

ಹುಬ್ಬಳ್ಳಿ: ರಾಜ್ಯದ ಜನತೆಗೆ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗವನ್ನು ಕೊಡುಗೆಯಾಗಿ ನೀಡಿರುವ ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕ್ಷಮೆ ಯಾತ್ರೆ ನಡೆಸಬೇಕು. ಶೇ.40ರಷ್ಟು ಕಮೀಷನ್ ಪಡೆದಿದ್ದಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಕ್ಕೆ, ಯುವಕರಿಗೆ ಉದ್ಯೋಗ ನೀಡದಿದ್ದಕ್ಕೆ ಬಿಜೆಪಿಯವರು ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಕಳೆದ 4 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಒಟ್ಟು 23000 ರೌಡಿ ಶೀಟರ್ಗಳಿಗೆ ಕ್ಲೀನ ಚಿಟ್ ನೀಡಿದೆ. ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ತಧಾನಿ ಮೋದಿ ಅವರು ರೌಡಿ ಶೀಟರ್ ಫೈಟರ್ ರವಿಗೆ ಕೈ ಮುಗಿದು ನಮಸ್ಕರಿಸಿದ್ದು ದುರ್ದೈವ. ಫೈಟರ್ ರವಿಯನ್ನು ಪ್ರಧಾನಿ ಬಳಿ ಬಿಟ್ಟಿದ್ದು ಯಾರು ಎಂಬುದು ಬಹಿರಂಗವಾಗಬೇಕು ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾ. 20 ಅಥವಾ 22ರಂದು ಬಿಡುಗಡೆ ಮಾಡುತ್ತೇವೆ. ಮೊದಲ ಪಟ್ಟಿಯಲ್ಲಿ 120-130 ಅಭ್ಯರ್ಥಿಗಳ ಹೆಸರು ಇರಲಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಮಾ.20 ರಂದು ಆಯೋಜಿಸಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳುವರು. ಅಂದು ಸುಮಾರು 2 ಲಕ್ಷ ಯುವಕರು ಸೇರುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಮಾಜಿ ಶಾಸಕ ಎನ್. ಎಚ್. ಕೊನರಡ್ಡಿ, ಮೋಹನ ಲಿಂಬಿಕಾಯಿ, ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ ಇದ್ದರು.