್ಷೇಪಣೆ ಸಲ್ಲಿಸಿರುವ ರೈತ ಸಂಘಟನೆಗಳು, ಸಮಿತಿಗೆ ತಟಸ್ಥ ಧೋರಣೆ ಹೊಂದಿರುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಆಯ್ದ ರೈತ ಸಂಘಟನೆಗಳ ಮುಖಂಡರನ್ನು ಸದಸ್ಯರನ್ನಾಗಿ ಮಾಡಬೇಕು. ಸಮಿತಿಯಲ್ಲಿ ಈಗ ಇರುವ ಸದಸ್ಯರು ನಿಷ್ಪಕ್ಷಪಾತ ವರದಿ ನೀಡುತ್ತಾರೆಂಬ ಭರವಸೆ ಇಲ್ಲ ಎಂದು ತಿಳಿಸಿವೆ.

    ಅಂಬಾನಿ-ಅದಾನಿಗೂ ತಟ್ಟಿದ ಪ್ರತಿಭಟನೆ ಬಿಸಿ!

    ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಗಳಂತಹ ಶ್ರೀಮಂತರು ಹೊಸ ಕೃಷಿ ಕಾಯ್ದೆಗಳ ಫಲಾನುಭವಿಗಳು ಎಂದು ಪ್ರತಿಭಟನಾನಿರತ ರೈತರು ಆರೋಪಿಸುತ್ತಿದ್ದಾರೆ. ಇವರ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುವ, ಆಸ್ತಿಗಳನ್ನು ಹಾನಿಮಾಡುವ ಕೃತ್ಯವನ್ನೂ ಹಲವೆಡೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಕಂಪನಿಯ ಷೇರುಮೌಲ್ಯದಲ್ಲಿ ಇಳಿಕೆ ಕಂಡುಬರುತ್ತಿದೆ. ಇದರಿಂದ ಅವರ ಒಟ್ಟೂ ಆಸ್ತಿ ಮೌಲ್ಯದಲ್ಲೂ ಇಳಿಕೆ ಕಂಡುಬಂದಿದೆ.

    ಆರ್​ಟಿಐ ಅರ್ಜಿಯನ್ನು ನೀತಿ ಆಯೋಗ ತಿರಸ್ಕರಿಸಿದ್ದಕ್ಕೆ ಟೀಕೆ

    ಕೃಷಿ ಸುಧಾರಣೆ ಕುರಿತ ಕರಡು ಕಾನೂನಿನ ಬಗ್ಗೆ 2019ರ ಸೆಪ್ಟೆಂಬರ್​ನಲ್ಲಿ ಮುಖ್ಯಮಂತ್ರಿಗಳ ಜತೆ ನಡೆಸಿದ ಚರ್ಚೆಯ ಅಂಶ ಏನು ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಸಲ್ಲಿಸಿದ ಅರ್ಜಿಯನ್ನು ನೀತಿ ಆಯೋಗ ತಿರಸ್ಕರಿಸಿರುವುದು ವಿಚಿತ್ರ ನಡೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ. ನೀತಿ ಆಯೋಗ ಈ ಸಭೆ ನಡೆಸಿದ ಒಂದು ವರ್ಷದ ತರುವಾಯ ಮೂರು ಕೃಷಿ ಮಸೂದೆಗಳಿಗೆ ಸಂಸತ್ ಅನುಮೋದನೆ ನೀಡಿದೆ. ಆದರೆ, ಮುಖ್ಯಮಂತ್ರಿಗಳ ಸಭೆಯಲ್ಲಿ ಏನು ನಡೆಯಿತು ಎಂಬುದನ್ನು ಏಕೆ ಬಹಿರಂಗಗೊಳಿಸುತ್ತಿಲ್ಲ? ಈ ಸಭೆಯ ಕುರಿತ ವರದಿಯನ್ನು ನೀತಿ ಆಯೋಗದ ಆಡಳಿತ ಮಂಡಳಿಗೆ ಏಕೆ ಸಲ್ಲಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ. ಆರ್​ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಈ ಅರ್ಜಿಯನ್ನು ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts