

ಬೆಂಗಳೂರು: 2016ರಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲವನ್ನ ಸೃಷ್ಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ್ ಕುಲಕರ್ಣಿ (Vinay Kulkarni) ಹೆಸರು ಕೇಳಿ ಬಂದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು, ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ಹೇಳಿಕೆ ದಾಖಲಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ವಿನಯ್ ಕುಲಕರ್ಣಿ (Vinay Kulkarni) ಆಪ್ತ ಹೊಸ ಸಂಚಲವನ್ನ ಸೃಷ್ಟಿಸಿದ್ದು, ಈ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.
ವಿನಯ್ ಕುಲಕರ್ಣಿ ಪಾತ್ರದ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿರುವ ಬಸವರಾಜ್ ಮುತ್ತಗಿ, ಯೋಗೇಶ್ ಗೌಡ ಹತ್ಯೆಗೆ ಸಂಬಂಧಿಸಿದಂತೆ ಧಾರವಾಡದ ಯುವಕರು ಒಪ್ಪಿಗೆ ಸೂಚಿಸದಿದ್ದಾಗ ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಬೆಂಗಳೂರಿನಿಂದ ಕರೆಸಿ ಸಂಚು ರೂಪಿಸಿ ಯೋಗೇಶ್ ಗೌಡನನ್ನು ಹತ್ಯೆ ಮಾಡಿಸಲಾಯಿತು. ಯೋಗೇಶ್ ಗೌಡ ಧಾರವಾಡ ಜಿಪಂ ಸದಸ್ಯರಾಗಿದ್ದನ್ನು ಸಹಿಸದ ವಿನಯ್ ಕುಲಕರ್ಣಿ ದ್ವೇಷ ಸಾಧಿಸಲಾರಂಭಿಸಿದರು. ಈ ಕಾರಣಕ್ಕೆ ಹತ್ಯೆ ಮಾಡಿಸಲಾಯಿತು.
ಮೊದಲಿಗೆ ಧಾರವಾಡದ ಯುವಕರನ್ನು ಕರೆಸಿ ಮಾತನಾಡಲಾಯಿತು. ವಿನಯ್ ಕುಲಕರ್ಣಿ ಅವರ ವಿಚಾರ ಪ್ರಸ್ತಾಪಿಸಿದಾಗ ಯಾರು ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ಪ್ರಕರಣದ ಎಂಟನೇ ಆರೋಪಿ ದಿನೇಶ್ನನ್ನು ಭೇಟಿ ಮಾಡಿ ಈ ವಿಚಾರ ತಿಳಿಸಲಾಯಿತು. ಎರಡು ದಿನಗಳ ಕಾಲಾವಕಾಶ ಪಡೆದ ದಿನೇಶ್ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರೂ. ಬೇಡಿಕೆಯಿಟ್ಟನು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಈ ಮಾಹಿತಿಯನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯಿತು.
ದಿನೇಶ್ ಷರತ್ತಿಗೆ ಒಪ್ಪಿಗೆ ಸೂಚಿಸಿದ ವಿನಯ್ ಕುಲಕರ್ಣಿ ಹತ್ಯೆ ನಡೆದ ಬಳಿಕ ಧಾರವಾಡದ ಹುಡುಗರಿಗೆ ಶರಣಾಗಲು ಸೂಚಿಸುವ ಬಗ್ಗೆ ಹೇಳಿದ್ದರು. ಆ ಬಳಿಕ ಜೂನ್ ಮೊದಲ ವಾರದಲ್ಲಿ ಬೆಂಗಳೂರಿನಿಂದ ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಸೇರಿದಂತೆ ಇತರರು ಧಾರವಾಡಕ್ಕೆ ಬಂದರು. ಆ ಬಳಿಕ ಅವರಿಗೆ ಕಂಟ್ರಿ ಪಿಸ್ತೂಲ್ಗಳನ್ನು ನೀಡಲಾಗಿತ್ತು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎರಡು ಬಾರಿ ಹತ್ಯೆ ಯತ್ನ ನಡೆಯಿತು. ಎರಡು ಬಾರಿ ವಿಫಲವಾದ ಬಳಿಕ ಜೂನ್ 15ರಂದು ಜಿಮ್ನಲ್ಲಿ ಯೋಗೇಶ್ ಗೌಡನನ್ನು ಹತ್ಯೆ ಮಾಡಲಾಯಿತು ಎಂದು ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.