

ಚಿತ್ರದುರ್ಗ: ಜೆಡಿಎಸ್, ಕಾಂಗ್ರೆಸ್, ಬಿಜೆಪಿ (ಜೆಸಿಬಿ) ಕಿತ್ತೊಗೆದು ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡುವ ಹೊಸಬರಿಗೆ ಅವಕಾಶ ನೀಡಿ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
ಭ್ರಷ್ಟಾಚಾರದ ವಿರುದ್ಧ ಎಎಪಿ ಹಮ್ಮಿಕೊಂಡಿದ್ದ ನಿರಶನದಲ್ಲಿ ಗುರುವಾರ ಮಾತನಾಡಿ, ಬಿಟ್ ಕಾಯಿನ್, ಕಾಮಗಾರಿಗಳಲ್ಲಿ ಶೇ. 40-50 ಪರ್ಸೆಂಟೇಜ್, ಅಕ್ರಮ ಗಣಿಗಾರಿಕೆ, ಮುಡಾ, ವಾಲ್ಮೀಕಿ ಹೀಗೆ ಸಾಲು-ಸಾಲು ಹಗರಣಗಳು ನಡೆಯುತ್ತಿವೆ. ಕಡಿವಾಣ ಬಿದ್ದಿಲ್ಲ ಎಂದು ಆರೋಪಿಸಿದರು.
ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಹಾಲಿ ಸಿಎಂ ಸಿದ್ದರಾಮಯ್ಯ, ಶಾಸಕರಾದ ಗಾಲಿ ಜನಾರ್ದನರೆಡ್ಡಿ, ನಾಗೇಂದ್ರ ಹೀಗೆ ಹಲವರ ಮೇಲೆ ಆರೋಪಗಳಿವೆ. ಆದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ದೇಶ ಮತ್ತು ರಾಜ್ಯದ ಸಂಪತ್ತು, ಜನರ ದುಡ್ಡು ನುಂಗುವವರು ಮಾತ್ರ ಜಾಮೀನಿನ ಮೂಲಕ ಹೊರಬಂದು ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಮ್ಮೆಗೇ ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಎಎಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ನಮ್ಮ ಪಕ್ಷವನ್ನೇ ಬೆಂಬಲಿಸುವಂತೆ ಕೇಳಿಕೊಳ್ಳುತ್ತಿಲ್ಲ. ರಾಷ್ಟ್ರದಲ್ಲಿ ರೈತರ, ಕಾರ್ಮಿಕರ, ಜನಸಾಮಾನ್ಯರ ಕುರಿತು ಕಾಳಜಿಯುಳ್ಳ ಹೊಸ ಪಕ್ಷ, ಅಭ್ಯರ್ಥಿಗಳನ್ನು ಚುನಾವಣಾ ಸಂದರ್ಭದಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದರು.