Fingers Wrinkle: ನೀವು ಸ್ನಾನ ಮಾಡುವಾಗ, ಈಜುವಾಗ ಅಥವಾ ಹೆಚ್ಚು ಹೊತ್ತು ನೀರಿನಲ್ಲಿ ಕೈ ಇಟ್ಟಾಗ ಬೆರಳಿನ ಚರ್ಮ ಸುಕ್ಕುಗಟ್ಟುವುದನ್ನು ಗಮನಿಸಿರಬಹುದು. ಮೊದಲೆಲ್ಲಾ ಚರ್ಮ ನೀರನ್ನು ಹೀರಿಕೊಂಡು ಉಬ್ಬುವುದರಿಂದ ಹೀಗಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇದರ ಹಿಂದೆ ನರಮಂಡಲದ ಪ್ರತಿಕ್ರಿಯೆ ಮತ್ತು ರಕ್ತನಾಳಗಳ ಸಂಕುಚನ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿಜ್ಞಾನ ತಿಳಿಸಿದೆ.
ಕೈಗಳು ಹೆಚ್ಚು ಹೊತ್ತು ನೀರಿನಲ್ಲಿ ಇದ್ದಾಗ ಬೆರಳಿನ ತುದಿಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನಮ್ಮ ನರಮಂಡಲದ ಒಂದು ಭಾಗವಾದ ಆಟೋನಾಮಿಕ್ ನರಮಂಡಲ (Autonomic Nervous System) ಪ್ರಮುಖ ಪಾತ್ರ ವಹಿಸುತ್ತದೆ.
ನರಮಂಡಲವು ಬೆರಳಿನ ತುದಿಯಲ್ಲಿರುವ ಸಣ್ಣ ರಕ್ತನಾಳಗಳಿಗೆ ಸೂಚನೆ ನೀಡುತ್ತದೆ. ಇದರಿಂದ ರಕ್ತನಾಳಗಳು ಸಂಕುಚಿತಗೊಂಡು, ಆ ಭಾಗದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮವಾಗಿ ಚರ್ಮ ಒಳಕ್ಕೆ ಎಳೆಯಲ್ಪಟ್ಟು ಸುಕ್ಕುಗಟ್ಟಿದಂತೆ ಕಾಣುತ್ತದೆ.
ಬೆರಳುಗಳು ಸುಕ್ಕುಗಟ್ಟುವುದರಿಂದ ಒದ್ದೆಯಾದ ವಸ್ತುಗಳನ್ನು ಹಿಡಿಯಲು ಅನುಕೂಲವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಬೆರಳಿನ ಮೇಲಿರುವ ಸುಕ್ಕುಗಳು ನೀರನ್ನು ಹೊರಹಾಕಲು ನೆರವಾಗಿ, ಜಾರುವ ವಸ್ತುಗಳ ಮೇಲಿನ ಹಿಡಿತವನ್ನು ಸುಧಾರಿಸಬಹುದು ಎಂಬ ವಿಕಾಸವಾದದ ಸಿದ್ಧಾಂತವಿದೆ. ಮಳೆಯಲ್ಲಿ ರಸ್ತೆಯ ಮೇಲಿನ ನೀರನ್ನು ಹೊರಹಾಕಿ ವಾಹನದ ಟೈರ್ಗಳಿಗೆ ಹಿಡಿತ ನೀಡುವ ಗೆರೆಗಳಂತೆ, ಬೆರಳಿನ ಸುಕ್ಕುಗಳು ಕೂಡ ಒದ್ದೆಯಾದ ಮೇಲ್ಮೈಯಲ್ಲಿ ಹಿಡಿತಕ್ಕೆ ನೆರವಾಗಬಹುದು ಎನ್ನಲಾಗಿದೆ.
ನೀರಿನಿಂದ ಕೈ ಹೊರತೆಗೆದು ಒಣಗಿಸಿದ ಬಳಿಕ ರಕ್ತನಾಳಗಳು ಮತ್ತೆ ಸಹಜ ಸ್ಥಿತಿಗೆ ಮರಳುತ್ತವೆ. ಇದರಿಂದ ಬೆರಳಿನ ಚರ್ಮವೂ ನಿಧಾನವಾಗಿ ಮೊದಲಿನಂತಾಗುತ್ತದೆ. ಸಾಮಾನ್ಯವಾಗಿ ಇದು ತಾತ್ಕಾಲಿಕ ಬದಲಾವಣೆಯಾಗಿದ್ದು, ಕೆಲವೇ ಸಮಯದಲ್ಲಿ ಸುಕ್ಕುಗಳು ಮಾಯವಾಗುತ್ತವೆ.