

ಮೂಡಿಗೆರೆ: ರೈತರು ಗುಣಮಟ್ಟದ ಬಿತ್ತನೆ ಬೀಜ ಖರೀದಿಸುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್ ಹೇಳಿದರು.
ಕೃಷಿ ಇಲಾಖೆ ಕಚೇರಿಯಲ್ಲಿ ಭಾನುವಾರ ರೈತರಿಗೆ ಬಿತ್ತನೆ ಭತ್ತದ ಬೀಜ ವಿತರಿಸಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಭತ್ತವನ್ನು ನಷ್ಟದ ಬೆಳೆ ಎಂದು ಗುರುತಿಸಲಾಗಿದೆ. ಖರ್ಚು ಕಡಿಮೆ ಮಾಡಿ ಇಳುವರಿ ಹೆಚ್ಚು ಪಡೆಯುವ ರೀತಿಯಲ್ಲಿ ರೈತರು ಕೃಷಿಯಲ್ಲಿ ತೊಡಗಬೇಕು. ಹಾಗಾದರೆ ಮಾತ್ರ ಭತ್ತ ಬೆಳೆಯಲ್ಲಿ ಲಾಭ ಗಳಿಸಲು ಸಾಧ್ಯ. ರೈತರು ಕೃಷಿ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಗುಣಮಟ್ಟದ ಬಿತ್ತನೆ ಬೀಜ ಖರೀದಿಸಿ ಸಸಿಮಡಿ ತಯಾರಿಸಿಕೊಳ್ಳಬೇಕು. ಇದರಿಂದ ಇಳುವರಿ ಹೆಚ್ಚಾಗಿ ರೈತರು ಲಾಭ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಕೃಷಿಕ ಪಿ.ಕೆ.ನಾಗೇಶ್ ಮಾತನಾಡಿ, ಭತ್ತದ ಬೆಳೆಯಲ್ಲಿ ಬೀಜೋಪಚಾರ ಮುಖ್ಯ. ಗದ್ದೆಯಲ್ಲಿ ನೀರಾವರಿ ವ್ಯವಸ್ಥೆಗೆ ಅನುಗುಣವಾಗಿ ಬೀಜದ ಭತ್ತವನ್ನು ಖರೀದಿಸಬೇಕು. ಮಲೆನಾಡಿಗೆ ಸೂಕ್ತವಾದ ಹೊಸ ತಳಿಯ ಬಿತ್ತನೆ ಬೀಜಗಳು ಬಂದಿವೆ. ಅವುಗಳನ್ನು ಪಡೆದು ಸಸಿಮಡಿ ತಯಾರಿಸಿ ನಾಟಿ ಕಾರ್ಯದಲ್ಲಿ ತೊಡಗಬೇಕು. ಭತ್ತದ ಬೆಳೆಯಲ್ಲಿ ಹೆಚ್ಚು ಲಾಭ ಪಡೆಯಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕೃಷಿಕ ಸಮಾಜದ ಪದಾಧಿಕಾರಿಗಳಾದ ಬಿ.ಕೆ.ಚಂದ್ರಶೇಖರ್, ರಮೇಶ್ ಆಚಾರ್, ಬಿ.ಆರ್.ಯತೀಶ್, ರಮೇಶ್, ದೇವರುಂದ, ಜಗನ್ನಾಥ್, ಹೆಸಗಲ್ ಗಿರೀಶ್, ಪುಟ್ಟಸ್ವಾಮಿ ಗೌಡ, ಸತೀಶ್ ಊರುಬಗೆ, ಕುಮಾರ್ ಇತರರಿದ್ದರು.