More

    ನಿಖಿಲ್ ಕುಮಾರಸ್ವಾಮಿ ಬಿರುಸಿನ ಪ್ರಚಾರ

    ಮದ್ದೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡುವ ಮೂಲಕ ಬಡವರು ಮತ್ತು ಸಾಮಾನ್ಯ ವರ್ಗದ ಕುಟುಂಗಳಿಗೆ ಶಾಶ್ವತವಾಗಿ ನೆಮ್ಮದಿ ದೊರಕಿಸಿಕೊಟ್ಟ ಹೃದಯವಂತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರ್‌ಸ್ವಾಮಿ ಹೇಳಿದರು.

    ಮಂಡ್ಯ ಲೋಕಸಭೆಯ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಪರ ಗುರುವಾರ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸುಡುವ ಬಿಸಿಲು ಲೆಕ್ಕಿಸದೆ ಬಿರುಸಿನ ಮತಪ್ರಚಾರ ನಡೆಸಿ ಮಾತನಾಡಿದರು.

    ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಲಾಟರಿ, ಸಾರಾಯಿ ನಿಷೇದ, 2 ಬಾರಿ ರೈತರ ಸಾಲಮನ್ನಾ ಮಾಡಿದ್ದಾರೆ. ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿಕೊಟಿದ್ದಾರೆ ಎಂದರು.

    ರೈತರಿ ಮತ್ತು ಜನರಿಗೆ ಕೇವಲ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಎಷ್ಟು ದಿನಗಳ ಕಾಲ ಸುಳ್ಳಿನ ಕಂತೆಯಲ್ಲೇ ಕಾಲ ಕಳೆಯಲಿದೆ. ಜನಸಾಮಾನ್ಯರು ಸಂಕಷ್ಟ ಪರಿಸ್ಥಿತಿಯಲ್ಲಿದ್ದರೂ ನೆರವಿಗೆ ಧಾವಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

    ಮೇಕೆದಾಟು ಅಣೆಕಟ್ಟೆ ನಿರ್ಮಿಸುವುದಾಗಿ ಹೇಳಿಕೆ ನೀಡಿದ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಇದುವರೆವಿಗೂ ಯಾವುದೇ ಕಾರ್ಯಕ್ಕೆ ಮುಂದಾಗದಿರುವುದು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ. ನಮ್ಮ ನೀರು ಬೇರೆಯವರ ಪಾಲಾಗುತ್ತಿದ್ದು, ಕೇವಲ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ನಡೆಸಿ ನೃತ್ಯ ಮಾಡಿ ತೆರಳಿದ್ದೆ ನಿಮ್ಮ ಸಾಧನೆ ಎಂದು ಟೀಕಿಸಿದರು.

    ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚುವಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ದೇಶದ ರಕ್ಷಣೆ ಅಭಿವೃದ್ಧಿ ವಿಚಾರದಲ್ಲಿ ದಿನದ 24 ಗಂಟೆಯೂ ದುಡಿಯುತ್ತಿರುವ ವಿಶ್ವನಾಯಕ ಮೋದಿ ಅವರ ಕೈ ಬಲ ಪಡಿಸಬೇಕೆಂದು ಕೋರಿದರು.

    ಬಿರುಸಿನ ಮತ ಪ್ರಚಾರ: ತಾಲೂಕಿನ ನಿಡಘಟ್ಟ, ಸೋಮನಹಳ್ಳಿ, ಹೆಮ್ಮನಹಳ್ಳಿ, ಕೆಸ್ತೂರು, ಮಲ್ಲನಕುಪ್ಪೆ, ಮುದಿಗೆರೆ, ಬೆಸಗರಹಳ್ಳಿ, ವಳಗೆರೆಹಳ್ಳಿ, ಗೆಜ್ಜಲಗೆರೆ ಹಾಗೂ ಸಾದೊಳಲು, ನಗರಕೆರೆ ಇನ್ನಿತರ ಗ್ರಾಮಗಳಲ್ಲಿ ಸ್ಥಳೀಯ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನೇತೃತ್ವದಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ತಂದೆಯ ಪರವಾಗಿ ಮತಯಾಚನೆ ಕೈಗೊಂಡರು. ಹೋದ ಕಡೆಯಲ್ಲ ಪಟಾಕಿ ಸಿಡಿಸಿ, ಭಾರಿ ಗಾತ್ರದ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡು ನಿಖಿಲ್‌ಕುಮಾರ್ ಸ್ವಾಮಿ ಅವರಿಗೆ ಎಳನೀರು, ಮಜ್ಜಿಗೆ ನೀಡಿ ಸ್ವಾಗತಿಸಲಾಯಿತು.

    ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಜಿ.ಪಂ. ಮಾಜಿ ಸದಸ್ಯ ರವಿ, ಜೆಡಿಎಸ್ ಘಟಕದ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮಯ್ಯ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ ಸತೀಶ್, ಮುಖಂಡರಾದ ಎಂ.ಸಿ ಸಿದ್ದು, ನಾಗೇಶ್, ಸಿ.ಡಿ.ಸಂತೋಷ್, ಅಭಿಷೇಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts