Langur Hugging Man: ಒಡಿಶಾದಲ್ಲಿ ಅಪರೂಪದ ಹಾಗೂ ಭಾವುಕ ಘಟನೆಯೊಂದು ನಡೆದಿದೆ. ಮೊಬೈಲ್ ರಿಪೇರಿ ಅಂಗಡಿಯೊಂದಕ್ಕೆ ಬಂದ ಲಂಗೂರ್ (ಲಂಗೂರ್ ಕೋತಿ) ಒಂದಷ್ಟು ಹೊತ್ತು ಅಂಗಡಿಯ ಮಾಲೀಕನನ್ನು ಶಾಂತವಾಗಿ ಅಪ್ಪಿಕೊಂಡಿದೆ. ಈ ಅಪರೂಪದ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಒಡಿಶಾದ ಮೊಬೈಲ್ ರಿಪೇರಿ ಅಂಗಡಿಯೊಂದರಲ್ಲಿ ಮಾಲೀಕ ಮತ್ತು ಸಹಾಯಕ ಎಂದಿನಂತೆ ಕೆಲಸ ಮಾಡುತ್ತಿದ್ದರು. ಈ ವೇಳೆ ತೆರೆದಿದ್ದ ಬಾಗಿಲಿನಿಂದ ಹನುಮಾನ್ ಕೋತಿ (ಲಂಗೂರ್) ಒಳಗೆ ಬಂದಿದೆ. ಇದನ್ನು ಗಮನಿಸಿದ ಸಹಾಯಕ, ಮಾಲೀಕನ ಕುರ್ಚಿಯನ್ನು ಅಲ್ಲಾಡಿಸಿ ಎಚ್ಚರಿಸಿದ್ದಾನೆ. ಆದರೆ, ಅವರು ಪ್ರತಿಕ್ರಿಯಿಸುವಷ್ಟರಲ್ಲೇ ಲಂಗೂರ್ ನೇರವಾಗಿ ಕೌಂಟರ್ ಬಳಿ ತೆರಳಿದೆ.
ಯಾವುದೇ ಕೋಪ ಅಥವಾ ಗಲಾಟೆ ಮಾಡದ ಈ ಪ್ರಾಣಿ, ಮೇಜಿನ ಮೇಲೆ ಏರಿ ಮಾಲೀಕನ ಎದೆಗೆ ತಲೆಯಿಟ್ಟು ಶಾಂತವಾಗಿ ಅಪ್ಪಿಕೊಂಡಿದೆ. ಅಂಗಡಿಯಲ್ಲಿದ್ದ ಮೊಬೈಲ್ ಬಿಡಿಭಾಗಗಳಿಗಾಗಲಿ ಅಥವಾ ವಸ್ತುವಿಗಾಗಲಿ ಯಾವುದೇ ಹಾನಿ ಮಾಡದೆ, ಕೆಲ ಸಮಯ ಸೌಮ್ಯವಾಗಿ ಅಪ್ಪಿಕೊಂಡು ಸುಮ್ಮನೆ ಕುಳಿತಿದೆ. ಮಾಲೀಕರು ಕೂಡ ಹೆದರದೆ ಶಾಂತವಾಗಿ ಲಂಗೂರ್‌ನನ್ನು ಅಪ್ಪಿಕೊಳ್ಳಲು ಬಿಟ್ಟಿದ್ದಾರೆ.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕಾಣಸಿಗುವ ಕೋತಿಗಳು ತಂಟೆ ಮಾಡುವುದು ಅಥವಾ ಆಹಾರ ಕದಿಯುವುದು ಹೆಚ್ಚು. ಆದರೆ ಈ ಲಂಗೂರ್ ತೋರಿಸಿದ ಶಾಂತ ನಡೆ ಮತ್ತು ಪ್ರೀತಿ ನೆಟ್ಟಿಗರ ಮನ ಗೆದ್ದಿದೆ.
ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದು, ಹಲವರು ‘ಇದು ದೈವಿಕ ಅನುಬಂಧ’ ಎಂದು ಬಣ್ಣಿಸಿದ್ದಾರೆ. ಹಿಂದೂ ಧರ್ಮದಲ್ಲಿ ಲಂಗೂರ್‌ಗಳನ್ನು ಹನುಮಂತನ ರೂಪವೆಂದು ಭಾವಿಸುವುದರಿಂದ, ನೆಟ್ಟಿಗರು ಇದನ್ನು ದೇವರ ಆಶೀರ್ವಾದವೆಂದು ಕೊಂಡಾಡಿದ್ದಾರೆ.