ಚಿರತೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ

18 kdr 2 chita
ಮಚ್ಚೇರಿಯ ಬಳಿ ರಾತ್ರಿ ವೇಳೆ ಕಾಣಿಸಿಕೊಂಡ ಚಿರತೆ
Published on

ಕಡೂರು: ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾದರೆ ಇತ್ತ ಕಡೂರಿನ ಬಯಲುಸೀಮೆ ಭಾಗದಲ್ಲಿ ಚಿರತೆಗಳ ತೊಂದರೆ ಹೆಚ್ಚಾಗಿದ್ದು ಅವುಗಳ ಸೆರೆಗೆ ಅರಣ್ಯ ಇಲಾಖೆ ನಿರ್ಲಕ್ಷೃತನ ವಹಿಸುತ್ತಿರುವುದು ತಾಲೂಕಿನ ಸುತ್ತಮುತ್ತಲ ಭಾಗಗಳ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಬಹುತೇಕ ಗಡಿಭಾಗದ ಬಯಲು ಪ್ರದೇಶಗಳ ಗುಡ್ಡಗಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ಇದೀಗ ಪಟ್ಟಣ ಸಮೀಪದ ಗ್ರಾಮಗಳು ಸೇರಿದಂತೆ ಬೈಪಾಸ್ ರಸ್ತೆಗಳ ಮಾರ್ಗದಲ್ಲಿ ಲಗ್ಗೆ ಇಡುತ್ತಿರುವುದು ವಾಹನ ಸವಾರರು ಸೇರಿದಂತೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ಎಮ್ಮೆದೊಡ್ಡಿ ಪ್ರದೇಶದ ವ್ಯಾಪ್ತಿಯ ಗ್ರಾಮದಲ್ಲಿ ಚಿರತೆಯು ಇಬ್ಬರ ಮೇಲೆ ದಾಳಿ ನಡೆಸಿರುವ ಘಟನೆಯಿಂದ ಇಂದಿಗೂ ಎಮ್ಮೆದೊಡ್ಡಿ ಭಾಗದ ಜನತೆ ಭಯಭೀತರಾಗಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಬೋನ್ ಇಟ್ಟರೂ ಇದುವರೆಗೂ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲರಾಗಿದ್ದಾರೆ. ತಾಲೂಕಿನ ಹಲವು ಭಾಗಗಳಲ್ಲಿ ಚಿರತೆ ಕಾಣಿಸಿಕೊಳ್ಳುವುದು, ಸಾಕು ಪ್ರಾಣಿಗಳನ್ನು ಕೊಲ್ಲುವುದು ಸಾಮಾನ್ಯವಾಗಿದೆ.

ತಾಲೂಕಿನ ಮಚ್ಚೇರಿ, ಕುಂದೂರು ಗ್ರಾಮಗಳಲ್ಲಿ ಮನೆಯೊಂದರ ಮುಂದೆ ಚಿರತೆ ಓಡಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮಚ್ಚೇರಿ ಗ್ರಾಮದ ಬಹುತೇಕ ಜನರು ಸೊಪ್ಪು ವ್ಯಾಪಾರಕ್ಕೆಂದು ಬೆಳಗಿನ ಜಾವ 2 ಗಂಟೆಗೆ ಕಡೂರು-ಚಿಕ್ಕಮಗಳೂರಿಗೆ ಹೋಗುತ್ತಾರೆ. ಕಳೆದ ಶನಿವಾರ ಬೆಳಗ್ಗೆ ಕಾರಿನಲ್ಲಿ ಹೊರಟ ಒಬ್ಬರಿಗೆ ಗ್ರಾಮದ ಅಂಚಿನಲ್ಲಿರುವ ಗೌಡರ ಚಂದ್ರಪ್ಪ ಎಂಬುವವರ ಮನೆಯ ಮುಂದೆ ಕುಳಿತ್ತಿದ್ದ ದೊಡ್ಡ ಚಿರತೆ ಕಂಡು ಬಂದಿದ್ದು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ನಿಧಾನವಾಗಿ ಸಾಗಿ ಅಲ್ಲಿದ್ದ ಕುರುಚಲು ಗಿಡಗಳ ನಡುವೆ ಮರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net